ಚೆಕ್ ಬೌನ್ಸ್ ಪ್ರಕರಣ: ಸಚಿವ ಮಧು ಬಂಗಾರಪ್ಪಗೆ ₹6.96 ಕೋಟಿ ದಂಡ ವಿಧಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ

ಹಣವನ್ನು ಪಾವತಿಸುವ ವಾಗ್ದಾನವನ್ನು ನ್ಯಾಯಾಲಯಕ್ಕೆ ನೀಡಿ ಅದರಿಂದ ವಿಮುಖವಾದ ಸಚಿವರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ.
ಸಚಿವ ಮಧು ಬಂಗಾರಪ್ಪ
ಸಚಿವ ಮಧು ಬಂಗಾರಪ್ಪ

ಚೆಕ್‌ ಬೌನ್ಸ್‌ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಶುಕ್ರವಾರ ರೂ. 6 ಕೋಟಿ 96 ಲಕ್ಷ 70 ಸಾವಿರ ಮೊತ್ತದ ಭಾರಿ ದಂಡ ವಿಧಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ದಂಡ ತೆರದೆ ಹೋದರೆ ಜೈಲು ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಿದೆ.

ಮಧು ಬಂಗಾರಪ್ಪ ನಿರ್ದೇಶಕರಾಗಿರುವ ಆಕಾಶ್‌ ಆಡಿಯೋ ಸಂಸ್ಥೆ ರಾಜೇಶ್‌ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್‌ನ ನಡುವಿನ ಪ್ರಕರಣ ಇದಾಗಿದೆ. ಪ್ರಕರಣದ ಕುರಿತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ. ಪ್ರೀತ್‌ ಅವರು ಈ ಆದೇಶ ನೀಡಿದ್ದಾರೆ. ಅವರು ತಮ್ಮ ಆದೇಶದಲ್ಲಿ, ಕ್ರಿಮಿನಲ್‌ ಪ್ರಕ್ರಿಯಾ ಸಂಹಿತೆಯ ಸಂಹಿತೆಯ 255 (2)ರಡಿ ನೀಡಲಾದ ಅಧಿಕಾರ ಬಳಸಿ ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಿ ನೆಗೋಷಬಲ್‌ ಇನ್ಸ್‌ಟ್ರುಮೆಂಟ್‌ ಕಾಯಿದೆಯ ಸೆಕ್ಷನ್‌ 138ರ ಅಡಿ ಆರೋಪಿ ನಂಬರ್‌ 1 (ಆಕಾಶ್‌ ಆಡಿಯೋ- ವೀಡಿಯೊ ಪ್ರೈ ಲಿಮಿಟೆಡ್‌) ಮತ್ತು ಆರೋಪಿ ನಂ 2 (ಎಸ್‌ ಬಿ ಮಧುಚಂದ್ರ ಅಲಿಯಾಸ್‌ ಮಧು ಬಂಗಾರಪ್ಪ) ರೂ.6,96,70,000/- ದಂಡವನ್ನು ಪಾವತಿಸಬೇಕು ತಪ್ಪಿದಲ್ಲಿ ಎರಡನೇ ಆರೋಪಿಯಾದ ಮಧು ಬಂಗಾರಪ್ಪ ಆರು ತಿಂಗಳ ಅವಧಿಗೆ ಸಾದಾ ಶಿಕ್ಷೆ ಅನುಭವಿಸಬೇಕು ಎಂದು ತಿಳಿಸಿದ್ದಾರೆ.

ದಂಡದ ಮೊತ್ತವು ಪಾವತಿಯಾದರೆ ಸಿಆರ್‌ಪಿಸಿ ಸೆಕ್ಷನ್‌ 357ರ ಪ್ರಕಾರ ಅದರಲ್ಲಿ ರೂ 6,96,70,000/- ದೂರುದಾರರಿಗೆ (ರಾಜೇಶ್‌ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್‌) ನೀಡಬೇಕು. ಉಳಿದ ರೂ.10,000/- ಹಣವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಮಧು ಬಂಗಾರಪ್ಪ ನಿರ್ದೇಶಕರಾಗಿರುವ ಆಕಾಶ್‌ ಆಡಿಯೋ ಸಂಸ್ಥೆಯು ರಾಜೇಶ್‌ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್‌ನಿಂದ ಅಂತರ ಕಾರ್ಪೊರೇಟ್‌ ಠೇವಣಿ (ಐಸಿಡಿ) ಹಣವಾಗಿ ರೂ. ಆರು ಕೋಟಿಗಳನ್ನು ಪಡೆದಿತ್ತು. ಸಂಸ್ಥೆಯ ನಿರ್ದೇಶಕರಾದ ಮಧು ಬಂಗಾರಪ್ಪ ಅವರು ಈ ಸಂಬಂಧ ಐಸಿಡಿ ಸ್ವೀಕೃತಿಯನ್ನು ಖಚಿತ ಪಡಿಸಿದ್ದರು. ಅಲ್ಲದೆ, ಇದನ್ನು ಹಿಂದಿರುಗಿಸುವ ಭರವಸೆಯನ್ನು ನೀಡಿ ಕಾನೂನಾತ್ಮಕವಾಗಿ ಹಿಂಪಡೆಯಬಹುದಾದ ಈ ಸಾಲದ ಹಣಕ್ಕೆ ಪ್ರತಿಯಾಗಿ ರಾಜೇಶ್‌ ಎಕ್ಸ್‌ಪೋರ್ಟ್ಸ್‌ಗೆ ರೂ. ಆರು ಕೋಟಿ ಅರವತ್ತು ಲಕ್ಷ ಮೊತ್ತದ ಚೆಕ್‌ ಅನ್ನು 16-07-2011ರಂದು ನೀಡಿದ್ದರು.

ಮುಂದೆ ರಾಜೇಶ್‌ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್‌ ತನಗೆ ನೀಡಿದ್ದ ಚೆಕ್ ಅನ್ನು ಬ್ಯಾಂಕಿಗೆ ಹಾಕಿದ ಸಂದರ್ಭದಲ್ಲಿ ಹಣದ ಅಲಭ್ಯತೆಯಿಂದಾಗಿ 27-11-2011ರಂದು ಚೆಕ್‌ ಅಮಾನ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜೇಶ್‌ ಎಕ್ಸ್‌ಪೋರ್ಟ್ಸ್‌ ಸಂಸ್ಥೆ ಆಕಾಶ್‌ ಆಡಿಯೋ ಹಾಗೂ ಮಧು ಬಂಗಾರಪ್ಪ ವಿರುದ್ಧ ಪ್ರಕರಣ ದಾಖಲಿಸಿತ್ತು. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಜನವರಿಯಲ್ಲಿ ನ್ಯಾಯಾಲಯವು ಮಧು ಬಂಗಾರಪ್ಪ ಅವರಿಗೆ ಜಾಮೀನು ನೀಡಿತ್ತು.

ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಲು ಕೋರಿ ಮಧು ಬಂಗಾರಪ್ಪ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ಬಾಕಿ ವೇಳೆ ಮಧು ಬಂಗಾರಪ್ಪ ಅವರು ರೂ. 50 ಲಕ್ಷವನ್ನು ಪಾವತಿಸಲಾಗಿದ್ದು ಉಳಿದ ರೂ. 6,10,00,000/-ಹಣವನ್ನು ಸಲ್ಲಿಸುವುದಾಗಿ ಮುಚ್ಚಳಿಕೆ ನೀಡಿದ್ದರು. ಆದರೆ, ನಂತರ ಅದಕ್ಕೆ ಬದ್ಧವಾಗಿರುವಲ್ಲಿ ವಿಫಲರಾಗಿದ್ದರು. ಈ ಅಂಶವನ್ನು ಗಮನಿಸಿದ ನ್ಯಾಯಾಲಯವು, "ಈ ರೀತಿ ಮುಚ್ಚಳಿಕೆಯನ್ನು ನೀಡಿ ನಂತರ ಅದನ್ನು ಪಾಲಿಸದೆ ಇರುವ ಅಭ್ಯಾಸ ಇವರಿಗೆ ಇರುವಂತಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿತು.

ಹೀಗಾಗಿ ಈಗಾಗಲೇ ಪಾವತಿ ಮಾಡಿದ ರೂ 50 ಲಕ್ಷವನ್ನು ಹೊರತುಪಡಿಸುವಂತೆ ಮಾಡಲಾದ ಕೋರಿಕೆಯನ್ನು ನಿರಾಕರಿಸಿದ ನ್ಯಾಯಾಲಯ ಒಟ್ಟು ರೂ. 6,96,70,000 ಅನ್ನು ಪರಿಹಾರವಾಗಿ ರಾಜೇಶ್‌ ಎಕ್ಸ್‌ಪೋರ್ಟ್ಸ್‌ಗೆ ಪಾವತಿಸುವಂತೆ ಆದೇಶಿಸಿತು. ಆರೋಪಿಯ ಜಾಮೀನು ಬಾಂಡ್‌ ಮತ್ತು ಶ್ಯೂರಿಟಿ ಬಾಂಡ್‌ಗಳನ್ನು ಅದು ರದ್ದುಗೊಳಿಸಿತು.

Kannada Bar & Bench
kannada.barandbench.com