ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ಸಚಿವ ಜಮೀರ್‌ ಅಹಮದ್‌ ಖಾನ್‌ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ತಡೆ

MLA B Z Zameer Ahmed Khan and Karnataka HC
MLA B Z Zameer Ahmed Khan and Karnataka HC
Published on

ಚುನಾವಣಾ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಜಮೀರ್ ಅಹಮದ್‌ ಖಾನ್‌ ವಿರುದ್ಧದ ದೋಷಾರೋಪ ಪಟ್ಟಿಯನ್ನು ಆಧರಿಸಿದ ಮುಂದಿನ ವಿಚಾರಣಾ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

‘ನನ್ನ ವಿರುದ್ಧ ದಾಖಲಿಸಲಾಗಿರುವ ದೋಷಾರೋಪ ಪಟ್ಟಿ ರದ್ದುಪಡಿಸಬೇಕು’ ಎಂದು ಕೋರಿ ಸಚಿವ ಜಮೀರ್ ಅಹಮದ್‌ ಖಾನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ ನಡೆಸುವ ನ್ಯಾ. ಕೃಷ್ಣ ಎಸ್.ದೀಕ್ಷಿತ್‌ ಅವರ ವಿಶೇಷ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಮನವಿ ಆಲಿಸಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವಾದ 42ನೇ ಎಸಿಎಂಎಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಯ ಮುಂದಿನ ವಿಚಾರಣಾ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಿತು.

ಹಿನ್ನೆಲೆ:

‘ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನವಲಗುಂದದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮಕ್ಕೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿರಲಿಲ್ಲ. ಜಮೀರ್ ಅಹ್ಮದ್‌ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ’ ಎಂದು ಆರೋಪಿಸಿ 2018ರ ಮೇ 5ರಂದು ಚುನಾವಣಾ ಅಧಿಕಾರಿಗಳು ದೂರು ದಾಖಲಿಸಿದ್ದರು.

ಇದರನ್ವಯ ಜಮೀರ್ ಅಹ್ಮದ್‌ ವಿರುದ್ಧ ತನಿಖೆ ನಡೆಸಿದ್ದ ಪೊಲೀಸರು ಭಾರತೀಯ ದಂಡ ಸಂಹಿತೆ–1860ರ ಕಲಂ 171(ಎಚ್‌) ಮತ್ತು 34ನೇ ಅಡಿಯಲ್ಲಿ 42ನೇ ಎಸಿಎಂಎಂನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Kannada Bar & Bench
kannada.barandbench.com