ಶಾಸಕ ನಂಜೇಗೌಡ ಆಯ್ಕೆ ಪ್ರಕರಣ: ಮತ ಎಣಿಕೆ ವಿಡಿಯೋ ಸಲ್ಲಿಸಲು ಆಯೋಗಕ್ಕೆ ಹೈಕೋರ್ಟ್‌ ಆದೇಶ

“ಮತ ಎಣಿಕೆ ಕಾರ್ಯದ ವಿಡಿಯೋ ಸಿಗಲಿಲ್ಲ ಎಂದರೆ ಹೇಗೆ? ಆ.27ರಂದು ವಿಡಿಯೋವನ್ನು ಸಲ್ಲಿಸಬೇಕು. ಇಲ್ಲವಾದರೆ ಮುಂದೇನು ಮಾಡಬೇಕು ಎಂಬ ಬಗ್ಗೆ ಪರಿಶೀಲನೆ ಮಾಡಲು ಜಿಲ್ಲಾ ಚುನಾವಣಾಧಿಕಾರಿಯು ಮುಂದಿನ ವಿಚಾರಣೆಗೆ ಹಾಜರಾಗಬೇಕು” ಎಂದಿರುವ ನ್ಯಾಯಾಲಯ.
INC MLA K Y Nanje Gowda and Karnataka HC
INC MLA K Y Nanje Gowda and Karnataka HC
Published on

ಮಾಲೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆಯ ವಿಡಿಯೋವನ್ನು ಆಗಸ್ಟ್‌ 27ರಂದು ನ್ಯಾಯಾಲಯಕ್ಕೆ ಸಲ್ಲಿಸಬೇಕು. ತಪ್ಪಿದಲ್ಲಿ ಕೋಲಾರ ಜಿಲ್ಲಾ ಚುನಾವಣಾಧಿಕಾರಿ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರ್ದೇಶಿಸಿದೆ.

ವಿಧಾನಸಭೆ ಚುನಾವಣೆಯಲ್ಲಿ ಕೋಲಾರದ ಮಾಲೂರು ಕ್ಷೇತ್ರದಿಂದ ಶಾಸಕರಾಗಿ ಕಾಂಗ್ರೆಸ್‌ ಪಕ್ಷದ ಕೆ ವೈ ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ ಎಸ್ ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠ ನಡೆಸಿತು.

ಜಿಲ್ಲಾ ಚುನಾವಣಾಧಿಕಾರಿ ಪ್ರತಿನಿಧಿಸಿದ್ದ ವಕೀಲ ಶರತ್‌ ದೊಡ್ಡವಾಡ ಅವರು ಮತ ಎಣಿಕೆ ವೇಳೆ ವಿವಿ ಪ್ಯಾಟ್‌ ಎಣಿಕೆ ಮತ್ತು ಹೊಂದಾಣಿಕೆ ಕಾರ್ಯದ ಚಿತ್ರೀಕರಣದ ದೃಶ್ಯಾವಳಿ ಒಳಗೊಂಡ ಆರು ಕ್ಯಾಂಪಾಕ್ಟ್‌ ಡಿಸ್ಕ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಜೊತೆಗೆ, ಮತ ಎಣಿಕೆ ವೇಳೆ ಅಭ್ಯರ್ಥಿಗಳ ಏಜೆಂಟರಿಗೆ ನೀಡಲಾಗಿದ್ದ ಫಾರ್ಮ್‌ ನಂ.17(ಸಿ)ನ ನಕಲು ಪ್ರತಿಗಳನ್ನು ಸಲ್ಲಿಸಿದರು.  “ಮತ ಎಣಿಕೆ ಕಾರ್ಯದ ಸಂಪೂರ್ಣ ವಿಡಿಯೋವನ್ನು ಶೋಧಿಸಲಾಗುತ್ತಿದೆ. ಈವರೆಗೂ ಅದು ಪತ್ತೆಯಾಗಿಲ್ಲ. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ನೀಡಬೇಕು” ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಇದನ್ನು ಪರಿಗಣಿಸಿದ ಪೀಠವು “ಮತ ಎಣಿಕೆ ಕಾರ್ಯದ ವಿಡಿಯೋ ಸಿಗಲಿಲ್ಲ ಎಂದರೆ ಹೇಗೆ? ಆಗಸ್ಟ್‌ 27ರಂದು ವಿಡಿಯೋವನ್ನು ಸಲ್ಲಿಸಬೇಕು. ಇಲ್ಲವಾದರೆ ಮುಂದೇನು ಮಾಡಬೇಕು ಎಂಬ ಬಗ್ಗೆ ಪರಿಶೀಲನೆ ಮಾಡಲು ಜಿಲ್ಲಾ ಚುನಾವಣಾಧಿಕಾರಿಯು ಮುಂದಿನ ವಿಚಾರಣೆಗೆ ಹಾಜರಾಗಬೇಕು” ಎಂದು ಆದೇಶಿಸಿ, ವಿಚಾರಣೆ ಮುಂದೂಡಿತು.

Also Read
ಮಾಲೂರು ಕ್ಷೇತ್ರದ ಮತ ಎಣಿಕೆ ದೃಶ್ಯಾವಳಿ ಸಲ್ಲಿಸಲು ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ನಿರ್ದೇಶನ

ಮಾಲೂರು ವಿಧಾನಸಭೆ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಹಲವು ಲೋಪ ದೋಷಗಳಾಗಿವೆ. ಇದರಿಂದ ಆ ಕ್ಷೇತ್ರದಿಂದ ಶಾಸಕರಾಗಿ ಕೆ ವೈ ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಮಾಲೂರು ಕ್ಷೇತ್ರದ ವಿವಿ ಪ್ಯಾಟ್‌ ಎಣಿಕೆ ಮತ್ತು ಹೊಂದಾಣಿಕೆ ಕಾರ್ಯದ ವಿಡಿಯೋ ಒಳಗೊಂಡಿರುವ ಸಿ ಡಿ ಮತ್ತು ಫಾರ್ಮ್‌ ನಂ.17(ಸಿ)ನ ನಕಲು ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಚುನಾವಣಾಧಿಕಾರಿಗೆ ನ್ಯಾಯಾಲಯ ನಿರ್ದೇಶಿಸಿತ್ತು.

Kannada Bar & Bench
kannada.barandbench.com