ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಎರಡನೇ ವಿಶೇಷ ನ್ಯಾಯಾಲಯ ಆರಂಭಿಸಬೇಕಾಗಬಹುದು: ಕರ್ನಾಟಕ ಹೈಕೋರ್ಟ್‌

ವಿಧಾನಸಭಾ ಸದಸ್ಯರ ವಿರುದ್ಧದ ಆರೋಪಗಳನ್ನು ಒಳಗೊಂಡ ದತ್ತಾಂಶ ಸೇರಿದಂತೆ ಇನ್ನಿತರ ವಿಚಾರಗಳನ್ನು ಹೊಂದಿರುವ ವರದಿ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ.
Vidhana Soudha
Vidhana Soudha

ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್‌ (ಜೆಎಂಎಫ್‌ಸಿ) ಅವರಿಂದ ವಿಚಾರಣೆಗೆ ಒಳಪಡಲಿರುವ ಶಾಸಕರ ವಿರುದ್ದದ ಬಾಕಿರುವ ಕ್ರಿಮಿನಲ್‌ ಪ್ರಕರಣಗಳಿಗೆ ಸಂಬಂಧಿಸಿದ ದತ್ತಾಂಶ ಸಲ್ಲಿಸುವಂತೆ ರಿಜಿಸ್ಟ್ರಾರ್ ಜನರಲ್‌ಗೆ ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ.

ಜೆಎಂಎಫ್‌ಸಿ ವಿಚಾರಣೆ ನಡೆಸಲಿರುವ ಪ್ರಕರಣಗಳು ಬಾಕಿ ಇರುವ ಹಂತ; ವಿಧಾನಸಭಾ ಸದಸ್ಯರ ವಿರುದ್ಧದ ಪ್ರಕರಣಗಳ ಸಂಖ್ಯೆ; ಶಾಸಕರು ದಾಖಲಿಸಿರುವ ಪ್ರಕರಣಗಳ ಸಂಖ್ಯೆಯನ್ನು ಒಳಗೊಂಡ ದತ್ತಾಂಶವನ್ನು ಪೀಠದ ಮುಂದೆ ಜುಲೈ 6ರ ಒಳಗೆ ಮಂಡಿಸುವಂತೆ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾ. ಸೂರಜ್‌ ಗೋವಿಂದರಾಜ್‌ ಅವರಿದ್ದ ಪೀಠ ಆದೇಶಿಸಿದೆ.

ಪ್ರಕರಣಗಳಿಗೆ ಸಂಬಂಧಿಸಿದ ತಾಂತ್ರಿಕ ವಿಚಾರಗಳ ಕುರಿತು ಅಮಿಕಸ್‌ ಕ್ಯೂರಿಯಾಗಿರುವ ಹಿರಿಯ ವಕೀಲ ಆದಿತ್ಯ ಸೋಂಧಿ ಬೊಟ್ಟು ಮಾಡಿದ ನಂತರ ನ್ಯಾಯಾಲಯ ನಿರ್ದೇಶನ ನೀಡಿದೆ. ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ನಾವು ಎರಡನೇ ವಿಶೇಷ ನ್ಯಾಯಾಲಯ ಆರಂಭಿಸಬೇಕಾಗಬಹುದು” ಎಂದಿತು. ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಲಾಗಿದೆ.

Also Read
ಸಂಸದರು, ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಲೇವಾರಿಗೆ ಪಿಐಎಲ್ ದಾಖಲಿಸಿಕೊಳ್ಳುವಂತೆ ಹೈಕೋರ್ಟ್ ಸೂಚನೆ

ಶಾಸನ ಸಭೆಯ ಸದಸ್ಯರ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಮುಕ್ತಾಯಗೊಳಿಸಲು ಕಾರ್ಯತಂತ್ರ ಜಾರಿಗೊಳಿಸುವಂತೆ ದೇಶದ ಎಲ್ಲಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಸುಪ್ರೀಂಕೋರ್ಟ್ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಳ್ಳುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ ರಾಜ್ಯ ಹೈಕೋರ್ಟ್‌ ಸೂಚಿಸಿತ್ತು.

ಕಳೆದ ವಿಚಾರಣೆಯ ಸಂದರ್ಭದಲ್ಲಿ ಸಂಸದರು ಮತ್ತು ಶಾಸಕರ ವಿರುದ್ದದ ಬಾಕಿ ಇರುವ ಕ್ರಿಮಿನಲ್‌ ಪ್ರಕರಣ ವಿಚಾರಣೆ ನಡೆಸುವುದಕ್ಕಾಗಿ ಮತ್ತೊಂದು ವಿಶೇಷ ನ್ಯಾಯಾಲಯ ಆರಂಭಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ತನ್ನ ಆಡಳಿತ ವಿಭಾಗಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು.

Related Stories

No stories found.
Kannada Bar & Bench
kannada.barandbench.com