ಆರ್‌ಡಿಪಿಆರ್‌ ಇಲಾಖೆಯಲ್ಲಿ ₹3,405 ಕೋಟಿ ದುರ್ಬಳಕೆ: ಮೂವರು ನಿವೃತ್ತ ಐಎಎಸ್‌ ಅಧಿಕಾರಿಗಳ ವಿರುದ್ಧದ ಪ್ರಕರಣ ರದ್ದು

ರಾಜ್ಯದ ಬೊಕ್ಕಸಕ್ಕೆ ₹269 ಕೋಟಿ ನಷ್ಟ ಉಂಟು ಮಾಡಿದ್ದ ಆರೋಪಕ್ಕೆ ಗುರಿಯಾಗಿದ್ದ ವಿಜಯ ಭಾಸ್ಕರ್‌, ಪ್ರಧಾನ ಕಾರ್ಯದರ್ಶಿಗಳಾಗಿದ್ದ ನಿವೃತ್ತ ಐಎಎಸ್ ಅಧಿಕಾರಿಗಳಾದ ಅಮಿತಾ ಪ್ರಸಾದ್, ಎನ್ ವಿ ರಮಣರೆಡ್ಡಿ ವಿರುದ್ಧದ ಪ್ರಕರಣ ರದ್ದು ಮಾಡಲಾಗಿದೆ.
IAS officers Amitha Prasad, Dr. E V Ramana Reddy, T M Vijaya Bhaskar & Vidhan Soudha
IAS officers Amitha Prasad, Dr. E V Ramana Reddy, T M Vijaya Bhaskar & Vidhan Soudha

‘ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ’ಯ ಅನುದಾನದಲ್ಲಿ ಕಾನೂನುಬಾಹಿರ ಚಟುವಟಿಕೆಯ ಮೂಲಕ ಹಲವು ಬ್ಯಾಂಕ್‌ ಖಾತೆಗಳನ್ನು ತೆರೆದು ರಾಜ್ಯದ ಬೊಕ್ಕಸಕ್ಕೆ ₹269 ಕೋಟಿ ನಷ್ಟ ಉಂಟು ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್‌ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಂದಿನ ಇಬ್ಬರು ಪ್ರಧಾನ ಕಾರ್ಯದರ್ಶಿಗಳಾಗಿದ್ದ ನಿವೃತ್ತ ಐಎಎಸ್ ಅಧಿಕಾರಿಗಳಾದ ಅಮಿತಾ ಪ್ರಸಾದ್, ಎನ್ ವಿ ರಮಣರೆಡ್ಡಿ ವಿರುದ್ಧದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.

ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಮೂವರು ನಿವೃತ್ತ ಐಎಎಸ್ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಅರ್ಜಿದಾರರಾದ ಅಮಿತಾ ಪ್ರಸಾದ್, ರಮಣ ರೆಡ್ಡಿ, ವಿಜಯ್ ಭಾಸ್ಕರ್ ಅವರ ವಿರುದ್ಧ 23ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್‌ ನ್ಯಾಯಾಲಯದಲ್ಲಿ (ಭ್ರಷ್ಟಾಚಾರ ತಡೆ ಕಾಯಿದೆ ವಿಶೇಷ ನ್ಯಾಯಾಲಯ) ನಡೆಯುತ್ತಿರುವ ವಿಚಾರಣೆಯ ಸಂಪೂರ್ಣ ಪ್ರಕ್ರಿಯೆ ರದ್ದುಗೊಳಿಸಲಾಗಿದೆ. ಆದರೆ, ಈ ಆದೇಶವು ಅರ್ಜಿದಾರರನ್ನು ಹೊರತುಪಡಿಸಿ ಪ್ರಕರಣದ ಇತರ ಆರೋಪಿಗಳ ವಿಚಾರಣೆಗೆ ಅನ್ವಯವಾಗುವುದಿಲ್ಲ ಎಂದು ಪೀಠ ಆದೇಶದಲ್ಲಿ ಹೇಳಿದೆ.

ಮೂವರು ಅಧಿಕಾರಿಗಳ ವಿರುದ್ಧ ತನಿಖೆಗೆ ಸಕ್ಷಮ ಪ್ರಾಧಿಕಾರದಿಂದ ಅಗತ್ಯ ಪೂರ್ವಾನುಮತಿ ಪಡೆದುಕೊಂಡಿಲ್ಲ. ಯೋಜನೆಯ ಅನುಷ್ಠಾನಕ್ಕೆ 2010ರ ಅಕ್ಟೋಬರ್‌ 1ರಂದು ಕೇಂದ್ರ ಸರ್ಕಾರದ ಕುಡಿಯವ ನೀರು ಸರಬರಾಜು ಮತ್ತು ನೈರ್ಮಲ್ಯ ಸಚಿವಾಲಯ, ರಾಜ್ಯ ನೀರು ಮತ್ತು ನೈರ್ಮಲ್ಯ ಮಿಷನ್ ಹಾಗೂ ಸಿಂಡಿಕೇಟ್ ಬ್ಯಾಂಕ್ ನಡುವೆ ತ್ರಿಪಕ್ಷೀಯ ಒಪ್ಪಂದ ಆಗಿತ್ತು. ಆದರೆ, ಮೂವರು ಅರ್ಜಿದಾರರ ಪೈಕಿ ಯಾರೊಬ್ಬರೂ ಆ ತ್ರಿಪಕ್ಷೀಯ ಒಪ್ಪಂದದ ಪಾಲುದಾರರು ಅಲ್ಲ. ಅಮಿತಾ ಪ್ರಸಾದ್ 2011ರ ಮೇ 16ರಿಂದ 2012ರ ಜೂನ್8ರವರೆಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ರಮಣರೆಡ್ಡಿ 2012ರ ಸೆಪ್ಟೆಂಬರ್‌ 22ರಿಂದ 2013ರ ಮೇ 31 ಹಾಗೂ ವಿಜಯ್ ಭಾಸ್ಕರ್ ಅವರು 2013ರ ಮೇ 31ರಿಂದ 2015ರ ಏಪ್ರಿಲ್ 24ರವರೆಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿದ್ದರು ಎಂದರು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ವಿಜಯ್ ಭಾಸ್ಕರ್ ಅವರು ಹುದ್ದೆಯಿಂದ ನಿರ್ಗಮಿಸಿದ ಬಳಿಕ 2015ರ ಮೇ 4ರಂದು ಗ್ರಾಮೀಣ ನೀರು ಸರಬರಾಜು ಯೋಜನೆಯ ಆಯುಕ್ತರು ವರದಿ ಸಲ್ಲಿಸಿದ್ದು, ಅದರಲ್ಲಿ ‘ಹಣ ದುರ್ಬಳಕೆ’ ಆಗಿದೆ ಎಂದಷ್ಟೇ ಹೇಳಿದ್ದಾರೆ. ಆದರೆ, ಯಾವ ಅಧಿಕಾರಿಯ ಹೆಸರನ್ನೂ ಹೇಳಿಲ್ಲ. ಈ ವರದಿಯ ಆಧಾರದಲ್ಲಿ ಲೆಕ್ಕಪರಿಶೋಧನೆ ನಡೆಸಲಾಗಿದ್ದು, 2015ರ ಅಕ್ಟೋಬರ್‌ 1ರಂದು ಸಲ್ಲಿಸಲಾದ ಆ ಲೆಕ್ಕಪರಿಶೋಧನಾ ವರದಿಯಲ್ಲಿ ಹಣ ದುರ್ಬಳಕೆಗೆ ಪಿ ಬೋರೇಗೌಡ ಹಾಗೂ ರಾಮಕೃಷ್ಣ ಎಂಬುವರು ಹೊಣೆ ಎಂದು ಹೇಳಲಾಗಿತ್ತು. ಆ ವರದಿಯ ಆಧಾರದಲ್ಲಿ ದೂರು ದಾಖಲಿಸಲಾಗಿದ್ದು, ಆ ದೂರಿನಲ್ಲಿ ಮೂವರು ಅರ್ಜಿದಾರ ಅಧಿಕಾರಿಗಳ ವಿರುದ್ಧ ಆರೋಪ ಮಾಡಿಲ್ಲ. ಹೀಗಾಗಿ, ಅರ್ಜಿದಾರರ ವಿರುದ್ಧ ದೂರು ಇಲ್ಲ; ಆರೋಪವೂ ಇಲ್ಲ. 2019ರ ಜನವರಿ 9ರಂದು ಪೊಲೀಸರು ಬಿ ರಿಪೋರ್ಟ್ ಸಹ ಹಾಕಿದ್ದಾರೆ. ಪೊಲೀಸರು ಹಾಕಿದ್ದ ಆರೋಪಪಟ್ಟಿಯಲ್ಲೂ ಮೂವರು ಅರ್ಜಿದಾರರ ಹೆಸರು ಇಲ್ಲ ಎಂದು ಪೀಠ ಆದೇಶದಲ್ಲಿ ಪ್ರಸ್ತಾಪಿಸಿದೆ.

ಪ್ರಕರಣದ ಹಿನ್ನೆಲೆ: 2009-10 ಮತ್ತು 2014-15ರ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ (ಆರ್‌ಡಿಪಿಆರ್‌) ಪ್ರಧಾನ ಕಾರ್ಯದರ್ಶಿಗಳಾಗಿದ್ದ ಹಿರಿಯ ಐಎಎಸ್‌ ಅಧಿಕಾರಿಗಳಾದ ಅಮಿತಾ ಪ್ರಸಾದ್‌, ಡಾ. ಇ ವಿ ರಮಣರೆಡ್ಡಿ ಮತ್ತು ಮುಖ್ಯ ಕಾರ್ಯದರ್ಶಿಯಾಗಿ ಪದೋನ್ನತಿ ಪಡೆದು ನಿವೃತ್ತರಾಗಿರುವ ಆರ್‌ಡಿಪಿಆರ್‌ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಟಿ ಎಂ ವಿಜಯ ಭಾಸ್ಕರ್‌, ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಪೂರೈಕೆ ಏಜೆನ್ಸಿ (ಕೆಆರ್‌ಡಬ್ಲುಎಸ್‌ಎಸ್‌ಎ) ನಿರ್ದೇಶಕ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಪದನಿಮಿತ್ತ ಅಧಿಕಾರಿಯಾಗಿದ್ದ ಐಎಎಸ್‌ ಅಧಿಕಾರಿ ಡಾ. ಬೋರೇಗೌಡ, ಆರ್‌ಡಿಪಿಆರ್‌ನಲ್ಲಿ ಉಪ ಕಾರ್ಯದರ್ಶಿಯಾಗಿದ್ದ ರಾಮಕೃಷ್ಣ ಅವರು ₹3405.21 ಕೋಟಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಲೆಕ್ಕಪರಿಶೋಧನಾ ವರದಿಯಲ್ಲಿ ಬಹಿರಂಗವಾಗಿದೆ ಎಂದು ದೂರುದಾರರು ಆರೋಪಿಸಿದ್ದರು. ಪ್ರಕರಣದಲ್ಲಿ ಎರಡನೇ ಸಾಕ್ಷಿಯಾಗಿರುವ ರಾಜ್ಯ ಲೆಕ್ಕಪರಿಶೋಧನಾ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಎನ್‌ ಬಿ ಶಿವರುದ್ರಪ್ಪ ಅವರು ಆ ಸಂದರ್ಭದಲ್ಲಿ ತಾನು ಲೆಕ್ಕಪರಿಶೋಧನಾ ವಿಭಾಗದ ಮುಖ್ಯಸ್ಥರಾಗಿದ್ದು, ಹಣಕಾಸು ಇಲಾಖೆಗೆ ವರದಿ ಸಲ್ಲಿಸಿರುವುದಾಗಿ ಹೇಳಿಕೆ ನೀಡಿದ್ದರು.

ಒಪ್ಪಂದಕ್ಕೆ ವಿರುದ್ಧವಾಗಿ ಆರೋಪಿತ ಐಎಎಸ್‌ ಅಧಿಕಾರಿಗಳಾದ ಅಮಿತಾ ಪ್ರಸಾದ್‌, ಡಾ. ಇ ವಿ ರಮಣರೆಡ್ಡಿ, ಟಿ ಎಂ ವಿಜಯ ಭಾಸ್ಕರ್‌, ಡಾ. ಬೋರೇಗೌಡ ಹಾಗೂ ರಾಮಕೃಷ್ಣ ಅವರು ಆರು ಬ್ಯಾಂಕ್‌ ಖಾತೆಗಳನ್ನು ತೆರೆದಿದ್ದರು. ಪ್ರಕರಣದಲ್ಲಿ ಆರನೇ ಆರೋಪಿಯಾಗಿರುವ ಈಗ ಕೆನರಾ ಬ್ಯಾಂಕ್‌ ಜೊತೆ ವಿಲೀನಗೊಂಡಿರುವ ಸಿಂಡಿಕೇಟ್‌ ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿದ್ದ ಸೀಲಮ್‌ ಗಿರಿ ಅವರು ಒಪ್ಪಂದ ಮತ್ತು ನಿಯಮಕ್ಕೆ ವಿರುದ್ಧವಾಗಿ ಒಟ್ಟಾರೆ 98 ಬ್ಯಾಂಕ್‌ ಖಾತೆಗಳನ್ನು ತೆರೆದಿದ್ದರು. ಆರ್‌ಡಿಪಿಆರ್‌ ಇಲಾಖೆಯ ಅಧಿಕಾರಿಗಳಾಗಿದ್ದ ಆರೋಪಿಗಳು ಹೆಚ್ಚುವರಿ ಹಣವನ್ನು ನಿಶ್ಚಿತ ಠೇವಣಿ ಇಡದೇ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ₹269 ಕೋಟಿ ನಷ್ಟ ಉಂಟು ಮಾಡಿದ್ದಾರೆ ಎಂದು ಶಿವರುದ್ರಪ್ಪ ಸಾಕ್ಷ್ಯ ನುಡಿದಿದ್ದರು. ಇದಕ್ಕೆ ಸಂಬಂಧಿಸಿದಂತೆ ಆಡಿಟ್‌ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಶಿವರುದ್ರಪ್ಪ ಅವರು ತಮ್ಮ ಹೇಳಿಕೆಯಲ್ಲಿ, ಆರೋಪಿತ ಐವರು ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ನಕಲಿ ಹಣ ಬಳಕೆ ಸರ್ಟಿಫಿಕೇಟ್‌ ಸಲ್ಲಿಸಿದ್ದಾರೆ. ₹10179.80 ಕೋಟಿಯನ್ನು ವಿವಿಧ ಬ್ಯಾಂಕ್‌ಗಳಿಗೆ ವರ್ಗಾವಣೆ ಮತ್ತು ಮರು ವರ್ಗಾವಣೆ ಮಾಡಿರುವುದು ಆಡಿಟ್‌ ಸಂದರ್ಭದಲ್ಲಿ ತಿಳಿದು ಬಂದಿತ್ತು. ಒಂದು ಬ್ಯಾಂಕ್‌ನಿಂದ ಮತ್ತೊಂದು ಬ್ಯಾಂಕ್‌ ಹಣ ವರ್ಗಾವಣೆಯ ಬಗ್ಗೆ ವಿವರಣೆ ನೀಡಲು ಐವರು ಅಧಿಕಾರಿಗಳು ವಿಫಲವಾಗಿದ್ದರು ಎಂದು ದಾಖಲಿಸಿದ್ದರು.

Also Read
ಆರ್‌ಡಿಪಿಆರ್‌ ಇಲಾಖೆಯಲ್ಲಿ ₹3,405 ಕೋಟಿ ದುರ್ಬಳಕೆ: ಐಎಎಸ್‌ ಅಧಿಕಾರಿಗಳ ವಿರುದ್ಧ ತನಿಖೆಗೆ ವಿಶೇಷ ನ್ಯಾಯಾಲಯದ ಆದೇಶ

ಎಲ್ಲಾ ಆರು ಆರೋಪಿಗಳ ವಿರುದ್ದ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 13(1) ಜೊತೆಗೆ 13(2), ಭಾರತೀಯ ದಂಡ ಸಂಹಿತೆ 465, 467, 468 ಮತ್ತು 471 ಪ್ರಕರಣ ದಾಖಲಿಸಲಾಗಿತ್ತು.

ಇದನ್ನು ವಿಚಾರಣೆಗೆ ಅಂಗೀಕರಿಸಿ ವಿಚಾರಣಾಧೀನ ನ್ಯಾಯಾಲಯ 2022ರ ಜನವರಿ 13ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಮೂವರು ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿ 2023ರ ಜೂನ್‌ 14ರಂದು ಕಾಯ್ದಿರಿಸಿದ್ದ ಆದೇಶವನ್ನು ಪೀಠ ಇತ್ತೀಚೆಗೆ ಪ್ರಕಟಿಸಿದೆ. 

Attachment
PDF
Amita Prasad and others Vs State of Karnataka.pdf
Preview

Related Stories

No stories found.
Kannada Bar & Bench
kannada.barandbench.com