[ಬಿಸಿಯೂಟ ಯೋಜನೆ] ಅಡುಗೆ ತಯಾರಕರು ಕನಿಷ್ಠ ವೇತನ ಕಾಯಿದೆಯಡಿ ವೇತನ ಪಡೆಯಲು ಅರ್ಹರಲ್ಲ: ಹೈಕೋರ್ಟ್‌ ತೀರ್ಪು

ಬಿಸಿಯೂಟ ಯೋಜನೆಯಡಿ ದಿನಕ್ಕೆ ನಾಲ್ಕು ಗಂಟೆಯಷ್ಟು ಸೀಮಿತ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ಮಾಡುತ್ತಿರುವ ಮುಖ್ಯ ಅಡುಗೆ ತಯಾರಕರು ಮತ್ತು ಅಡುಗೆ ತಯಾರಕರಿಗೆ ಕನಿಷ್ಠ ವೇತನ ಕಾಯಿದೆಯ ನಿಯಮಗಳು ಅನ್ವಯಿಸುವುದಿಲ್ಲ ಎಂದಿರುವ ಪೀಠ.
Mid day meal
Mid day meal
Published on

ರಾಜ್ಯ ಸರ್ಕಾರ ನಡೆಸುತ್ತಿರುವ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಮುಖ್ಯ ಅಡುಗೆ ತಯಾರಕರು ಮತ್ತು ಅಡುಗೆ ತಯಾರಕರು ಕನಿಷ್ಠ ವೇತನ ಕಾಯಿದೆಯಡಿ ವೇತನ ಪಡೆಯಲು ಅರ್ಹರಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಬಿಸಿಯೂಟ ತಯಾರಿಸುವ ಮುಖ್ಯ ಅಡುಗೆ ತಯಾರಕರು ಮತ್ತು ಅಡುಗೆ ಸಹಾಯಕರಿಗೆ ಕನಿಷ್ಠ ವೇತನ ಕಾಯಿದೆ-1948ರ ಅಡಿ ಸೂಕ್ತ ವೇತನ ನಿಗದಿಪಡಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತರಾದ ಎಂ ಎಸ್ ನೌಹೇರಾ ಶೇಖ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಅನಿಲ್‌ ಬಿ ಕಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಕನಿಷ್ಠ ವೇತನ ಕಾಯಿದೆಯಲ್ಲಿ ಉಲ್ಲೇಖಿಸಲಾಗಿರುವ ಅಧಿಸೂಚಿತ ಉದ್ಯೋಗಗಳಿಗೆ ಮಾತ್ರ ಕಾಯಿದೆಯ ನಿಯಮಗಳು ಅನ್ವಯಿಸುತ್ತವೆ. ಬಿಸಿಯೂಟ ಯೋಜನೆಯಡಿಯ ದಿನಕ್ಕೆ ನಾಲ್ಕು ಗಂಟೆಯಷ್ಟು ಸೀಮಿತ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ಮಾಡುತ್ತಿರುವ ಮುಖ್ಯ ಅಡುಗೆ ತಯಾರಕರು ಮತ್ತು ಅಡುಗೆ ತಯಾರಕರಿಗೆ ಕನಿಷ್ಠ ವೇತನ ಕಾಯಿದೆಯ ನಿಯಮಗಳು ಅನ್ವಯಿಸುವುದಿಲ್ಲ ಎಂದು ಪೀಠವು ತೀರ್ಪಿನಲ್ಲಿ ಹೇಳಿದೆ.

ಅಲ್ಲದೆ, ಕರ್ನಾಟಕ ಕನಿಷ್ಠ ವೇತನ ನಿಯಮಗಳು-1958ರ ಪ್ರಕಾರ ದಿನದ ಕೆಲಸದ ಅವಧಿ 9 ಗಂಟೆಯಾಗಿರಬೇಕು. ಈ ಮಾನದಂಡ ಮುಖ್ಯ ಅಡುಗೆ ತಯಾರಕರ ಮತ್ತು ಅಡುಗೆ ತಯಾರಕರ ವಿಚಾರದಲ್ಲಿ ಪಾಲನೆಯಾಗಿಲ್ಲ. ಹೀಗಾಗಿ, ಅವರಿಗೆ ಕನಿಷ್ಠ ವೇತನ ನೀಡಬೇಕು ಎಂಬ ವಿಚಾರವು ಕಾಯಿದೆಯ ನಿಯಮಗಳ ವ್ಯಾಪ್ತಿಗೆ ಬರುವುದಿಲ್ಲ. ಕನಿಷ್ಠ ವೇತನ ಕಾಯಿದೆಯಡಿ ಸೂಕ್ತ ಕನಿಷ್ಠ ವೇತನ ವಿತರಿಸಲು ಸರ್ಕಾರಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 2018ರಲ್ಲಿ ಬಿಸಿಯೂಟ ಕಾರ್ಯಕರ್ತರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಆವರಣದಲ್ಲಿ ಹಗಲು-ರಾತ್ರಿ ಧರಣಿ ಕೈಗೊಂಡಿದ್ದರು. ಈ ವೇಳೆ, ಧರಣಿ ಸ್ಥಳಕ್ಕೆ ಭೇಟಿ ನೀಡಿ ಬಿಸಿಯೂಟ ಕಾರ್ಯಕರ್ತೆಯರ ಕುಂದು ಕೊರತೆ ಆಲಿಸಿದ್ದ ಅರ್ಜಿದಾರರು ನಂತರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜತೆಗೆ ಬಿಸಿಯೂಟ ತಯಾರಿಸುವ ಕಾರ್ಯಕತೆಯರಿಗೆ ಕನಿಷ್ಠ ವೇತನ ನಿಗದಿಪಡಿಸಲು ಸರ್ಕಾರಕ್ಕೆ ತಕ್ಷಣ ನಿರ್ದೇಶಿಸಬೇಕು ಎಂದು ಕೋರಿದ್ದರು.

Kannada Bar & Bench
kannada.barandbench.com