ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ 2024 ಅನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.
ಕೊಡಗು ಜಿಲ್ಲೆಯು ಸಂಪೂರ್ಣವಾಗಿ ಮಲೆನಾಡಿನಂತೆ ಕಡಿಮೆ ಜನಸಾಂದ್ರತೆ ಹೊಂದಿರುವ ಚದುರಿದ ಗುಡ್ಡಗಾಡು ಪ್ರದೇಶವಾಗಿದೆ. ಕೆಲವು ಸಂದರ್ಭಗಳಲ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರವು ಭೌಗೋಳಿಕವಾಗಿ 100 ಕಿ ಮೀವರೆಗೆ ವ್ಯಾಪಿಸಿದೆ. ಭೌಗೋಳಿಕವಾಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಭೂ ವಿಸ್ತೀರ್ಣವು ಅಭಿವೃದ್ಧಿ ಕಾರ್ಯಕ್ರಮ ಮತ್ತು ಆಡಳಿತದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ.
ಕರ್ನಾಟಕ ಪಂಚಾಯತ್ ರಾಜ್ ಗಡಿ ನಿರ್ಧರಣಾ ಆಯೋಗವು ಕೊಡಗಿನ ಸಾರ್ವಜನಿಕರ ಮನವಿಯ ಮೇರೆಗೆ ಅಗತ್ಯ ತಿದ್ದುಪಡಿಯನ್ನು ಶಿಫಾರಸ್ಸು ಮಾಡಿದೆ. ಆದ್ದರಿಂದ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಅನ್ನು ತಿದ್ದುಪಡಿ ಮಾಡುವುದು ಅವಶ್ಯ ಎಂದು ಈ ವಿಧೇಯಕ ತರಲಾಗಿದೆ.