ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯದ ಸ್ಥಿತಿಯಲ್ಲಿ ಸಣ್ಣ ವಿಚಾರಣೆ ನಡೆಸಲಾಗದು ಎಂದು ದೆಹಲಿ ಪೊಲೀಸರು ಪ್ರತಿವಾದಿ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಆರೋಪ ನಿಗದಿಗೆ ಸಂಬಂಧಿಸಿದಂತೆ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ ಅವರು ವಾದ-ಪ್ರತಿವಾದ ಆಲಿಸುತ್ತಿದ್ದಾರೆ.
ದೆಹಲಿ ಪೊಲೀಸರನ್ನು ಪ್ರತಿನಿಧಿಸಿರುವ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಅತುಲ್ ಶ್ರೀವಾಸ್ತವ ಅವರು ಪ್ರಕರಣದ ವಿಚಾರಣೆ ನಡೆಸಲು ದೆಹಲಿ ಪೊಲೀಸರು ವ್ಯಾಪ್ತಿ ಹೊಂದಿದ್ದಾರೆ. ಆದರೆ, ಪ್ರತಿವಾದಿ ವಕೀಲರು ಇದಕ್ಕೆ ವಿರುದ್ಧವಾಗಿ ವಾದಿಸುತ್ತಿದ್ದಾರೆ. ಆರೋಪಿತ ಅಪರಾಧಗಳ ಪೈಕಿ ಒಂದಷ್ಟು ದೆಹಲಿಯಲ್ಲಿ ನಡೆದಿವೆ ಎಂದರು.
ಭಾರತದ ಹೊರಗೆ ಪ್ರಕರಣ ನಡೆದಿದ್ದರೆ ಮಾತ್ರ ಪ್ರತಿವಾದಿ ವಕೀಲರು ಆಧರಿಸಿರುವ ಕಾನೂನು ನಿಬಂಧನೆಯು (ಸಿಆರ್‌ಪಿಸಿ ಸೆಕ್ಷನ್ 188) ಅನ್ವಯಿಸುತ್ತದೆ. ಹೀಗಾಗಿ, ಆರೋಪ ನಿಗದಿ ಮಾಡಬೇಕು. ಆಕ್ಷೇಪಾರ್ಹವಾದ ಅಪರಾಧಗಳು ದೆಹಲಿಯಲ್ಲಿ ನಡೆದಿದ್ದು, ಒಂದಷ್ಟು ಹೊರಗೆ ಘಟಿಸಿವೆ. ಆದ್ದರಿಂದ, ಪ್ರಕರಣದ ವಿಚಾರಣೆ ನಡೆಸುವ ವ್ಯಾಪ್ತಿಯು ಈ ನ್ಯಾಯಾಲಯಕ್ಕೆ ಇದೆ ಎಂದರು.
ಮೇಲ್ವಿಚಾರಣಾ ಸಮಿತಿಯು ಭೂಷಣ್ ಅವರನ್ನು ಖುಲಾಸೆಗೊಳಿಸಿದ್ದು, ಅದು ಇಲಾಖಾ ತನಿಖೆಯಷ್ಟೆ. ಈ ವರದಿಯು ಪ್ರಕರಣದ ವಿಚಾರಣೆ ನಡೆಸದಂತೆ ನ್ಯಾಯಾಲಯಕ್ಕೆ ತಡೆ ಹಾಕುವುದಿಲ್ಲ. ದಾಖಲೆಗಳನ್ನು ಪರಿಶೀಲಿಸಿ, ಮೇಲ್ನೋಟಕ್ಕೆ ಪ್ರಕರಣ ಇದೆಯೇ ಎಂದು ನೋಡಬೇಕು. ಹಾಲಿ ಸಂದರ್ಭದಲ್ಲಿ ಸಣ್ಣ ವಿಚಾರಣೆ ನಡೆಸಲಾಗದು ಎಂದರು.
ಆರು ಮಂದಿ ಕುಸ್ತಿಪಟುಗಳು ನೀಡಿದ ದೂರಿನ ಅನ್ವಯ ಪೊಲೀಸರು ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಜೂನ್ 15ರಂದು ಐಪಿಸಿ ಸೆಕ್ಷನ್‌ಗಳಾದ 354 (ಘನತೆಗೆ ಚ್ಯುತಿ), 354ಎ (ಲೈಂಗಿಕ ಸಂಬಂಧಿ ಹೇಳಿಕೆ), 354ಡಿ (ಹಿಂಬಾಲಿಸುವುದು) ಮತ್ತು 506 (1) (ಕ್ರಿಮಿನಲ್ ಬೆದರಿಕೆ) ಅಡಿ ಆರೋಪಗಳಿಗೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.