ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲ್ಲೂಕಿನ ಸರಗೂರು ಹೋಬಳಿಯ ಶಂಬುಗೌಡನಹಳ್ಳಿ ಮತ್ತು ಲಕ್ಕಸೋಗೆ ಗ್ರಾಮಗಳಲ್ಲಿರುವ ತಮ್ಮ ಖಾಸಗಿ ಜಮೀನಿಗೆ ನುಗು ವನ್ಯಜೀವಿ ಅಭಯಾರಣ್ಯದಲ್ಲಿನ ರಸ್ತೆ ಮಾರ್ಗದ ಮೂಲಕ ರಾತ್ರಿ-ಹಗಲು ಓಡಾಡಲು ಅನುಮತಿಸಬೇಕು ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಪುತ್ರ ರಾಣಾ ಜಾರ್ಜ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ನುಗು ಅಭಯಾರಣ್ಯದಲ್ಲಿ ಹಾದು ಹೋಗುವ ರಸ್ತೆಯನ್ನು ಬಳಸದಂತೆ ನಿರ್ಬಂಧಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) 2024ರ ಮಾಚ್೯ 1ರಂದು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ರಾಣಾ ಜಾಜ್೯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಪ್ರತಿವಾದಿಗಳಾದ ಸರ್ಕಾರ, ಅರಣ್ಯ ಇಲಾಖೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಹೆಡಿಯಾಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ನ್ಯಾಯಾಲಯವು ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿತು. ವಕೀಲ ಮೃಣಾಲ್ ಕುಟಪ್ಪ ವಕಾಲತ್ತು ಹಾಕಿದ್ದಾರೆ.
ಶಂಬುಗೌಡನಹಳ್ಳಿ ಮತ್ತು ಲಕ್ಕಸೋಗೆಯಲ್ಲಿನ ಸರ್ವೇ ನಂಬರ್ 1, 2, 3, 26, 32 ಮತ್ತು 33ರ ಭೂಮಿಯ ಮಾಲೀಕತ್ವವನ್ನು ರಾಣಾ ಜಾರ್ಜ್ ಹೊಂದಿದ್ದಾರೆ. ಇದು ನುಗು ಅಭಯಾರಣ್ಯದ ವ್ಯಾಪ್ತಿಯಲ್ಲಿದೆ. ಈ ಆಸ್ತಿಯನ್ನು ರಾಣಾ ಅವರು ವೈಯಕ್ತಿಕ ಬಳಕೆ ಮಾಡುತ್ತಿದ್ದು, ಇಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ನಡೆಸುತ್ತಿಲ್ಲ. ಇಡೀ ಪ್ರದೇಶ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿದೆ ಎಂಬ ಅರಿವು ರಾಣಾ ಅವರಿಗೆ ಇದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಖಾಸಗಿ ಭೂಮಿ ಮಾಲೀಕರಿಗೆ ತಮ್ಮ ಜಮೀನಿಗೆ ತೆರಳಲು ಜಾಗವಿಲ್ಲದಿದ್ದಾಗ ಸಾರ್ವಜನಿಕ ಜಾಗವನ್ನು ಬಳಕೆ ಮಾಡಲು ಅನುಮತಿಸಬೇಕು ಎಂಬುದು ಸ್ಥಾಪಿತ ಕಾನೂನು. ಹಾಲಿ ಪ್ರಕರಣದಲ್ಲಿ ರಾಣಾ ಜಾರ್ಜ್ ಅವರ ಜಮೀನು ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಈ ಜಮೀನಿಗೆ ತೆರಳಲು ಮಣ್ಣಿನ ರಸ್ತೆಯನ್ನೇ ಆಶ್ರಯಿಸಬೇಕಿದ್ದು, ಅದು ಅರಣ್ಯ ಇಲಾಖೆಯ ವಶದಲ್ಲಿದೆ. ರಾಣಾ ಅವರ ಜಮೀನಿಗೆ ತೆರಳಲು ಇನ್ನೊಂದು ರಸ್ತೆ ಇದ್ದು, ಮಾನ್ಸೂನ್ ಅಥವಾ ನುಗು ಜಲಾಶಯದಲ್ಲಿ ನೀರಿನ ಮಟ್ಟ 100 ಅಡಿಗಿಂತ ಹೆಚ್ಚಾದಾಗ ಅಲ್ಲಿ ಓಡಾಡಲು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ರಾಣಾ ಅವರಿಗೆ ಅರಣ್ಯ ಇಲಾಖೆಯ ದಾರಿ ಬಳಸದೇ ವಿಧಿಯಿಲ್ಲದಂತಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಅಭಯಾರಣ್ಯದ ವ್ಯಾಪ್ತಿಯಲ್ಲಿ ಭೂಮಿ ಹೊಂದಿರುವವರಿಗೆ ಓಡಾಡಲು ವನ್ಯಜೀವಿ ಸಂರಕ್ಷಣಾ ಕಾಯಿದೆ ಸೆಕ್ಷನ್ 27(1)(ಸಿ) ಅಡಿ ವಿನಾಯಿತಿ ಇದೆ. ಈಗ ಅರಣ್ಯ ಇಲಾಖೆಯು ರಾಣಾ ಅವರನ್ನು ತಮ್ಮ ಜಮೀನಿಗೆ ಸಂಜೆ 6ರಿಂದ ಬೆಳಿಗಿನ ಜಾವ 6 ಗಂಟೆಯವರೆಗೆ ಅರಣ್ಯ ಇಲಾಖೆಯ ರಸ್ತೆಯಲ್ಲಿ ಓಡಾಡಲು ಕಾನೂನುಬಾಹಿರವಾಗಿ ನಿರ್ಬಂಧಿಸುವ ಮೂಲಕ ಕಿರುಕುಳ ನೀಡುತ್ತಿದೆ. ಅರಣ್ಯ ಇಲಾಖೆಯ ರಸ್ತೆಯನ್ನು ಬಳಕೆ ಮಾಡುವುದಕ್ಕೆ ಸಾರ್ವಜನಿಕರು ಆಕ್ಷೇಪಿಸಿರುವ ಸುದ್ದಿಯು ಮಾಧ್ಯಮಗಳಲ್ಲಿ ಪ್ರಕಟವಾಗಿರುವುದನ್ನು ಆಧರಿಸಿ ಹೆಡಿಯಾಲ ವಲಯದ ಸಹಾಯಕ ಅರಣ್ಯಾ ಸಂರಕ್ಷಣಾಧಿಕಾರಿಯು ಓಡಾಟಕ್ಕೆ ನಿರ್ಬಂಧಿಸಿದ್ದಾರೆ ಎಂದು ವಿವರಿಸಲಾಗಿದೆ. ಹೀಗಾಗಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ರದ್ದುಪಡಿಸಿ, ದಿನದ 24 ತಾಸು ತಮ್ಮ ಜಮೀನಿಗೆ ಓಡಾಲು ಅನುಮತಿಸಬೇಕು ಎಂದು ರಾಣಾ ಜಾರ್ಜ್ ಕೋರಿದ್ದಾರೆ.