ಆರ್‌ಡಿಪಿಆರ್‌ ಇಲಾಖೆಯಲ್ಲಿ ₹3,405 ಕೋಟಿ ದುರ್ಬಳಕೆ: ಐಎಎಸ್‌ ಅಧಿಕಾರಿಗಳ ವಿರುದ್ಧದ ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ

“ಅರ್ಜಿದಾರರ ವಿರುದ್ಧದ ಎಸಿಬಿ ತನಿಖೆ, ಮುಂದಿನ ಎಲ್ಲಾ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಹಲಸೂರು ಗೇಟ್ ಠಾಣೆಯ ಪೊಲೀಸರು, ಎಸಿಬಿ, ದೂರುದಾರ ಎಸ್ ನಾರಾಯಣ ಸ್ವಾಮಿ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಲಾಗಿದೆ” ಎಂದು ಆದೇಶಿಸಿದ ಪೀಠ.
IAS officers Amitha Prasad, Dr. E V Ramana Reddy, T M Vijaya Bhaskar & Vidhan Soudha
IAS officers Amitha Prasad, Dr. E V Ramana Reddy, T M Vijaya Bhaskar & Vidhan Soudha

ಅಕ್ರಮ ಚಟುವಟಿಕೆಯ ಮೂಲಕ ಹಲವು ಬ್ಯಾಂಕ್‌ ಖಾತೆಗಳನ್ನು ತೆರೆದು ರಾಜ್ಯದ ಬೊಕ್ಕಸಕ್ಕೆ ₹269 ಕೋಟಿ ನಷ್ಟ ಉಂಟು ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಂದಿನ ಇಬ್ಬರು ಪ್ರಧಾನ ಕಾರ್ಯದರ್ಶಿಗಳ ವಿರುದ್ಧ ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ನಿರ್ದೇಶಿಸಿದ್ದ ವಿಶೇಷ ನ್ಯಾಯಾಲಯದ ಆದೇಶಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್‌ ತಡೆ ವಿಧಿಸಿದೆ.

ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಅಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ (ಆರ್‌ಡಿಪಿಆರ್) ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಅಮಿತಾ ಪ್ರಸಾದ್‌, ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಮತ್ತು ರಾಜ್ಯ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹಾಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ ವಿ ರಮಣ ರೆಡ್ಡಿ ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

“ಅರ್ಜಿದಾರರ ವಿರುದ್ಧದ ಎಸಿಬಿ ತನಿಖೆ ಮತ್ತು ಮುಂದಿನ ಎಲ್ಲಾ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಪ್ರತಿವಾದಿಗಳಾದ ಹಲಸೂರು ಗೇಟ್ ಠಾಣೆಯ ಪೊಲೀಸರು, ಎಸಿಬಿ ಮತ್ತು ಖಾಸಗಿ ದೂರುದಾರ ಎಸ್ ನಾರಾಯಣ ಸ್ವಾಮಿಗೆ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಲಾಗಿದೆ” ಎಂದು ಪೀಠವು ಆದೇಶಿಸಿದೆ.

ಅರ್ಜಿದಾರರ ಪರ ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್ ಅವರು “ಅರ್ಜಿದಾರರ ವಿರುದ್ಧ ಯಾವುದೇ ಆರೋಪ ಇಲ್ಲದಿದ್ದರೂ ಖಾಸಗಿ ದೂರು ಸಲ್ಲಿಸಲಾಗಿದೆ. ದೂರು ದಾಖಲಿಸಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿಲ್ಲ. ಇದೇ ಪ್ರಕರಣ ಸಂಬಂಧ ಹಲಸೂರು ಠಾಣೆ ಪೊಲೀಸರು ಎರಡು ಬಾರಿ ತನಿಖೆ ನಡೆಸಿದ್ದಾರೆ. ಆರ್‌ಡಿಪಿಆರ್ ಕಾರ್ಯದರ್ಶಿ ಡಾ. ಬೋರೇಗೌಡ, ಗ್ರಾಮೀಣ ನೀರು ಸರಬರಾಜು ವಿಭಾಗದ ಉಪ ಕಾರ್ಯದರ್ಶಿ ರಾಮಕೃಷ್ಣ, ಕೆನರಾ ಬ್ಯಾಂಕ್‌ ಜೊತೆ ವಿಲೀನಗೊಂಡಿರುವ ಸಿಂಡಿಕೇಟ್‌ ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿದ್ದ ಸೀಲಮ್‌ ಗಿರಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದು, ಆ ಪ್ರಕರಣ ವಿಚಾರಣಾ ಹಂತದಲ್ಲಿದೆ” ಎಂದು ಪೀಠಕ್ಕೆ ವಿವರಿಸಿದರು.

ಕೋಲಾರದ ನಾರಾಯಣಸ್ವಾಮಿ ಎಂಬವರ ಖಾಸಗಿ ದೂರಿನ ವಿಚಾರಣೆ ನಡೆಸಿದ್ದ 23ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ ಲಕ್ಷ್ಮಿನಾರಾಯಣ ಭಟ್‌ ಅವರು “ಸಿಆರ್‌ಪಿಸಿ ಸೆಕ್ಷನ್‌ 202(1)ರ ಅಡಿ ಬೆಂಗಳೂರು ನಗರ ಎಸಿಬಿಯು ಪ್ರಕರಣದ ತನಿಖೆ ನಡೆಸಬೇಕು. ಇದಕ್ಕಾಗಿ ಉಪ ಪೊಲೀಸ್‌ ವರಿಷ್ಠಾಧಿಕಾರಿಗಿಂತ (ಡಿವೈಎಸ್‌ಪಿ) ಕೆಳ ದರ್ಜೆಯ ಅಧಿಕಾರಿಯನ್ನು ತನಿಖೆಗೆ ನೇಮಕ ಮಾಡಬಾರದು. ಏಪ್ರಿಲ್‌ 18ರ ಆದೇಶದಿಂದ ನಾಲ್ಕು ತಿಂಗಳ ಒಳಗೆ ತನಿಖೆ ನಡೆಸಿ, ವರದಿ ಸಲ್ಲಿಸಬೇಕು” ಎಂದು ಆದೇಶಿಸಿದ್ದರು.

ಪ್ರಕರಣದ ಹಿನ್ನೆಲೆ: 2009-10 ಮತ್ತು 2014-15ರ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ (ಆರ್‌ಡಿಪಿಆರ್‌) ಪ್ರಧಾನ ಕಾರ್ಯದರ್ಶಿಗಳಾಗಿದ್ದ ಹಿರಿಯ ಐಎಎಸ್‌ ಅಧಿಕಾರಿ ಡಾ. ಇ ವಿ ರಮಣರೆಡ್ಡಿ, ನಿವೃತ್ತ ಐಎಎಸ್‌ ಅಧಿಕಾರಿ ಅಮಿತಾ ಪ್ರಸಾದ್‌ ಮತ್ತು ಮುಖ್ಯ ಕಾರ್ಯದರ್ಶಿಯಾಗಿ ಪದೋನ್ನತಿ ಪಡೆದು ನಿವೃತ್ತರಾಗಿರುವ ಆರ್‌ಡಿಪಿಆರ್‌ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಟಿ ಎಂ ವಿಜಯ ಭಾಸ್ಕರ್‌, ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಪೂರೈಕೆ ಏಜೆನ್ಸಿ (ಕೆಆರ್‌ಡಬ್ಲುಎಸ್‌ಎಸ್‌ಎ) ನಿರ್ದೇಶಕ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಪದನಿಮಿತ್ತ ಅಧಿಕಾರಿಯಾಗಿದ್ದ ಐಎಎಸ್‌ ಅಧಿಕಾರಿ ಡಾ. ಬೋರೇಗೌಡ, ಆರ್‌ಡಿಪಿಆರ್‌ನಲ್ಲಿ ಉಪ ಕಾರ್ಯದರ್ಶಿಯಾಗಿದ್ದ ರಾಮಕೃಷ್ಣ ಅವರು ₹3405.21 ಕೋಟಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಲೆಕ್ಕಪರಿಶೋಧನಾ ವರದಿಯಲ್ಲಿ ಬಹಿರಂಗವಾಗಿದೆ ಎಂದು ದೂರುದಾರ ನಾರಾಯಣ ಸ್ವಾಮಿ ಆರೋಪಿಸಿದ್ದರು. ಪ್ರಕರಣದಲ್ಲಿ ಎರಡನೇ ಸಾಕ್ಷಿಯಾಗಿರುವ ರಾಜ್ಯ ಲೆಕ್ಕಪರಿಶೋಧನಾ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಎನ್‌ ಬಿ ಶಿವರುದ್ರಪ್ಪ ಅವರು ಆ ಸಂದರ್ಭದಲ್ಲಿ ತಾನು ಲೆಕ್ಕಪರಿಶೋಧನಾ ವಿಭಾಗದ ಮುಖ್ಯಸ್ಥರಾಗಿದ್ದು, ಹಣಕಾಸು ಇಲಾಖೆಗೆ ವರದಿ ಸಲ್ಲಿಸಿರುವುದಾಗಿ ಹೇಳಿಕೆ ನೀಡಿದ್ದರು

ಒಪ್ಪಂದಕ್ಕೆ ವಿರುದ್ಧವಾಗಿ ಆರೋಪಿತ ಐಎಎಸ್‌ ಅಧಿಕಾರಿ ಡಾ. ಇ ವಿ ರಮಣರೆಡ್ಡಿ, ನಿವೃತ್ತ ಐಎಎಸ್‌ ಅಧಿಕಾರಿಗಳಾದ ಟಿ ಎಂ ವಿಜಯ ಭಾಸ್ಕರ್‌, ಡಾ. ಬೋರೇಗೌಡ ಹಾಗೂ ರಾಮಕೃಷ್ಣ ಅವರು ಆರು ಬ್ಯಾಂಕ್‌ ಖಾತೆಗಳನ್ನು ತೆರೆದಿದ್ದರು. ಪ್ರಕರಣದಲ್ಲಿ ಆರನೇ ಆರೋಪಿಯಾಗಿರುವ ಈಗ ಕೆನರಾ ಬ್ಯಾಂಕ್‌ ಜೊತೆ ವಿಲೀನಗೊಂಡಿರುವ ಸಿಂಡಿಕೇಟ್‌ ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿದ್ದ ಸೀಲಮ್‌ ಗಿರಿ ಅವರು ಒಪ್ಪಂದ ಮತ್ತು ನಿಯಮಕ್ಕೆ ವಿರುದ್ಧವಾಗಿ ಒಟ್ಟಾರೆ 98 ಬ್ಯಾಂಕ್‌ ಖಾತೆಗಳನ್ನು ತೆರೆದಿದ್ದರು. ಆರ್‌ಡಿಪಿಆರ್‌ ಇಲಾಖೆಯ ಅಧಿಕಾರಿಗಳಾಗಿದ್ದ ಆರೋಪಿಗಳು ಹೆಚ್ಚುವರಿ ಹಣವನ್ನು ನಿಶ್ಚಿತ ಠೇವಣಿ ಇಡದೇ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ₹269 ಕೋಟಿ ನಷ್ಟ ಉಂಟು ಮಾಡಿದ್ದಾರೆ ಎಂದು ಶಿವರುದ್ರಪ್ಪ ಸಾಕ್ಷ್ಯ ನುಡಿದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆಡಿಟ್‌ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

Also Read
ಆರ್‌ಡಿಪಿಆರ್‌ ಇಲಾಖೆಯಲ್ಲಿ ₹3,405 ಕೋಟಿ ದುರ್ಬಳಕೆ: ಐಎಎಸ್‌ ಅಧಿಕಾರಿಗಳ ವಿರುದ್ಧ ತನಿಖೆಗೆ ವಿಶೇಷ ನ್ಯಾಯಾಲಯದ ಆದೇಶ

ಆರೋಪಿತ ಐವರು ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ನಕಲಿ ಹಣ ಬಳಕೆ ಸರ್ಟಿಫಿಕೇಟ್‌ ಸಲ್ಲಿಸಿದ್ದಾರೆ. ₹10,179.80 ಕೋಟಿಯನ್ನು ವಿವಿಧ ಬ್ಯಾಂಕ್‌ಗಳಿಗೆ ವರ್ಗಾವಣೆ ಮತ್ತು ಮರು ವರ್ಗಾವಣೆ ಮಾಡಿರುವುದು ಆಡಿಟ್‌ ಸಂದರ್ಭದಲ್ಲಿ ತಿಳಿದು ಬಂದಿತ್ತು. ಒಂದು ಬ್ಯಾಂಕ್‌ನಿಂದ ಮತ್ತೊಂದು ಬ್ಯಾಂಕ್‌ ಹಣ ವರ್ಗಾವಣೆಯ ಬಗ್ಗೆ ವಿವರಣೆ ನೀಡಲು ಐವರು ಅಧಿಕಾರಿಗಳು ವಿಫಲವಾಗಿದ್ದರು ಎಂದು ಶಿವರುದ್ರಪ್ಪ ಹೇಳಿಕೆ ದಾಖಲಿಸಿದ್ದಾರೆ.

2019ರ ಡಿಸೆಂಬರ್‌ 26ರಂದು ಎಸಿಬಿಯ ಮಹಾನಿರ್ದೇಶಕರಿಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ ಎಂದು ದೂರುದಾರ ನಾರಾಯಣ ಸ್ವಾಮಿ ದೂರಿದ್ದರು. ಆರೋಪಿತ ಅಧಿಕಾರಿಗಳು ಹಾಗೂ ಬ್ಯಾಂಕ್‌ ವ್ಯವಸ್ಥಾಪಕರು ಸರ್ಕಾರಿ ಅಧಿಕಾರಿಗಳಾಗಿದ್ದುಕೊಂಡು ಭ್ರಷ್ಟಾಚಾರ ಮತ್ತು ಕಾನೂನುಬಾಹಿರ ಚಟುವಟಿಕೆಯ ಮೂಲಕ ಹಣ ಬಾಚಿರುವುದು ಕ್ರಿಮಿನಲ್‌ ದುರ್ನಡತೆಯಾಗಿದೆ. ತಮ್ಮ ನಿಯಂತ್ರಣದಲ್ಲಿದ್ದ ಹಣವನ್ನು ಅಪ್ರಾಮಾಣಿಕ ಮತ್ತು ಭ್ರಷ್ಟ ಹಾದಿಯ ಮೂಲಕ ತಮಗಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಎಲ್ಲಾ ಆರು ಆರೋಪಿಗಳ ವಿರುದ್ದ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 13(1) ಜೊತೆಗೆ 13(2), ಭಾರತೀಯ ದಂಡ ಸಂಹಿತೆ 465, 467, 468 ಮತ್ತು 471 ಪ್ರಕರಣ ದಾಖಲಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com