ಮರಣದಂಡನೆ ಶಿಕ್ಷೆ ತಗ್ಗಿಸುವಿಕೆ: ಮಾರ್ಗಸೂಚಿ ರೂಪಿಸಲು ಸಾಂವಿಧಾನಿಕ ಪೀಠಕ್ಕೆ ಶಿಫಾರಸ್ಸು ಮಾಡಿದ ಸುಪ್ರೀಂ

ಮರಣದಂಡನೆ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಲಯಗಳು ಶಿಕ್ಷೆ ತಗ್ಗಿಸುವಾಗ ಆರೋಪಿಗಳು ಮತ್ತು ಅಪರಾಧದ ಬಗ್ಗೆ ಸಮಗ್ರ ವಿಶ್ಲೇಷಣೆ ಹೇಗೆ ಪಡೆಯಬಹುದು ಎಂಬುದನ್ನು ಅರಿಯಲು ಸ್ವಯಂಪ್ರೇರಿತವಾಗಿ ಪ್ರಕರಣದ ದಾಖಲಿಸಿದ್ದ ಸುಪ್ರೀಂ ಕೋರ್ಟ್‌.
Justice S Ravindra Bhat, CJI UU Lalit and Justice Sudhanshu Dhulia
Justice S Ravindra Bhat, CJI UU Lalit and Justice Sudhanshu Dhulia

ಮರಣದಂಡನೆ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಲಯಗಳು ಶಿಕ್ಷೆ ತಗ್ಗಿಸುವ ಬಗ್ಗೆ ಹೇಗೆ ಮತ್ತು ಯಾವಾಗ ನಿರ್ಧರಿಸಬೇಕು ಎನ್ನುವ ಕುರಿತು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಸುಪ್ರೀಂ ಕೋರ್ಟ್‌ ಸೋಮವಾರ ಸಾಂವಿಧಾನಿಕ ಪೀಠಕ್ಕೆ ಶಿಫಾರಸ್ಸು ಮಾಡಿದೆ.

ಈ ಕುರಿತ ಪ್ರಕರಣದ ವಿಚಾರಣೆಯನ್ನು ನಡೆಸಿದ ಸಿಜೆಐ ಯು ಯು ಲಲಿತ್‌ ಅವರ ನೇತೃತ್ವದ ನ್ಯಾಯಮೂರ್ತಿಗಳಾದ ಎಸ್‌ ರವೀಂದ್ರ ಭಟ್‌ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ಈ ನಿರ್ಧಾರ ಕೈಗೊಂಡಿತು.

"ಮರಣದಂಡನೆಯಂತಹ ಪ್ರಕರಣಗಳಲ್ಲಿ ಆರೋಪಿಗೆ ನೈಜ ಮತ್ತು ಅರ್ಥಪೂರ್ಣ ವಿಚಾರಣೆ ಒದಗಿಸುವ ಉದ್ದೇಶದಿಂದ ಈ ಪ್ರಕರಣವನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ಶಿಫಾರಸ್ಸು ಮಾಡುವುದು ಅಗತ್ಯವಿದೆ ಎನ್ನುವುದು ಈ ನ್ಯಾಯಾಲಯದ ಅಭಿಪ್ರಾಯವಾಗಿದೆ. ಈ ಕುರಿತ ಆದೇಶಕ್ಕಾಗಿ ಪ್ರಕರಣವನ್ನು ಸಿಜೆಐ ಅವರ ಮುಂದಿರಿಸಲು ಸೂಚಿಸಲಾಗಿದೆ," ಎಂದು ಪೀಠವು ಹೇಳಿತು.

ಮರಣದಂಡನೆ ಪ್ರಕರಣಗಳನ್ನು ವಿಚಾರಣೆ ನಡೆಸುವ ನ್ಯಾಯಾಲಯಗಳು ಶಿಕ್ಷೆ ತಗ್ಗಿಸುವಾಗ ಆರೋಪಿಗಳು ಮತ್ತು ಅಪರಾಧದ ಬಗ್ಗೆ ಸಮಗ್ರ ವಿಶ್ಲೇಷಣೆ ಹೇಗೆ ಪಡೆಯಬಹುದು ಎಂಬುದನ್ನು ಅರಿಯಲು ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿದ್ದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ವಿಚಾರಣಾ ನ್ಯಾಯಾಲಯವೊಂದು ತನಗೆ ಮರಣದಂಡನೆ ವಿಧಿಸಿದ್ದನ್ನು ಮತ್ತು ಮಧ್ಯಪ್ರದೇಶ ಹೈಕೋರ್ಟ್ ಅದನ್ನು ದೃಢಪಡಿಸಿದ್ದನ್ನು ಪ್ರಶ್ನಿಸಿ ಇರ್ಫಾನ್ ಅಲಿಯಾಸ್‌ ಭಯು ಮೇವಾಟಿ ಎಂಬಾತ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಲಯವು ಈ ಮೇಲಿನ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿತ್ತು.

ಪ್ರಸ್ತುತ ತನಿಖೆ ನಡೆಸುವ ಪ್ರೊಬೆಷನ್‌ ಅಧಿಕಾರಿ ಮರಣದಂಡನೆ ವಿಧಿಸಲ್ಪಟ್ಟ ವ್ಯಕ್ತಿಯ ಸಂದರ್ಶನ ಮಾಡುತ್ತಿದ್ದು ಅನೇಕ ಬಾರಿ ಅವರ ವಿಶ್ಲೇಷಣೆ ಮತ್ತು ವರದಿ ಆರೋಪಿಯ ಸಂಪೂರ್ಣ ವಿವರ ಪರಿಗಣಿಸುವುದಿಲ್ಲ ಮತ್ತು ವಿಚಾರಣೆಯ ಕೊನೆಯ ಹಂತದಲ್ಲಿ ನಡೆಸಿದ ಸಂದರ್ಶನಗಳನ್ನು ಇವು ಅವಲಂಬಿಸಿರುತ್ತವೆ ಎಂದು ಈ ಹಿಂದಿನ ವಿಚಾರಣೆ ವೇಳೆ ಪೀಠವು ಹೇಳಿದ್ದನ್ನು ಇಲ್ಲಿ ನೆನೆಯಬಹುದು. .

Related Stories

No stories found.
Kannada Bar & Bench
kannada.barandbench.com