ಟ್ವೀಟ್‌ಗಳ ಮೂಲಕ ಕೋಮುದ್ವೇಷ ಹರಡುತ್ತಿದ್ದಾರೆ ಎಂಬ ಆರೋಪದ ಮೇಲೆ ನಟಿ ಕಂಗನಾ ರನೌತ್ ಮತ್ತವರ ಸಹೋದರಿ ರಂಗೋಲಿ ಚಾಂಡೇಲ್ ಅವರ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಬಾಂದ್ರಾ ಪೊಲೀಸರಿಗೆ ಮುಂಬೈ ಮೆಟ್ರೊಪಾಲಿಟನ್ ನ್ಯಾಯಾಧೀಶ ಜೆ ವೈ ಘುಲೆ ಸೂಚನೆ ನೀಡಿದ್ದಾರೆ. ಮುನ್ನಾವರಲಿ ಸಯ್ಯದ್ ಎಂಬುವವರು ಸಹೋದರಿಯರಿಬ್ಬರ ವಿರುದ್ಧ ದೂರು ದಾಖಲಿಸಿದ್ದರು.
ಕಂಗನಾವಿಚಾರಣೆ ನಡೆಸಿದ ನ್ಯಾಯಾಲಯ ನೀಡಿರುವ ಆದೇಶ ಹೀಗಿದೆ: “ತಜ್ಞರಿಂದ ಸಂಪೂರ್ಣ ತನಿಖೆ ಅಗತ್ಯ. ಆರೋಪಿಗಳ ವಿರುದ್ಧ ಮಾಡಲಾದ ಆರೋಪಗಳು ಮತ್ತು ಎಸಗಿರಬಹುದಾದ ತಪ್ಪುಗಳು ಪರಿಗಣನೆಗೆ ಅರ್ಹ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಶೋಧ ಮತ್ತು ಮುಟ್ಟುಗೋಲು ಹಾಕಿಕೊಳ್ಳುವುದು ಅಗತ್ಯ. ಇಂತಹ ಸಂದರ್ಭಗಳಲ್ಲಿ, ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 156 (3)ರ ಅಡಿಯಲ್ಲಿ ಆದೇಶ ರವಾನಿಸುವುದು ಸೂಕ್ತ ಎಂದು ನಾನು ಕಂಡುಕೊಂಡಿದ್ದೇನೆ. ಆದ್ದರಿಂದ ಅಗತ್ಯ ಕ್ರಮ ಮತ್ತು ತನಿಖೆ ಕೈಗೆತ್ತಿಕೊಳ್ಳಲು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಆದೇಶ ನೀಡಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ಭಾರತೀಯ ದಂಡ ಸಂಹಿತೆ 34ನೇ ಸೆಕ್ಷನ್ (ಸಂಚು) ಜೊತೆಗಿರಿಸಿ, ಸಿಆರ್‌ಪಿಸಿ ಸೆಕ್ಷನ್‌ಗಳಾದ 153 ಎ (ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 ಎ (ದುರುದ್ದೇಶಪೂರಿತ ಧಾರ್ಮಿಕ ಭಾವನೆಗಳನ್ನು ಮೀರಿಸುವುದು), 124 ಎ (ರಾಷ್ಟ್ರದ್ರೋಹ) ಸೆಕ್ಷನ್‌ಗಳನ್ನು ಓದಿದಾಗ ಕಂಗನಾ ಮತ್ತವರ ಸಹೋದರಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಬಾಂದ್ರಾ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಮನವಿದಾರರಾದ ಸಯ್ಯದ್ ಅವರು ಕೋರಿದ್ದರು.
ರನೌತ್ ತನ್ನ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಆಕ್ಷೇಪಾರ್ಹ ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ಬಾಲಿವುಡ್ ಸಂದರ್ಶನಗಳ ಮೂಲಕ ಅವರು ನೀಡುತ್ತಿರುವ ಹೇಳಿಕೆಗಳು ಚಿತ್ರೋದ್ಯಮದ ಸಹೋದ್ಯೋಗಿಗಳ ಭಾವನೆಗಳನ್ನು ಘಾಸಿಗೊಳಿಸುತ್ತಿವೆ ಎಂದು ಸಯ್ಯದ್ ದೂರಿನಲ್ಲಿ ತಿಳಿಸಿದ್ದರು.
ಭಾವನೆಗಳನ್ನು ಪ್ರಚೋದಿಸುವ ಮತ್ತು ವಿವಿಧ ಧಾರ್ಮಿಕ ಗುಂಪುಗಳ ನಡುವೆ ಕೋಮು ಉದ್ವಿಗ್ನತೆ ಹರಡುವ ಉದ್ದೇಶದಿಂದ ಚಾಂಡೇಲ್ ಟ್ವಿಟರ್‌ನಲ್ಲಿ ಹೇಳಿಕೆಗಳನ್ನು ಅಪ್ಲೋಡ್ ಮಾಡಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ಸರ್ಕಾರಿ ಸಂಸ್ಥೆಗಳ ವಿರುದ್ಧ ನಟಿ ಮಾಡಿರುವ ಟೀಕೆಗಳ ಬಗ್ಗೆಯೂ ಸಯ್ಯದ್ ಕಳವಳ ವ್ಯಕ್ತಪಡಿಸಿದ್ದಾರೆ. ಇಬ್ಬರೂ ಸಹೋದರಿಯರು "ಮಹಾರಾಷ್ಟ್ರ ಸರ್ಕಾರದ ವಿರುದ್ಧ ನಾಗರಿಕರೊಳಗೆ ಅಸಮಾಧಾನ" ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ದೂರು ದಾಖಲಿಸಿಕೊಳ್ಳಲು ಬಾಂದ್ರಾ ಸಬ್‌ಇನ್ಸ್‌ಪೆಕ್ಟರ್ ನಿರಾಕರಿಸಿದ ಬಳಿಕ ವಕೀಲ ರವೀಶ್ ಜಮೀನ್ದಾರ್ ಅವರ ಮೂಲಕ ಸಯ್ಯದ್ ನ್ಯಾಯಾಲಯದ ಕದ ತಟ್ಟಿದ್ದರು.
ನ್ಯಾಯಾಧೀಶರ ಆದೇಶ ಇಲ್ಲಿ ಓದಿ: