ನ್ಯಾಯಾಲಯಗಳು ಮತ್ತು ನ್ಯಾಯಾಧೀಶರಿಗೆ ಒದಗಿಸುವ ಸೌಲಭ್ಯಗಳ ಸುಧಾರಣೆಗೆ, ಉನ್ನತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಕಷ್ಟು ಕೆಲಸ ಮಾಡಿದ್ದರೂ ನ್ಯಾಯಾಂಗ ಹೈಜಾಕ್ ಆಗಿದೆ ಎಂಬ ಆರೋಪ ಇನ್ನೂ ಕೇಳಿಬರುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಶನಿವಾರ ಬೇಸರ ವ್ಯಕ್ತಪಡಿಸಿದರು.
ʼಆಪ್ ಕಿ ಅದಾಲತ್" ಕಾರ್ಯಕ್ರಮದಲ್ಲಿ ಇಂಡಿಯಾ ಟಿವಿಯ ರಜತ್ ಶರ್ಮಾ ಅವರ ಪ್ರಶ್ನೆಗಳಿಗೆ ರಿಜಿಜು ಪ್ರತಿಕ್ರಿಯಿಸಿದರು.
ಸಂದರ್ಶನದ ಪ್ರಮುಖಾಂಶಗಳು
ಕೋರ್ಟ್ ಹಾಲ್‌ಗಳು, ವಕೀಲರ ಚೇಂಬರ್ ಇತ್ಯಾದಿಗಳಿಗಾಗಿ 8.5 ವರ್ಷಗಳಲ್ಲಿ ಪ್ರಧಾನಿ ಮೋದಿ ಸಾಕಷ್ಟು ಪ್ರಮಾಣದಲ್ಲಿ ನಿಧಿ ಒದಗಿಸಿದ್ದಾರೆ. ನ್ಯಾಯಾಂಗಕ್ಕೆ ₹ 9,000 ಕೋಟಿ ಹಣವನ್ನು ನೀಡಲಾಗಿದ್ದು ಬೇರಾವುದೇ ಸರ್ಕಾರ ಈ ಕೆಲಸ ಮಾಡಿಲ್ಲ. ಇಷ್ಟೆಲ್ಲಾ ಕೆಲಸ ಮಾಡಿದರೂ ನಮ್ಮನ್ನು ನ್ಯಾಯಾಂಗ ಹೈಜಾಕ್ ಮಾಡಿದವರು ಎಂದು ಕರೆಯಲಾಗುತ್ತಿದೆ. ಹಾಗೆ ಹೇಳುವವರ ಆಲೋಚನೆಯಲ್ಲೇ ಸಮಸ್ಯೆ ಇದೆ.
ದಿವಂಗತ ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನ್ಯಾಯಾಂಗವನ್ನು ನಿಯಂತ್ರಿಸಲು ಕಾಂಗ್ರೆಸ್ ಸರ್ಕಾರ ಯತ್ನಿಸಿತ್ತು. ಸೇವಾ ಹಿರಿತನ ಕಡೆಗಣಿಸಿ ಕಿರಿಯರನ್ನು ಹಿರಿಯರನ್ನಾಗಿಸಲಾಯಿತು (ಪದೋನ್ನತಿ ಮಾಡಲಾಯಿತು). ತುರ್ತು ಪರಿಸ್ಥಿತಿ ಘೋಷಿಸಲಾಯಿತು ಮತ್ತು ನ್ಯಾಯಾಂಗವನ್ನು ನಿಯಂತ್ರಿಸಲಾಯಿತು. ಹಾಗೆ ನಿಯಂತ್ರಿಸಿದವರೇ ಇಂದು ನಮ್ಮನ್ನು ದೂರುತ್ತಿದ್ದಾರೆ.
(ಸಂದರ್ಶಕ ಶರ್ಮಾ ಅವರ ಮಾತೊಂದಕ್ಕೆ ಪ್ರತಿಕ್ರಿಯಿಸುತ್ತಾ) ನ್ಯಾಯಾಧೀಶರ ಹುದ್ದೆಗೆ ಶಿಫಾರಸು ಮಾಡಲಾದ ಅಭ್ಯರ್ಥಿಗಳ ಬಗ್ಗೆ ಗುಪ್ತಚರ ಸಂಸ್ಥೆಗಳು ಒದಗಿಸಿದ ಗೌಪ್ಯ ಮಾಹಿತಿಯನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಬಹಿರಂಗಪಡಿಸಬಾರದಿತ್ತು
ಈ ವಿಷಯದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಆದರೆ ಸೂಕ್ತ ವೇದಿಕೆಯಲ್ಲಿ ಅದಕ್ಕೆ ಉತ್ತರ ನೀಡಲಾಗುವುದು.
(ಹಿರಿಯ ವಕೀಲ ಸಲಿಂಗ ಮನೋಧರ್ಮದ ಸೌರಭ್ ಕಿರ್ಪಾಲ್ ಅವರಿಗೆ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಲು ಮೀನಮೇಷ ಎಣಿಸುತ್ತಿರುವ ಕುರಿತಂತೆ ಇಂಡಿಯಾ ಟಿವಿ ಕೇಳಿದ ತೀಕ್ಷ್ಣ ಪ್ರಶ್ನೆಗೆ ಉತ್ತರಿಸುತ್ತಾ ) "ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆ ಗೌಪ್ಯವಾಗಿದ್ದು ನಾವು ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲದ ವಿಷಯಗಳಿವೆ. ಆದರೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಚೆನ್ನಾಗಿ ಯೋಚಿಸಿಯೇ ಮಾಡಿರುತ್ತದೆ. ಹೀಗಾಗಿ, ಅಂತಹ ವಿಷಯಗಳು ಸರ್ಕಾರದಿಂದಲೇ ಆಗಲೀ ನ್ಯಾಯಾಂಗದಿಂದಲೇ ಆಗಲೀ ಸಾರ್ವಜನಿಕ ವೇದಿಕೆಯಲ್ಲಿ ಬಹಿರಂಗಗೊಳ್ಳಬಾರದು... ಈ ವಿಷಯಗಳನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಸಾರ್ವಜನಿಕ ವೇದಿಕೆಗೆ ತಂದಿದೆ. ನಾನು ಇದಕ್ಕೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ನಾನು ಇದಕ್ಕೆ ಸೂಕ್ತ ವೇದಿಕೆಯಲ್ಲಿ ಉತ್ತರಿಸುತ್ತೇನೆ. ನಾವು ಪ್ರಧಾನಿ ಮೋದಿಯವರ ಚಿಂತನೆಗೆ ಅನುಗುಣವಾಗಿ ಕೆಲಸ ಮಾಡುತ್ತೇವೆ.
ನ್ಯಾಯಾಧೀಶರು ಹೆಚ್ಚು ಕೆಲಸ ಮಾಡುತ್ತಿದ್ದು ಅವರಿಗೆ ರಜೆ ಮತ್ತು ವಿರಾಮ ಅಗತ್ಯವಿದೆ. ಕೆಲಸದ ಹೊರೆ ಹೆಚ್ಚಿರುವುದರಿಂದ ಭಾರತೀಯ ನ್ಯಾಯಾಧೀಶರನ್ನು ವಿದೇಶದ ನ್ಯಾಯಾಧೀಶರೊಂದಿಗೆ ಹೋಲಿಸಬಾರದು.