ವಾಲ್ಮೀಕಿ ನಿಗಮದ ಹಣ ದುರ್ಬಳಕೆ: ಸಚಿವ ನಾಗೇಂದ್ರ ಜಾಮೀನು ಷರತ್ತು ಸಡಿಲಿಕೆಗೆ ವಿಶೇಷ ನ್ಯಾಯಾಲಯ ನಕಾರ

ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ನ್ಯಾಯಾಲಯ, ‘ಆರೋಪಿಯು ನ್ಯಾಯಾಲಯದ ಪ್ರದೇಶ ವ್ಯಾಪ್ತಿ ಬಿಟ್ಟು ಹೊರಗೆ ಹೋಗಬಾರದು’ ಎಂಬ ಷರತ್ತು ವಿಧಿಸಿತ್ತು.
B Nagendra
B Nagendra
Published on

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ರೂಪಾಯಿ ದುರ್ಬಳಕೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ  ದಾಖಲಿಸಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಸಚಿವ ನಾಗೇಂದ್ರ ಅವರ ಜಾಮೀನು ಷರತ್ತು ಸಡಿಲಿಕೆ ಮನವಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.

ಈ ಸಂಬಂಧ ನಾಗೇಂದ್ರ ಅವರು ಅಪರಾಧ ಪ್ರಕ್ರಿಯಾ ಸಂಹಿತೆ–1973ರ ಸೆಕ್ಷನ್‌ (ಸಿಆರ್‌ಪಿಸಿ) 439(1)ರ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ ಬಿ ಶಿವಪ್ರಸಾದ್‌ ಅವರು ವಿಚಾರಣೆ ನಡೆಸಿದರು.

ಅರ್ಜಿ ವಿಚಾರಣೆ ವೇಳೆ ನಾಗೇಂದ್ರ ಪರ ವಕೀಲರು, ‘ಅರ್ಜಿದಾರರು ಪಕ್ಷದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಹೋಗಬೇಕಿದ್ದು ಅದಕ್ಕಾಗಿ ಜಾಮೀನಿನ ಷರತ್ತನ್ನು 15 ದಿನಗಳವರೆಗೆ ಸಡಿಲಗೊಳಿಸಿ ಆದೇಶಿಸಬೇಕು’ ಎಂದು ಕೋರಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜಾರಿ ನಿರ್ದೇಶನಾಲಯ ಪರ ಹಾಜರಾಗಿದ್ದ ವಿಶೇಷ ಪ್ರಾಸಿಕ್ಯೂಟರ್‌ ದಿವ್ಯಾ ಆರ್ ಬಿ ಅವರು “ಅರ್ಜಿದಾರರು ಯಾವ ಕಾರಣಕ್ಕಾಗಿ ದೆಹಲಿಗೆ ಹೋಗಬೇಕು ಎಂಬುದನ್ನು ಸಮರ್ಪಕವಾಗಿ ವಿವರಿಸಿಲ್ಲ ಮತ್ತು ಕಾರಣದ ಬಗ್ಗೆ ಸೂಕ್ತ ದಾಖಲೆಯನ್ನೂನ್ಯಾಯಾಲಯಕ್ಕೆ ಒದಗಿಸಿಲ್ಲ. ಅಂತೆಯೇ, ಅವರು ಇ.ಡಿ ವಿಚಾರಣೆಗೆ ಸರಿಯಾಗಿ ಸಹಕರಿಸುತ್ತಿಲ್ಲ. ಆದ್ದರಿಂದ, ಅವರ ಮನವಿಯನ್ನು ಮಾನ್ಯ ಮಾಡಬಾರದು” ಎಂದು ಕೋರಿದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು ನಾಗೇಂದ್ರ ಅವರ ಅರ್ಜಿಯನ್ನು ತಿರಸ್ಕರಿಸಿ ವಿಚಾರಣೆಯನ್ನು ಇದೇ 7ಕ್ಕೆ ಮುಂದೂಡಿದರು. ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ನ್ಯಾಯಾಲಯ, ‘ಆರೋಪಿಯು ನ್ಯಾಯಾಲಯದ ಪ್ರದೇಶ ವ್ಯಾಪ್ತಿ ಬಿಟ್ಟು ಹೊರಗೆ ಹೋಗಬಾರದು’ ಎಂಬ ಷರತ್ತು ವಿಧಿಸಿತ್ತು

Kannada Bar & Bench
kannada.barandbench.com