ಬಿಜೆಪಿ ನಾಯಕರ ವಿರುದ್ಧ ಅಪಪ್ರಚಾರ: ಡಿಕೆಶಿ, ಬಿ ಆರ್‌ ನಾಯ್ಡು ವಿರುದ್ಧ ಎಫ್‌ಐಆರ್‌ ದಾಖಲಿಸಲು ವಿಶೇಷ ನ್ಯಾಯಾಲಯ ಆದೇಶ

ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ಯೋಗೇಂದ್ರ ಹೊಡಘಟ್ಟ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ನಗರದ 42ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಜೆ ಪ್ರೀತ್‌ ಆದೇಶ ಮಾಡಿದ್ದಾರೆ.
D K Shivakumar
D K Shivakumar
Published on

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಬಿಜೆಪಿ ಮುಖಂಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಹಂಚಿಕೊಂಡಿದ್ದ ಆರೋಪ ಸಂಬಂಧ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಬಿ ಆರ್‌ ನಾಯ್ಡು​ ವಿರುದ್ಧ ಎಫ್​ಐಆರ್​ ದಾಖಲಿಸಿ, ತನಿಖೆ ನಡೆಸುವಂತೆ ಹೈಗ್ರೌಂಡ್ಸ್ ಪೊಲೀಸರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರ್ದೇಶನ ನೀಡಿದೆ.

ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ಯೋಗೇಂದ್ರ ಹೊಡಘಟ್ಟ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ನಗರದ 42ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಜೆ ಪ್ರೀತ್‌ ಆದೇಶ ಮಾಡಿದ್ದಾರೆ.

ಡಿ ಕೆ ಶಿವಕುಮಾರ್‌ ಮತ್ತು ಬಿ ಆರ್‌ ನಾಯ್ಡು ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣಾ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಮಾರ್ಚ್ 30ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: ಈಚೆಗೆ ಹುಬ್ಬಳ್ಳಿಯ ಪೊಲೀಸರು ಹಿಂದೂ ಕಾರ್ಯಕರ್ತ ಶ್ರೀಕಾಂತ್​ ಪೂಜಾರಿಯನ್ನು 31 ವರ್ಷದ ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರು. ಇದನ್ನು ಖಂಡಿಸಿ ರಾಜ್ಯ ಬಿಜೆಪಿ ಘಟಕದಿಂದ ಪ್ರತಿಭಟನೆಗಳು ನಡೆದಿದ್ದವು.

ಧರಣಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ, ಮಾಜಿ ಸಚಿವರಾದ ವಿ ಸುನೀಲ್​ ಕುಮಾರ್​, ಕೆ ಎಸ್​ ಈಶ್ವರಪ್ಪ, ಸಿ ಟಿ ರವಿ ಸಂಸದ ಪ್ರತಾಪ್​ ಸಿಂಹ ಸೇರಿದಂತೆ ಹಲವು ಮುಖಂಡರು ನಾನೂ ಕರಸೇವಕ ನನ್ನನ್ನು ಬಂಧಿಸಿ ಎಂಬುದಾಗಿ ಫಲಕಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದರು.

ಈ ಚಿತ್ರಗಳನ್ನು ತಿರುಚಿ ಕಾಂಗ್ರೆಸ್​ ಪಕ್ಷವು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೆ ಮಾಡುವ ಮೂಲಕ ವಿವಿಧ ವರ್ಗಗಳ ನಾಗರಿಕರ ನಡುವೆ ದ್ವೇಷ ಉತ್ತೇಜಿಸಿದ್ದಾರೆ. ಆ ಮೂಲಕ ಬಿಜೆಪಿ ಮುಖಂಡರ ವಿರುದ್ಧ ದ್ವೇಷ ಕಾರುವುದು ಮತ್ತು ಪ್ರಚೋದನೆ ಮಾಡುವುದಕ್ಕೆ ಮುಂದಾಗಿದ್ದಾರೆ. ಆಧಾರವಿಲ್ಲದೆ ಆರೋಪಗಳನ್ನು ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದರು.

ಈ ಪೋಸ್ಟ್​ನ್ನು ವಿಶ್ವದ ವಿವಿಧ ಭಾಗಗಳಲ್ಲಿ ಸಾವಿರಾರು ಜನ ವೀಕ್ಷಣೆ ಮಾಡಿದ್ದಾರೆ. ಇಂತಹ ಕೃತ್ಯಗಳನ್ನು ಮುಂದುವರೆಸಿದಲ್ಲಿ ಮತ್ತೆ ಇದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಲಿದ್ದಾರೆ. ಆದ್ದರಿಂದ, ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಿದ್ದರು.

Kannada Bar & Bench
kannada.barandbench.com