ಹಿಂದುಳಿದ ವರ್ಗದ ಅಭ್ಯರ್ಥಿ ಮೆರಿಟ್ ಪಡೆದ ಅಭ್ಯರ್ಥಿಗಳಿಗೆ ಸರಿಸಮನಾಗಿ ಅಂಕ ಗಳಿಸಿದರೆ, ಆ ವಿದ್ಯಾರ್ಥಿಯ ಪ್ರವೇಶ / ಆಯ್ಕೆ ಸಾಮಾನ್ಯ ವರ್ಗದ ವ್ಯಾಪ್ತಿಯಲ್ಲಿರಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ, ಆದರೆ ಮೀಸಲಾತಿಯಡಿ ಪ್ರವೇಶ ಬಯಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲು ವರ್ಗ ಮುಕ್ತವಾಗಿದೆ ಎಂದು ಅದು ಸ್ಪಷ್ಟಪಡಿಸಿದೆ. (ತಮಿಳುನಾಡು ಸರ್ಕಾರ ಮತ್ತು ಕೆ ಶೋಭನಾ ನಡುವಣ ಪ್ರಕರಣ)
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ದಿನೇಶ್ ಮಹೇಶ್ವರಿ ಮತ್ತು ಹೃಷಿಕೇಶ ರಾಯ್ ಅವರಿದ್ದ ಪೀಠ 2016ರ ತಮಿಳುನಾಡು ಸರ್ಕಾರಿ ನೌಕರರ (ಸೇವಾ ಷರತ್ತುಗಳು) ಕಾಯಿದೆ ಸೆಕ್ಷನ್ 27 (ಎಫ್) ಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಮೇಲ್ಮನವಿ ಕುರಿತು ತೀರ್ಪು ನೀಡಿತು.
ಪ್ರಕರಣದ ಪ್ರತಿವಾದಿಗಳು ಗ್ರೇಡ್ 1 ಸ್ನಾತಕೋತ್ತರ ಸಹಾಯಕ ಮತ್ತು ದೈಹಿಕ ದೈಹಿಕ ಶಿಕ್ಷಣ ನಿರ್ದೇಶಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ನೇಮಕಾತಿಯ ತಾತ್ಕಾಲಿಕ ಪಟ್ಟಿ ಪರಿಶೀಲಿಸಿದಾಗ ಯಾವುದೇ ಮೀಸಲಾತಿ ಲೆಕ್ಕಿಸದೆ ಮೆರಿಟ್ ಅಂಕ ಪಡೆದವರನ್ನು ಅತ್ಯಂತ ಹಿಂದುಳಿದ ವರ್ಗದ (ಎಂಬಿಸಿ) ಕೋಟಾದಡಿ ಆಯ್ಕೆ ಮಾಡಿರುವುದು ಕಂಡುಬಂದಿತು. ಈ ಅಭ್ಯರ್ಥಿಗಳನ್ನು ಸಾಮಾನ್ಯ ಖಾಲಿ ಹುದ್ದೆಗಳ ಅಡಿಯಲ್ಲಿ ಪರಿಗಣಿಸದೆ ಎಂಬಿಸಿ / ಡಿನೋಟಿಫೈಡ್ ಕಮ್ಯುನಿಟಿ (ಡಿಎನ್‌ಸಿ) ಕೋಟಾದಡಿ ನೇಮಕ ಮಾಡಲಾಗಿತ್ತು. ಸಾಮಾನ್ಯ ಕೋಟಾ ಬದಲಿಗೆ ಎಂಬಿಸಿ / ಡಿಎನ್‌ಸಿ ಕೋಟಾದಡಿ ಈ ಅಭ್ಯರ್ಥಿಗಳನ್ನು ನೇಮಕ ಮಾಡಿರುವುದರಿಂದ ತಮಗೆ ಹುದ್ದೆ ಲಭಿಸಿಲ್ಲ ಎಂಬುದು ಪ್ರತಿವಾದಿಗಳ ವಾದವಾಗಿತ್ತು. ಇತ್ತ ತಮಿಳುನಾಡು ಸರ್ಕಾರ, ಸೆಕ್ಷನ್ 27ಕ್ಕೂ ಮೆರಿಟ್ ಆಧಾರದ ನೇಮಕಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಮೀಸಲಾತಿ ವಿಧಾನಕ್ಕೆ ಮಾತ್ರ ಅನ್ವಯವಾಗುತ್ತದೆ ಎಂದು ವಾದಿಸಿತ್ತು.
ಆದರೆ ಸುಪ್ರೀಂಕೋರ್ಟ್ “ಮೀಸಲಾತಿಗೆ ಒಳಪಡುವ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳ ಸಂಖ್ಯೆ ಅಗತ್ಯಕ್ಕೆ ತಕ್ಕಷ್ಟು ಇಲ್ಲದಿದ್ದರೆ, ಪ್ರಸಕ್ತ ವರ್ಷದಲ್ಲಿ ಆಯ್ಕೆ ಮಾಡಲಾಗದ ಖಾಲಿ ಹುದ್ದೆಗಳನ್ನು ಬ್ಯಾಕ್‌ಲಾಗ್ ಎಂದು ಪರಿಗಣಿಸಬೇಕು ಎಂದು ಸೆಕ್ಷನ್ 27 (ಎಫ್) ಹೇಳುತ್ತದೆ ಎಂಬುದನ್ನು ಗಮನಿಸಿತು. ಜೊತೆಗೆ ಹಿಂದಿನ ತೀರ್ಪುಗಳ ಆಧಾರದಲ್ಲಿ ಸಾಮಾನ್ಯ ವರ್ಗದಡಿ ಪ್ರವೇಶಾತಿ ಪಡೆಯುವಷ್ಟು ಅಂಕಗಳಿರುವ ಅಭ್ಯರ್ಥಿಗಳನ್ನು ಸಾಮಾನ್ಯವರ್ಗದಡಿ ನೇಮಕ ಮಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿತು.
“ಸೆಕ್ಷನ್ 27 ಮೀಸಲಾತಿಗೆ ಸಂಬಂಧಿಸಿದೆ. ಸಾಮಾನ್ಯ ಅಭ್ಯರ್ಥಿಗಳ ಪಟ್ಟಿ / ಜನರಲ್ ಟರ್ನ್ ಖಾಲಿ ಹುದ್ದೆಗಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಮೀಸಲು ವರ್ಗದಿಂದ ಬಂದಿದ್ದರೂ, ಮೆರಿಟ್ ಅಂಕ ಗಳಿಸಿದ ಅಭ್ಯರ್ಥಿಗಳು ಮೀಸಲಾತಿಯ ಲಾಭ ಪಡೆಯುವ ಅಗತ್ಯವಿಲ್ಲ. ಆದ್ದರಿಂದ, ಕಾಯಿದೆಯ ಸೆಕ್ಷನ್ 27ಕ್ಕೂ ಈ ಅಂಶಕ್ಕೂ ಯಾವುದೇ ಸಂಬಂಧವಿಲ್ಲ. ಮೆರಿಟ್ ಮೇರೆಗೆ ಸ್ಥಾನಗಳನ್ನು ಭರ್ತಿ ಮಾಡಿದ ನಂತರ ಮೀಸಲಾತಿ ವಿಚಾರ ಆರಂಭವಾದಾಗ ಮಾತ್ರ ಸೆಕ್ಷನ್ 27 ಅನ್ವಯವಾಗುತ್ತದೆ”ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಎಂಬಿಸಿ / ಡಿಎನ್‌ಸಿ ಅಭ್ಯರ್ಥಿಗಳ ಹೆಚ್ಚಳದಿಂದಾಗಿ ಇತರ ವರ್ಗಗಳ ಮೀಸಲಾತಿಗೆ ನಿಜವಾಗಿಯೂ ಅಡ್ಡಿಯಾಗುವುದಿಲ್ಲ, ಇದು ಭಾರತದ ಸಂವಿಧಾನದ ಯಾವುದೇ ನಿಬಂಧನೆಯನ್ನು ಉಲ್ಲಂಘಿಸುವುದಿಲ್ಲ" ಎಂದು ನ್ಯಾಯಾಲಯ ವಿವರಿಸಿತು.