ಮೋಟಾರು ಅಪಘಾತದ ಕ್ಲೈಮ್ ಪ್ರಕರಣದಲ್ಲಿ, ಮೃತರ ಮಾಸಿಕ ಆದಾಯದ ಬಗ್ಗೆ ಈಗಾಗಲೇ ಸಕಾರಾತ್ಮಕ ಪುರಾವೆಗಳಿರುವಾಗ ಮೃತರ ವೇತನವನ್ನು ಖಚಿತಪಡಿಸಿಕೊಳ್ಳಲು ಕನಿಷ್ಠ ವೇತನ ಕಾಯಿದೆಯಡಿ ಹೊರಡಿಸಲಾದ ರಾಜ್ಯ ಅಧಿಸೂಚನೆಯನ್ನು ಅವಲಂಬಿಸಲಾಗದು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ [ಗುರ್‌ಪ್ರೀತ್ ಕೌರ್ ಮತ್ತಿತರರು ಹಾಗೂ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಇನ್ನಿತರರ ನಡುವಣ ಪ್ರಕರಣ].
ಮೃತರ ಮಾಸಿಕ ಆದಾಯವನ್ನು ಮೌಲ್ಯಮಾಪನ ಮಾಡಲು ಯಾವುದೇ ಸುಳಿವು ದೊರೆಯದಿದ್ದಾಗ ಮಾತ್ರ ಕನಿಷ್ಠ ವೇತನ ಕಾಯಿದೆಯಡಿ ಅಂತಹ ಅಧಿಸೂಚನೆ ಮಾರ್ಗಸೂಚಿ ಅಂಶವಾಗುತ್ತದೆ ಎಂದುನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎಂ ಎಂ ಸುಂದರೇಶ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.
ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ (MACT) ನೀಡಿದ್ದ ಪರಿಹಾರ ರದ್ದುಗೊಳಿಸಿದ್ದ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ್ನು ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.
ಮೃತರು 25 ವರ್ಷದ ಆರೋಗ್ಯವಂತ ವ್ಯಕ್ತಿಯಾಗಿದ್ದು ವೃತ್ತಿಯಿಂದ ಗುತ್ತಿಗೆದಾರರಾದ ಅವರು ಮಾಸಿಕ ₹ 50,000 ಪಡೆಯುತ್ತಿದ್ದರು ಎನ್ನಲಾಗಿತ್ತು. ಪರಿಹಾರ ಲೆಕ್ಕಾಚಾರ ಮಾಡುವ ವೇಳೆ ಟ್ರ್ಯಾಕ್ಟರ್ ಸಾಲಕ್ಕೆ ತಿಂಗಳಿಗೆ ₹ 11,550 ಪಾವತಿಸುತ್ತಿರುವುದನ್ನು ಗಮನಿಸಿದ ನ್ಯಾಯಮಂಡಳಿ ಮೃತ ವ್ಯಕ್ತಿಯ ಆದಾಯ ₹ 25,000 ಇರಬಹುದು ಎಂದು ಅಂದಾಜಿಸಿತು.
ಆದರೆ ಮೃತರು ಅಷ್ಟು ಹಣವನ್ನು ಸಾಲವಾಗಿ ಪಾವತಿಸುತ್ತಿದ್ದರು ಎಂಬುದು ಅವರ ಆದಾಯ ನಿರ್ಣಯಿಸಲು ಪುರಾವೆಯಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು. ಹರ್ಯಾಣ ಸರ್ಕಾರ ಕನಿಷ್ಠ ವೇತನಕ್ಕೆ ಹೊರಡಿಸಿದ್ದ ಅಧಿಸೂಚನೆ ಪರಿಗಣಿಸಿ ಹೈಕೋರ್ಟ್ ಮೃತರ ಆದಾಯ ತಿಂಗಳಿಗೆ ₹ 7,000 ಎಂದು ನಿರ್ಣಯಿಸಿತು. ಈ ಆಧಾರದ ಮೇಲೆ, ಮೇಲ್ಮನವಿದಾರರಿಗೆ ನೀಡಲಾಗಿದ್ದ ಪರಿಹಾರ ಮೊತ್ತವನ್ನು ಕಡಿತಗೊಳಿಸಲಾಯಿತು.
ಹೈಕೋರ್ಟ್ ಕ್ರಮಕ್ಕೆ ಅಸಮ್ಮತಿ ಸೂಚಿಸಿರುವ ಸುಪ್ರೀಂಕೋರ್ಟ್ ಕಾನೂನು ಮತ್ತು ವಾಸ್ತವಾಂಶಗಳನ್ನು ಆಧರಿಸಿ ನ್ಯಾಯಮಂಡಳಿಯ ನಿರ್ಧಾರ ಸರಿ ಎಂದು ತೀರ್ಪು ನೀಡಿದೆ.