ನಾಲ್ಕು ವರ್ಷಗಳ ಹಳೆಯ ಟ್ವೀಟ್ ಆಧರಿಸಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಆಲ್ಟ್‌ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರಿಗೆ ಶುಕ್ರವಾರ ದೆಹಲಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಜುಬೈರ್ ಜಾಮೀನು ಮಂಜೂರು ಮಾಡಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ದೇವೇಂದರ್ ಕುಮಾರ್ ಜಂಗಾಲ ಅವರು ಯಾರ ಟ್ವೀಟ್ ಆಧರಿಸಿ ಪೊಲೀಸರು ಜುಬೈರ್ ವಿರುದ್ಧ ಪ್ರಕರಣ ದಾಖಲಿಸಿದ್ದರೋ ಆ ಖಾತೆಯ ಗುರುತು ಪತ್ತೆ ಮಾಡುವಲ್ಲಿ ವಿಫಲವಾಗಿದ್ದಾರೆ ಎಂದು ಆದೇಶದಲ್ಲಿ ಚಾಟಿ ಬೀಸಿದೆ.
ಆಲ್ಟ್‌ನ್ಯೂಸ್‌ಗೆ ನೀಡಿರುವ ಆರ್ಥಿಕ ಸಹಾಯವು ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ) ನಿಬಂಧನೆಗಳಿಗೆ ಅನುಗುಣವಾಗಿದೆ ಎಂದು ಮೇಲ್ನೋಟಕ್ಕೆ ತೋರುತ್ತದೆ ಎಂದು ನ್ಯಾಯಾಧೀಶರು ಆದೇಶದಲ್ಲಿ ಹೇಳಿದ್ದಾರೆ.
ಸಂಬಂಧಿತ ಇಲಾಖೆಗೆ ತಿಳಿಸದೇ ಜುಬೈರ್ ಅವರು ಇತರೆ ದೇಶಗಳಿಂದ ಆರ್ಥಿಕ ಸಹಾಯ ಪಡೆದಿದ್ದು, ಎಫ್‌ಸಿಆರ್‌ಎ ಉಲ್ಲಂಘಿಸಿದ್ದಾರೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಅತುಲ್ ಶ್ರೀವಾಸ್ತವ ಆರೋಪಿಸಿದ್ದರು.
ಆಲ್ಟ್‌ನ್ಯೂಸ್‌ಗೆ ಭಾರತೀಯ ನಾಗರಿಕರು ಮತ್ತು ಭಾರತದಲ್ಲಿ ಬ್ಯಾಂಕ್ ಖಾತೆ ಹೊಂದಿರುವವರು ಮಾತ್ರ ಆರ್ಥಿಕ ಸಹಾಯ ಮಾಡಬಹುದಾಗಿದೆ ಎಂದು ಜುಬೈರ್ ವಕೀಲೆ ವೃಂದಾ ಗ್ರೋವರ್ ವಾದಿಸಿದ್ದರು. “ವಿದೇಶಿ ದೇಣಿಗೆಯನ್ನು ತಡೆಯುವುದಕ್ಕೆ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಆರೋಪಿಯು ಕೈಗೊಂಡಿದ್ದಾರೆ. ಎಫ್‌ಸಿಆರ್‌ಎ ಸೆಕ್ಷನ್ 39ರ ಅಡಿ ಎಲ್ಲಾ ರೀತಿಯಲ್ಲೂ ಶ್ರದ್ಧೆವಹಿಸಿದ್ದಾರೆ ಎಂಬುದು ಅವರು ಸಲ್ಲಿಸಿರುವ ದಾಖಲೆಗಳಿಂದ ಮೇಲ್ನೋಟಕ್ಕೆ ತಿಳಿಯುತ್ತದೆ” ಎಂದು ನ್ಯಾಯಾಲಯ ಉಲ್ಲೇಖಿಸಿದೆ.
ಟ್ವಿಟರ್ ಬಳಕೆದಾರರೊಬ್ಬರು ನೀಡಿದ ದೂರನ್ನು ಆಧರಿಸಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಇಲ್ಲಿಯವರೆಗೂ ದೂರು ನೀಡಿದ ಟ್ವಿಟರ್ ಬಳಕೆದಾರರ ಗುರುತು ಪತ್ತೆ ಮಾಡಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಸಿಆರ್‌ಪಿಸಿ ಸೆಕ್ಷನ್ 161ರ ಅಡಿ ಇದುವರೆಗೂ ಬಾಧಿತರ ಹೇಳಿಕೆ ದಾಖಲಿಸಿಕೊಳ್ಳಲಾಗಿಲ್ಲ. ಅಲ್ಲದೇ, ಟ್ವೀಟ್‌ನಿಂದ ಬಾದಿತರಾಗಿರುವ ಯಾರೊಬ್ಬರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿಲ್ಲ ಎಂದು ಪೀಠ ಹೇಳಿದೆ.
ಆರೋಪಿಯು 2014ಕ್ಕಿಂತ ಮುಂಚೆ ಮತ್ತು 2014ರ ನಂತರ ಎಂಬ ಪದಗಳನ್ನು ತಮ್ಮ ಟ್ವೀಟ್‌ನಲ್ಲಿ ಬಳಸಿದ್ದಾರೆ. ಇದು ಆಡಳಿತರೂಢ ಪಕ್ಷವನ್ನು ಗುರಿಯಾಗಿಸಿಕೊಂಡು ಮಾಡಿರುವ ಟ್ವೀಟ್ ಎಂದು ಪ್ರಾಸಿಕ್ಯೂಷನ್ ಹೇಳಿತ್ತು. ಇದಕ್ಕೆ ನ್ಯಾಯಾಲಯವು ರಾಜಕೀಯ ಪಕ್ಷಗಳನ್ನು ಟೀಕಿಸುವುದಕ್ಕೆ ಐಪಿಸಿ ಸೆಕ್ಷನ್ 153ಎ ಅಥವಾ 295ಎ ಅಡಿ ಪ್ರಕರಣ ದಾಖಲಿಸಲಾಗದು. “ಭಾರತೀಯ ಪ್ರಜಾಪ್ರಭುತ್ವ, ರಾಜಕೀಯ ಪಕ್ಷಗಳು ಟೀಕೆಗೆ ಮುಕ್ತವಾಗಿವೆ. ರಾಜಕೀಯ ಪಕ್ಷಗಳು ತಮ್ಮ ನೀತಿಗಳನ್ನು ಜನರು ಟೀಕಿಸುವುದರಿಂದ ತಪ್ಪಿಸಿಕೊಳ್ಳಲಾಗದು” ಎಂದು ನ್ಯಾಯಾಲಯ ಹೇಳಿದೆ.
ಜುಬೈರ್ ₹50 ಸಾವಿರ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಒಂದು ಭದ್ರತೆ ಒದಗಿಸಬೇಕು. ಅನುಮತಿ ಪಡೆಯದೆ ದೇಶ ತೊರೆಯುವಂತಿಲ್ಲ ಮತ್ತು ಪಾಸ್‌ಪೋರ್ಟ್ ಅನ್ನು ತನಿಖಾ ಸಂಸ್ಥೆಯ ವಶಕ್ಕೆ ನೀಡಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯವು ವಿಧಿಸಿದೆ.
ಮೊದಲಿಗೆ ಜುಬೈರ್ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 153ಎ (ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಬಿತ್ತುವುದು) ಮತ್ತು 295 (ಪೂಜಾ ಸ್ಥಳ ಅಥವಾ ಯಾವುದೇ ಸಮೂಹದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವುದು) ಅಡಿ ಪ್ರಕರಣ ದಾಖಲಿಸಲಾಗಿತ್ತು. ಆನಂತರ ಎಫ್‌ಸಿಆರ್‌ಎ ಸೆಕ್ಷನ್ 35, ಐಪಿಸಿ ಸೆಕ್ಷನ್ 295ಎ (ಉದ್ದೇಶಪೂರ್ವಕವಾಗಿ ಧಾರ್ಮಿಕ ನಂಬಿಕೆಗಳಿಗೆ ಅವಮಾನಿಸಿ ನಿರ್ದಿಷ್ಟ ಧಾರ್ಮಿಕ ಗುಂಪಿನ ಪ್ರಚೋದನೆ), 201 (ಸಾಕ್ಷ್ಯ ನಾಶ) ಮತ್ತು 120ಬಿ (ಕ್ರಿಮಿನಲ್ ಪಿತೂರಿ) ಅಡಿ ಪ್ರಕರಣ ದಾಖಲಿಸಲಾಗಿತ್ತು.
ದೆಹಲಿ ನ್ಯಾಯಾಲಯವು ಜಾಮೀನು ನೀಡಿದ್ದರೂ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿತರಾಗಿರುವುದರಿಂದ ಜುಬೈರ್ ನ್ಯಾಯಾಂಗ ಬಂಧನ ಮುಂದುವರಿಯಲಿದೆ.