ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಹೆಸರು ಕೇಳಿ ಬಂದಿದ್ದ ಭಾರತ ರಾಷ್ಟ್ರ ಸಮಿತಿ ಪಕ್ಷದ ಶಾಸಕರ ಖರೀದಿ ಪ್ರಕರಣವನ್ನು ಎಸ್‌ಐಟಿಯಿಂದ ಸಿಬಿಐಗೆ ವರ್ಗಾಯಿಸಿದ್ದ ಆದೇಶ ಪ್ರಶ್ನಿಸಿ ಭಾರತ ರಾಷ್ಟ್ರ ಸಮಿತಿ (ಹಿಂದಿನ ತೆಲಂಗಾಣ ರಾಷ್ಟ್ರ ಸಮಿತಿ) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಬುಧವಾರ ತೀರ್ಪು ಕಾಯ್ದಿರಿಸಿದೆ [ತೆಲಂಗಾಣ ಸರ್ಕಾರ ಮತ್ತು ತೆಲಂಗಾಣ ಬಿಜೆಪಿ ಘಟಕದ ನಡುವಣ ಪ್ರಕರಣ].
ಇದಕ್ಕೂ ಮುನ್ನ ಮುಖ್ಯ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮತ್ತು ನ್ಯಾಯಮೂರ್ತಿ ಎನ್ ತುಕಾರಾಂಜಿ ಅವರಿದ್ದ ಪೀಠ ರಾಜ್ಯ ಸರ್ಕಾರದ ವಾದವನ್ನು ಸುದೀರ್ಘವಾಗಿ ಆಲಿಸಿತು.
ಆರೋಪಿಗಳನ್ನು ಮುಖ್ಯಮಂತ್ರಿಯೇ ಸಾರ್ವಜನಿಕವಾಗಿ ಖಂಡಿಸಿದ್ದು ಇಂತಹ ಘಟನೆಗಳು ಎಸ್‌ಐಟಿ ನಡೆಸುವ ತನಿಖೆಯ ನ್ಯಾಯಸಮ್ಮತತೆಯನ್ನು ಪ್ರಶ್ನಿಸುತ್ತವೆ ಎಂದು ತಿಳಿಸಿ ನ್ಯಾ. ಬಿ ವಿಜಯಸೇನ್ ರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಪ್ರಕರಣದ ತನಿಖೆಯನ್ನುಈ ಹಿಂದೆ ಸಿಬಿಐಗೆ ವರ್ಗಾಯಿಸಿತ್ತು.
ಬುಧವಾರದ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ದುಶ್ಯಂತ್ ದವೆ ಅವರು “ಕೇಂದ್ರ ಬಿಜೆಪಿ ಸರ್ಕಾರದ ಅಡಿಯಲ್ಲಿ ಸಿಬಿಐ ಕಾರ್ಯನಿರ್ವಹಿಸುವುದರಿಂದ ಬಿಜೆಪಿ ನಾಯಕರ ವಿರುದ್ಧದ ತನಿಖೆಯನ್ನು ಸಿಬಿಐಗೆ ವಹಿಸುವುದು ಅತಾರ್ಕಿಕವಾಗುತ್ತದೆ” ಎಂದರು.
ದವೆ ಅವರ ವಾದದ ಪ್ರಮುಖಾಂಶಗಳು
ಗೌರವಾನ್ವಿತ ನ್ಯಾಯಮೂರ್ತಿಗಳು (ನ್ಯಾ. ಬಿ ವಿಜಯಸೇನ್ ರೆಡ್ಡಿ) ಸಿಬಿಐ ತನಿಖೆಗೆ ಆದೇಶ ನೀಡುವಲ್ಲಿ ಗಂಭೀರ ಲೋಪ ಎಸಗಿದ್ದಾರೆ. ಆರೋಪಿಗಳೇ ಖುದ್ದು ತನಿಖೆ ಮಾಡುತ್ತಾರೆಯೇ? ನೇರವಾಗಿ ಬಿಜೆಪಿ ಅಡಿಯಲ್ಲಿರುವ ಸಿಬಿಐ ತನಿಖೆ ನಡೆಸಲು ಸಾಧ್ಯವೇ? ಇದು ಯಾವ ರೀತಿಯ ಅಧಿಕಾರ ಚಲಾವಣೆ? ನಿಜವಾಗಿಯೂ ಇದು ಸಮರ್ಥನೀಯವೇ? ನ್ಯಾಯಿಕ ತತ್ವಗಳನ್ನಾಧರಿಸಿ ವಿವೇಚನೆ ಬಳಸಬೇಕಿತ್ತು.
ಏಕಸದಸ್ಯ ಪೀಠದ ಅವಲೋಕನಗಳು ಸಮರ್ಥನೀಯವಲ್ಲ. ರಾಜ್ಯ ಪೊಲೀಸರನ್ನು ತನಿಖೆ ನಡೆಸುವಂತೆ ಸರ್ಕಾರ ಕೇಳಿದ ಮಾತ್ರಕ್ಕೆ ನ್ಯಾಯಾಲಯಗಳು ಪೊಲೀಸರ ಮೇಲಿನ ನಂಬಿಕೆ ಕಳೆದುಕೊಳ್ಳುವುದಿಲ್ಲ.
ಮುಖ್ಯಮಂತ್ರಿಗಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ, ಅವರು ಪತ್ರಿಕಾ ಹೇಳಿಕೆ ನೀಡಿದ ನಂತರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಲ್ಲ. ಪತ್ರಿಕಾಗೋಷ್ಠಿಯ ನಂತರ ಒಂದಲ್ಲ ಒಂದು ಆದೇಶದಿಂದ ತನಿಖೆ ಸ್ಥಗಿತಗೊಂಡಿದೆ.
ಮುಖ್ಯಮಂತ್ರಿಯವರು ನಡೆಸಿದ ಪತ್ರಿಕಾಗೋಷ್ಠಿಯು ತನಿಖೆಯ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ಸಾಬೀತುಪಡಿಸಲು ಪ್ರತಿವಾದಿಗಳು ವಿಫಲರಾಗಿದ್ದಾರೆ.
ಎಸ್‌ಐಟಿಯ ನಾಲ್ವರು ಹಿರಿಯ ಅಧಿಕಾರಿಗಳ ವಿರುದ್ಧ ಯಾವುದೇ ಆರೋಪಗಳಿಲ್ಲ. ಪತ್ರಿಕಾಗೋಷ್ಠಿಯು ತನಿಖೆಯನ್ನು ಯಾವ ರೀತಿ ಹಸ್ತಕ್ಷೇಪ ಮಾಡಲು ಸಾಧ್ಯ?
ಪ್ರತಿವಾದಿಗಳ ಸಮರ್ಥನೆ
ಮತ್ತೊಂದೆಡೆ, ಏಕಸದಸ್ಯ ಪೀಠದ ಆದೇಶವನ್ನು ಪ್ರತಿವಾದಿಗಳು ಸಮರ್ಥಿಸಿಕೊಂಡರು. ವಸ್ತುನಿಷ್ಠತೆಯ ಸಮಸ್ಯೆಯಿದ್ದಾಗ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಸುಪ್ರೀಂ ಕೋರ್ಟ್ ವಿವಿಧ ಪ್ರಕರಣಗಳಲ್ಲಿ ಅಭಿಪ್ರಾಯಪಟ್ಟಿದೆ ಎಂದರು.
ಎಸ್‌ಐಟಿಯಲ್ಲಿ ಮೂವರು ಮಾತ್ರ ಐಪಿಎಸ್ ಅಧಿಕಾರಿಗಳಿದ್ದು ಉಳಿದವರು ರಾಜ್ಯ ಸರ್ಕಾರದ ಅಧಿಕಾರಿಗಳು. ಅವರು ಮುಖ್ಯಮಂತ್ರಿಗಳ ನೇರ ಹತೋಟಿಯಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿ ನ್ಯಾಯಯುತ ತನಿಖೆ ಸಾಧ್ಯವೇ ಎಂದು ಪ್ರಶ್ನಿಸಿದರು.