ಮೆಟ್ರೊ ಕಾಮಗಾರಿ: 203 ಮರಗಳ ತೆರವು, 45 ಮರಗಳ ಸ್ಥಳಾಂತರಕ್ಕೆ ಹೈಕೋರ್ಟ್‌ ಅಸ್ತು

ಮೆಟ್ರೊ ಯೋಜನೆ ಅತ್ಯಂತ ದಕ್ಷ ಮತ್ತು ಪರಿಸರ ಸ್ನೇಹಿಯಾಗಿದೆ. ಯೋಜನೆಯಿಂದ ಜನರ ಪ್ರಯಾಣದ ಸಮಯ ಉಳಿಯಲಿದೆ. ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ವಾಹನಗಳ ಸುಗಮ ಸಂಚಾರಕ್ಕೆ ನೆರವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಪರ ವಕೀಲರ ವಾದ.
BMRCL and Karnataka HC
BMRCL and Karnataka HC
Published on

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೆಟ್ರೊ ಮಾರ್ಗದ ಭಾಗವಾಗಿರುವ ದೂರವಾಣಿ ನಗರ ಗೇಟ್ - ಕೆಂಪಾಪುರ ಮಾರ್ಗದ ನಿರ್ಮಾಣ ಕಾಮಗಾರಿಗಾಗಿ 203 ಮರಗಳ ತೆರವು ಹಾಗೂ 45 ಮರಗಳ ಸ್ಥಳಾಂತರಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ಅನುಮತಿಸಿದೆ.

ಮೆಟ್ರೊ ಕಾಮಗಾರಿ ಸೇರಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮರಗಳನ್ನು ಕಡಿಯುವುದನ್ನು ಆಕ್ಷೇಪಿಸಿ ಬೆಂಗಳೂರು ಪರಿಸರ ಟ್ರಸ್ಟ್‌ ಹಾಗೂ ಪರಿಸರವಾದಿ ದತ್ತಾತ್ರೇಯ ಟಿ. ದೇವರೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಮರಗಳ ತೆರವು ಹಾಗೂ ಸ್ಥಳಾಂತರಕ್ಕೆ ಸಂಬಂಧಿಸಿದಂತೆ 2023ರ ಜನವರಿ 18ರಂದು ವೃಕ್ಷ ಅಧಿಕಾರಿ ನೀಡಿರುವ ಅನುಮತಿಯ ಅನುಸಾರ ಮುಂದುವರಿಯಲು ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್‌ ಅವಕಾಶ ಕಲ್ಪಿಸಿದೆ.

ದೂರವಾಣಿ ನಗರ ಗೇಟ್-ಕೆಂಪಾಪುರ ಮಾರ್ಗದಲ್ಲಿ 203 ಮರಗಳನ್ನು ಕಡಿಯಲು, 45 ಮರಗಳನ್ನು ಸ್ಥಳಾಂತರಿಸಲು ಹಾಗೂ 14 ಮರಗಳನ್ನು ಉಳಿಸಿಕೊಳ್ಳಲು ತಾಂತ್ರಿಕ ಸಲಹಾ ಸಮಿತಿ ನೀಡಿರುವ ಅನುಮೋದನೆಯ ಆಧಾರದಲ್ಲಿ ವೃಕ್ಷ ಅಧಿಕಾರಿ ಬಿಎಂಆರ್‌ಸಿಎಲ್‌ಗೆ ಅನುಮತಿ ನೀಡಿದ್ದರು. ಅದನ್ನು ಕಾರ್ಯರೂಪಕ್ಕೆ ತರಲು ಬಿಎಂಆರ್‌ಸಿಎಲ್ ಹೈಕೋರ್ಟ್‌ನಿಂದ ಅನುಮತಿ ಕೇಳಿತ್ತು.

ಮೆಟ್ರೊ ಕಾಮಗಾರಿಗಾಗಿ ಕಡಿಯುವ ಮರಗಳಿಗೆ ಪರ್ಯಾಯವಾಗಿ ಯೋಜನಾ ಪ್ರದೇಶಕ್ಕೆ ಸಾಧ್ಯವಾದಷ್ಟೂ ಹತ್ತಿರದಲ್ಲಿ ಬಿಎಂಆರ್‌ಸಿಎಲ್ ಸಸಿಗಳನ್ನು ನೆಡಬೇಕಿದೆ. ಇದರ ಭಾಗವಾಗಿ ಮಿಯಾವಾಕಿ ವಿಧಾನವನ್ನು (ಸಣ್ಣ ಕಾಡುಗಳ ನಿರ್ಮಾಣ) ಬಿಎಂಆರ್‌ಸಿಎಲ್ ಅನುಸರಿಸುತ್ತಿದೆ. ಆದರೆ, ಜಿಕೆವಿಕೆಯಂತಹ ಯಾವುದೇ ಸಂಸ್ಥೆಗಳು ಮಿಯಾವಾಕಿ ವಿಧಾನವನ್ನು ಅನುಮೋದಿಸಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಎಂಆರ್‌ಸಿಎಲ್, ನಗರ ಪ್ರದೇಶದ ವ್ಯಾಪ್ತಿಯಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಮಿಯಾವಾಕಿ ಒಂದೇ ಲಭ್ಯವಿರುವ ಪರ್ಯಾಯ ವಿಧಾನವಾಗಿದೆ. ಯೋಜನೆಗಾಗಿ ತೆರವುಗೊಳಿಸುವ ಮರಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲೇಬೇಕಿರುವ ಕಾರಣ ಬೇರೆ ಆಯ್ಕೆಯೂ ಇಲ್ಲವಾಗಿದೆ. ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆ ನಡುವೆ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಮೆಟ್ರೊ ರೈಲು ಯೋಜನೆ ದೊಡ್ಡ ಮಟ್ಟದ ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿದ್ದು, ಅದನ್ನು ಶೀಘ್ರ ಪೂರ್ಣಗೊಳಿಸಬೇಕಿದೆ. ಈಗಾಗಲೇ ಕೆಲ ಕಾರಣಗಳಿಂದ ಕಾಮಗಾರಿ ವಿಳಂಬವಾಗಿತ್ತು. ಇದೀಗ ಮತ್ತೆ ವಿಳಂಬವಾದರೆ ಸಾರ್ವಜನಿಕರಿಗೆ ದೊಡ್ಡ ಸಮಸ್ಯೆಯಾಗಲಿದೆ ಎಂದು ತಿಳಿಸಿತ್ತು.

Also Read
ಮೆಟ್ರೊ ಕಾಮಗಾರಿ: ಗಿಡ ನೆಟ್ಟಿರುವುದು, ಮರ ಸ್ಥಳಾಂತರ ಕುರಿತು ಸಂಕ್ಷಿಪ್ತ ವರದಿ ಸಲ್ಲಿಸಲು ಹೈಕೋರ್ಟ್‌ ಆದೇಶ

ಮೆಟ್ರೊ ಯೋಜನೆ ಅತ್ಯಂತ ದಕ್ಷ ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯಾಗಿದ್ದು, ಇದರಿಂದ, ಹೆಚ್ಚಿನ ಸಂಖ್ಯೆಯ ಜನರ ಪ್ರಯಾಣದ ಸಮಯ ಉಳಿತಾಯವಾಗಲಿದೆ. ಜತೆಗೆ, ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ. ಆದ್ದರಿಂದ, ವೃಕ್ಷ ಅಧಿಕಾರಿಯ ಅನುಮತಿಯಂತೆ ಮರಗಳ ತೆರವುಗೊಳಿಸಿ, ಯೋಜನೆ ಮುಂದುವರಿಸಲು ಅನುವು ಮಾಡಿಕೊಡಬೇಕು ಎಂದು ಕೋರಿತ್ತು. ಈ ಮನವಿ ಪುರಸ್ಕರಿಸಿರುವ ಹೈಕೋರ್ಟ್ ವೃಕ್ಷಗಳ ತೆರವು ಹಾಗೂ ಸ್ಥಳಾಂತರಕ್ಕೆ ಅನುಮತಿಸಿದೆ.

Kannada Bar & Bench
kannada.barandbench.com