ಉಚಿತ ಮತ್ತು ಕಡ್ಡಾಯವಾಗಿ ಮಕ್ಕಳು ಶಿಕ್ಷಣ ಪಡೆಯುವ ಹಕ್ಕು ಕಾಯಿದೆಯಡಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಶೇ.25ರಷ್ಟು ಮೀಸಲಾತಿ ಕೋಟಾದಡಿ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತ ಸಂಸ್ಥೆಗಳು ಪ್ರವೇಶ ನೀಡುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಔರಂಗಾಬಾದ್ ಪೀಠ ಈಚೆಗೆ ಹೇಳಿದೆ [ಐಜಕ್ ಆಂಗ್ಲ ಮಾಧ್ಯಮ ಶಾಲೆ ಮತ್ತಿತರರು ಹಾಗೂ ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಹಾಗೆ ಪ್ರವೇಶಾತಿಗೆ ಅನುಮತಿಸುವುದು ಅಲ್ಪಸಂಖ್ಯಾತ ಸಂಸ್ಥೆಗಳನ್ನು ಆರ್‌ಟಿಇ ಕಾಯಿದೆಯ ಆದೇಶದಿಂದ ವಿನಾಯಿತಿ ನೀಡುವ ಸಾಂವಿಧಾನಿಕ ರಕ್ಷಣೆಯನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ನುಡಿದಿದೆ.
ಅಲ್ಪಸಂಖ್ಯಾತ ಶಾಲೆಗಳನ್ನು ಆರ್‌ಟಿಇ ಕಾಯಿದೆಯ ಶೇ 25ರಷ್ಟು ಮೀಸಲಾತಿ ಕೋಟಾದಿಂದ ಹೊರಗಿಟ್ಟ ಸರ್ಕಾರಿ ಆದೇಶವನ್ನು ಪ್ರಶ್ನಿಸಿ ಅಲ್ಪಸಂಖ್ಯಾತರ ಆಂಗ್ಲ ಮಾಧ್ಯಮ ಶಾಲೆಗಳನ್ನು ನಡೆಸುತ್ತಿರುವ ಅಹ್ಮದ್‌ನಗರದ ಐಜಾಕ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಆನಂದ್ ವೈದ್ಯಕೀಯ ಮತ್ತು ಶಿಕ್ಷಣ ಪ್ರತಿಷ್ಠಾನ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.
ಹಿಂದಿನ ವರ್ಷಗಳಲ್ಲಿ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಣ ಮರುಪಾವತಿಸಲು ಅವಕಾಶ ನೀಡಬೇಕು ಮತ್ತು ಸ್ವಯಂಪ್ರೇರಿತವಾಗಿ ಆರ್‌ಟಿಇ ಕೋಟಾದಡಿಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ಶಾಲೆಗಳು ವಾದಿಸಿದ್ದವು.
ಆದರೆ ಈ ವಾದಗಳನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಮಂಗೇಶ್ ಎಸ್ ಪಾಟೀಲ್ ಮತ್ತು ಶೈಲೇಶ್ ಪಿ ಬ್ರಾಹ್ಮೆ ಅವರಿದ್ದ ಪೀಠ ಅಲ್ಪಸಂಖ್ಯಾತ ಸಂಸ್ಥೆಗಳು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿ ಆರ್‌ಟಿಇ ಕೋಟಾವನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದಿತು.
ಅಲ್ಪಸಂಖ್ಯಾತ ಸಂಸ್ಥೆಗಳನ್ನು ಆರ್‌ಟಿಇ ಕಾಯಿದೆ ಅನ್ವಯದಿಂದ ಸ್ಪಷ್ಟವಾಗಿ ವಿನಾಯಿತಿ ನೀಡುವ ಕಾಯಿದೆಯ ಸೆಕ್ಷನ್ 1(5) ಅನ್ನು ಆಧರಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ.