ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ: ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿದ ಹೈಕೋರ್ಟ್‌

ಅಧಿಸೂಚಿತ ಉದ್ಯೋಗಗಳ ಕನಿಷ್ಠ ವೇತನವನ್ನು ಪ್ರತಿ 5 ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕು. ಹಲವು ಉದ್ಯೋಗ ಮಾಡುವ ಕಾರ್ಮಿಕರಿಗೆ ಕೊನೆ ಬಾರಿ 2017ರಲ್ಲಿ ಕನಿಷ್ಠ ವೇತನ ಪರಿಷ್ಕರಣೆ ಮಾಡಲಾಗಿತ್ತು ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
High Court of Karnataka
High Court of Karnataka
Published on

ಕೃಷಿ ಕಾರ್ಮಿಕರು ಸೇರಿದಂತೆ ವಿವಿಧ ಏಳು ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು ಕಳೆದ ಏಳು ವರ್ಷಗಳಿಂದ ಪರಿಷ್ಕರಣೆ ಮಾಡಲಾಗಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ನೋಟಿಸ್ ಜಾರಿಗೊಳಿಸಿದೆ.

ಆಲ್ ಇಂಡಿಯಾ ಸೆಂಟ್ರಲ್ ಯೂನಿಯನ್ ಆಫ್ ಟ್ರೇಡ್ ಕೌನ್ಸಿಲ್ ( ಎಐಸಿಸಿಟಿಯು) ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅನಂತ್ ರಮಾನಾಥ ಹೆಗ್ಡೆ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಮುಖ್ಯ ಕಾರ್ಮಿಕ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮಾರ್ಚ್ 10ಕ್ಕೆ ಮುಂದೂಡಿತು. ಅರ್ಜಿದಾರರ ಪರ ವಕೀಲೆ ಮೈತ್ರೇಯಿ ಕೃಷ್ಣನ್ ವಾದ ಮಂಡಿಸಿದರು.

ಅರ್ಜಿಯಲ್ಲಿ, ಅಧಿಸೂಚಿತ ಉದ್ಯೋಗಗಳ (ಶೆಡ್ಯೂಲ್ಡ್‌ ಎಂಪ್ಲಾಯ್‌ಮೆಂಟ್) ಕನಿಷ್ಠ ವೇತನವನ್ನು ಪ್ರತಿ 5 ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕು. ಆದರೆ, ಕೃಷಿ ಕಾರ್ಮಿಕರು, ಜಿಪ್ಸಂ ಹಾಗೂ ಇತರೆ ಗಣಿಗಾರಿಕೆ, ಕಟ್ಟಡ, ರಸ್ತೆಗಳ ನಿರ್ಮಾಣ ಹಾಗೂ ನಿರ್ವಹಣೆ, ಕಲ್ಲು ಗಣಿಗಾರಿಕೆ, ಸ್ವೀಪಿಂಗ್ ಮತ್ತು ಕ್ಲೀನಿಂಗ್, ವಾಚ್ ಆ್ಯಂಡ್ ವಾರ್ಡ್, ಲೋಡಿಂಗ್, ಅನ್‌ಲೋಡಿಂಗ್ ವಲಯದ ಉದ್ಯೋಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರ ಕನಿಷ್ಠ ವೇತನ ಕಳೆದ ಏಳು ವರ್ಷಗಳಿಂದ ಪರಿಷ್ಕರಣೆ ಮಾಡಿಲ್ಲ ಎಂದು ವಿವರಿಸಲಾಗಿದೆ.

ಈ ಉದ್ಯೋಗಗಳಿಗೆ ಕೊನೆ ಬಾರಿ 2017ರಲ್ಲಿ ಕನಿಷ್ಠ ವೇತನ ಪರಿಷ್ಕರಣೆ ಮಾಡಲಾಗಿತ್ತು. ಆದ್ದರಿಂದ, ಸುಪ್ರೀಂಕೋರ್ಟ್‌ನ ಮಾನದಂಡಗಳಿಗೆ ಅನಸಾರವಾಗಿ ಈ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. 

Kannada Bar & Bench
kannada.barandbench.com