ನಟಿ ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂ ನಟ-ನಿರ್ಮಾಪಕ ವಿಜಯ್ ಬಾಬು ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ವಿಜಯ್ ಬಾಬು ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].
ನ್ಯಾಯಾಲಯಗಳ ಬೇಸಿಗೆ ರಜೆ ಮುಗಿದ ಬಳಿಕ ಅರ್ಜಿ ಪರಿಶೀಲಿಸುವುದಾಗಿ ನ್ಯಾಯಮೂರ್ತಿ ಜಿಯಾದ್ ರಹಮಾನ್ ಎ ಎ ತಿಳಿಸಿದ್ದಾರೆ. ವಿಜಯ್ ಬಾಬು ಅವರು ವಕೀಲ ಎಸ್ ರಾಜೀವ್ ಅವರ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
ತಾನು ಈ ಹಂತದಲ್ಲಿ ಮಧ್ಯಂತರ ಪರಿಹಾರಕ್ಕೆ ಒತ್ತಾಯ ಮಾಡುತ್ತಿಲ್ಲ. ಇದು ಬ್ಲಾಕ್‌ಮೇಲ್ ಮಾಡುವ ಉದ್ದೇಶದಿಂದ ನೀಡಲಾದ ದೂರೇ ವಿನಾ ಬೇರೇನೂ ಅಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕವಾಗಿ ನಡೆದ ಮಾಧ್ಯಮ ವಿಚಾರಣೆ ಮತ್ತು ಊಹಾಪೋಹಗಳಿಂದ ಪೊಲೀಸರು ಪ್ರಚೋದಿತರಾಗಿದ್ದಾರೆ. ಹಾಗಾಗಿ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 438ರ ಅಡಿ ನಿರೀಕ್ಷಣಾ ಜಾಮೀನು ಕೋರುತ್ತಿರುವುದಾಗಿ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
ನಟನೆಗೆ ಅವಕಾಶ ನೀಡುವ ನೆಪದಲ್ಲಿ ತನ್ನನ್ನು ಬಾಬು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಚೊಚ್ಚಲ ಸಿನಿಮಾದಲ್ಲಿ ಅಭಿನಯಿಸುತ್ತಿದ್ದ ನಟಿಯೊಬ್ಬರು ಮೀ ಟೂ ಆರೋಪ ಮಾಡಿದ್ದರು. ಇದನ್ನು ಆಧರಿಸಿ ಬಾಬು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಬಾಬು ತಲೆಮರೆಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅವರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಇದೇ ವೇಳೆ ಫೇಸ್‌ಬುಕ್ ನೇರಪ್ರಸಾರದ ಮೂಲಕ ತನ್ನ ವಿರುದ್ಧದ ಆರೋಪ ನಿರಾಕರಿಸುವ ವೇಳೆ ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸಿದ್ದರಿಂದ ಅವರ ವಿರುದ್ಧ ಐಪಿಸಿ ಸೆಕ್ಷನ್ 228 ಎ ಅಡಿ ಕೂಡ ಪ್ರಕರಣ ದಾಖಲಿಸಲಾಗಿತ್ತು. ಭಾರೀ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಲೈವ್ ವೀಡಿಯೊವನ್ನು ಅವರು ಫೇಸ್‌ಬುಕ್ ಖಾತೆಯಿಂದ ಅಳಿಸಿಹಾಕಿದ್ದರು.
ಕೆಲ ವರ್ಷಗಳ ಹಿಂದೆ ಎಂದು ನಟ ಮತ್ತು ಸಹ ನಿರ್ಮಾಪಕ ಸಾಂಡ್ರಾ ಥಾಮಸ್ ಅವರು ಬಾಬು ವಿರುದ್ಧ ಹಲ್ಲೆಯ ಆರೋಪ ಮಾಡಿದ್ದರು. ಆದರೆ ಆಗ ದೂರನ್ನು ಹಿಂಪಡೆಯಲಾಗಿತ್ತು. ತಾನು ನಿರಪರಾಧಿ ಎಂದು ಹೇಳಿಕೊಳ್ಳಲು ಬಾಬ ಆಗ ಕೂಡ ಫೇಸ್‌ಬುಕ್ ಲೈವ್ ಬಂದಿದ್ದರು.