ರೇಣುಕಾಚಾರ್ಯ ಸಹೋದರ ದಾರುಕೇಶ್ವರಯ್ಯರಿಂದ ಜಾತಿ ಪ್ರಮಾಣ ಪತ್ರ ದುರ್ಬಳಕೆ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

ಪರಿಶಿಷ್ಟ ಜಾತಿಗೆ ಮೀಸಲಾದ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬೇಡ ಜಂಗಮ ಜಾತಿಯ ಪ್ರಮಾಣ ಪತ್ರ ಪಡೆದಿರುವ ಎಂ ಪಿ ದಾರುಕೇಶ್ವರಯ್ಯ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ ಎಂದು ಆಕ್ಷೇಪಿಸಲಾಗಿದೆ.
Karnataka High Court
Karnataka High Court

ಬಿಜೆಪಿ ಮುಖಂಡ ಎಂ ಪಿ ರೇಣುಕಾಚಾರ್ಯ ಸಹೋದರ ಎಂ ಪಿ ದಾರುಕೇಶ್ವರಯ್ಯ ಊಸರವಳ್ಳಿ ತರ ಬಣ್ಣ ಬದಲಾಯಿಸುವ ಮೂಲಕ ಬೇಡ ಜಂಗಮ ಜಾತಿಯ ಪ್ರಮಾಣ ಪತ್ರದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸರ್ಕಾರದ ಪರ ವಿಶೇಷ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ಬುಧವಾರ ವಿವರಿಸಿದರು.

ಪರಿಶಿಷ್ಟ ಜಾತಿಗೆ ಮೀಸಲಾದ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬೇಡ ಜಂಗಮ ಜಾತಿಯ ಪ್ರಮಾಣ ಪತ್ರ ಪಡೆದಿರುವ ಎಂ ಪಿ ದಾರುಕೇಶ್ವರಯ್ಯ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ ಎಂದು ಆಕ್ಷೇಪಿಸಿ ದಾಸರಹಳ್ಳಿಯ ಎಂ ಚಂದ್ರ ಬಿನ್ ಮುನಿಯಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಸರ್ಕಾರದ ಪರ ವಾದಿಸಿದ ವಿಶೇಷ ವಕೀಲ ಸಿ ಜಗದೀಶ್‌ ಅವರು ದಾರುಕೇಶ್ವರಯ್ಯ ಈ ಮೊದಲು ಬೆಂಗಳೂರು ಉತ್ತರ ತಹಶೀಲ್ದಾರ್ ಅವರಿಂದ ಪಡೆದಿದ್ದ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ರದ್ದಾಗಿತ್ತು. ಈಗ ಬೆಂಗಳೂರು ದಕ್ಷಿಣ ತಹಶೀಲ್ದಾರ್ ಅವರಿಂದ ಇದೇ ರೀತಿಯ ಜಾತಿ ಪ್ರಮಾಣ ಪತ್ರವನ್ನು ಪಡೆದಿದ್ದಾರೆ. ಎರಡೆರಡು ಬಾರಿ ಇಂತಹ ಪ್ರಮಾಣ ಪತ್ರ ಪಡೆದು ಬಣ್ಣ ಬದಲಾಯಿಸುವ ಮೂಲಕ ಕಾನೂನಿನ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ ಎಂದು ದೂರಿದರು.

ಇದನ್ನು ಅಲ್ಲಗಳೆದ ದಾರುಕೇಶ್ವರಯ್ಯ ಪರ ವಕೀಲರು ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸಮಯ ಕೋರಿದರು. ಇದನ್ನು ಪುರಸ್ಕರಿಸಿದ ಪೀಠವು ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಿತು. ಅಲ್ಲಿಯವರೆವಿಗೂ ಈ ಮೊದಲು ನೀಡಿದ್ದ ಆದೇಶದ ಅನುಸಾರ ದಾರುಕೇಶ್ವರಯ್ಯ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಬಳಕೆ ಮಾಡದಂತೆ ವಿಧಿಸಿದ್ದ ನಿರ್ಬಂಧವನ್ನು ವಿಸ್ತರಿಸಿತು. 

ಅರ್ಜಿದಾರ ಚಂದ್ರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಹಾಜರಾಗಿದ್ದರು. ವಕೀಲೆ ಜಿ ಎಸ್‌ ಕಾವ್ಯಶ್ರೀ ವಕಾಲತ್ತು ವಹಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com