ವೃದ್ಧ ತಂದೆಯಿಂದ ಹೇಬಿಯಸ್‌ ಕಾರ್ಪಸ್‌ ಅರ್ಜಿ: ಕುಟುಂಬ ಸಮೇತ ಹಾಜರಾದ ಪುತ್ರ

ಜನವರಿ 24ರಂದು ಪೊಲೀಸರು ವಿವೇಕಾನಂದ ಶೆಟ್ಟಿ, ಆತನ ಪತ್ನಿ ಸಂಧ್ಯಾ, 4 ಮತ್ತು 6 ವರ್ಷದ ಇಬ್ಬರು ಮಕ್ಕಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಈ ಸಂದರ್ಭದಲ್ಲಿ ವಿವೇಕಾನಂದ ಅವರ ತಂದೆ, ತಾಯಿ ಮತ್ತು ಸಹೋದರಿಯೂ ಪೀಠದ ಮುಂದೆ ಹಾಜರಿದ್ದರು.
High Court of Karnataka
High Court of Karnataka

ಪತ್ನಿ ಮತ್ತು ಆಕೆಯ ಮೊದಲ ಇಬ್ಬರು ಪತಿಯರಿಗೆ ಜನಿಸಿದ ಮಕ್ಕಳ ಜೊತೆ ಜೀವನ ನಡೆಸುತ್ತಿರುವ ಉಡುಪಿ ಮೂಲದ ಹಿರಿಯ ನಾಗರಿಕೊಬ್ಬರ ಪುತ್ರನನ್ನು ಪೊಲೀಸರು ಇತ್ತೀಚೆಗೆ ಕರ್ನಾಟಕ ಹೈಕೋರ್ಟ್‌ ಮುಂದೆ ಹಾಜರುಪಡಿಸಿದರು. ಪತ್ನಿ ಮತ್ತು ಮಕ್ಕಳ ಜೊತೆಯೇ ಜೀವನ ನಡೆಸಲು ಇಚ್ಛಿಸಿರುವುದಾಗಿ ಆತ ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರನ್ನು ಹಾಜರು ಪಡಿಸಲು ಕೋರಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಇತ್ಯರ್ಥಪಡಿಸಿತು.

ಪುತ್ರ ವಿವೇಕಾನಂದ ಶೆಟ್ಟಿಯನ್ನು ಪತ್ತೆ ಮಾಡಿ, ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೋರಿ ಉಡುಪಿಯ ಕುಂದಾಪುರದ 63 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್‌ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್‌ ಮತ್ತು ಉಮೇಶ್‌ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಜನವರಿ 24ರಂದು ಪೊಲೀಸರು ವಿವೇಕಾನಂದ ಶೆಟ್ಟಿ, ಆತನ ಪತ್ನಿ ಸಂಧ್ಯಾ, 4 ಮತ್ತು 6 ವರ್ಷದ ಇಬ್ಬರು ಮಕ್ಕಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಈ ಸಂದರ್ಭದಲ್ಲಿ ವಿವೇಕಾನಂದ ಅವರ ತಂದೆ, ತಾಯಿ ಮತ್ತು ಸಹೋದರಿಯೂ ಪೀಠದ ಮುಂದೆ ಹಾಜರಿದ್ದರು.

ಆಗ ಪೀಠವು ವಿವೇಕಾನಂದ ಅವರನ್ನು ಪ್ರಶ್ನಿಸಲಾಗಿ ಅದಕ್ಕೆ ಅವರು “ಬೆಂಗಳೂರಿನ ಕೋರಮಂಗಲದ ತನ್ನ ಪತ್ನಿ, ಇಬ್ಬರು ಪುತ್ರರ ಜೊತೆ ನೆಲೆಸಲು ಇಚ್ಛೆ ಹೊಂದಿದ್ದೇನೆ” ಎಂದು ತಿಳಿಸಿದರು.

ಪೊಲೀಸರನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರು “ಒಂದು ವರ್ಷ ಎಂಟು ತಿಂಗಳಿಂದ ವಿವೇಕಾನಂದ ಅವರು ಬೆಂಗಳೂರಿನ ಕೋರಮಂಗಲದಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದಾರೆ” ಎಂದರು. ಇದನ್ನು ಆಲಿಸಿದ ಪೀಠವು “ಸಂಧ್ಯಾ ಅವರು ಮೊದಲ ಪತಿಯಿಂದ ಒಂದು ಗಂಡು ಮಗು ಮತ್ತು ಎರಡನೇ ಪತಿಯಿಂದ ಮತ್ತೊಂದು ಗಂಡು ಮಗು ಪಡೆದಿದ್ದಾರೆ. ಇವರ ಜೊತೆ ವಿವೇಕಾನಂದ ಅವರು ಕೋರಮಂಗಲದಲ್ಲಿ ನೆಲೆಸಿದ್ದಾರೆ ಎಂದು ಎಎಜಿ ತಿಳಿಸಿದ್ದಾರೆ” ಎಂದು ಆದೇಶದಲ್ಲಿ ದಾಖಲಿಸಿಕೊಂಡಿತು.

ನಾಪತ್ತೆಯಾಗಿದ್ದ ಪುತ್ರ ವಿವೇಕಾನಂದ ಅವರನ್ನು ಪತ್ತೆ ಹಚ್ಚಲು ಹೇಬಿಯಸ್‌ ಕಾರ್ಪಸ್‌ ಅರ್ಜಿ ದಾಖಲಿಸಲಾಗಿತ್ತು ಎಂದು ಆದೇಶದಲ್ಲಿ ದಾಖಲಿಸಲಾಗಿದೆ. “ವಿವೇಕಾನಂದ ಅವರು ಪತ್ನಿ ಹಾಗೂ ಪುತ್ರರ ಜೊತೆ ಪತ್ತೆಯಾಗಿರುವುದರಿಂದ ಅರ್ಜಿ ಇತ್ಯರ್ಥಪಡಿಸಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

Related Stories

No stories found.
Kannada Bar & Bench
kannada.barandbench.com