ಮೋಹನ್‌ಲಾಲ್‌ ಆನೆ ದಂತ ಪ್ರಕರಣ: ಕೇಸ್ ಹಿಂಪಡೆಯಲು ಕೋರಿದ್ದ ಸರ್ಕಾರದ ಅರ್ಜಿ ಹೊಸದಾಗಿ ಆಲಿಸಲು ಕೇರಳ ಹೈಕೋರ್ಟ್ ಸೂಚನೆ

ತನ್ನ ವಿರುದ್ಧದ ವಿಚಾರಣೆ ಹಿಂಪಡೆಯಲು ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಟ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
Mohanlal
Mohanlal Facebook
Published on

ಅಕ್ರಮವಾಗಿ ಆನೆ ದಂತವನ್ನು ಸುಪರ್ದಿನಲ್ಲಿರಿಸಿಕೊಂಡಿದ್ದ ದಶಕದಷ್ಟು ಹಳೆಯದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧದ ವಿಚಾರಣೆ ಹಿಂಪಡೆಯುವುದಾಗಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿ ವಜಾಗೊಳಿಸಿದ್ದ ಪೆರುಂಬವೂರ್ ಜೆಎಫ್‌ಸಿಎಂ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಲಯಾಳಂನ ಹಿರಿಯ ನಟ ಮೋಹನ್‌ಲಾಲ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ [ವಿ ಮೋಹನ್‌ಲಾಲ್‌ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].

ಆದರೆ ಪೆರುಂಬವೂರ್ ನ್ಯಾಯಾಲಯದ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಾಲಯ ಸರ್ಕಾರದ ಮನವಿಯನ್ನು ಹೊಸದಾಗಿ ಪರಿಗಣಿಸುವಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಸೂಚಿಸಿದೆ. ಸರ್ಕಾರದ ಮನವಿಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಮೋಹನ್‌ಲಾಲ್‌ ಪರವಾಗಿ ತೀರ್ಪು ನೀಡಿದರೆ ಆಗ ಅವರು ನಿರಾಳವಾಗಲು ಅವಕಾಶವಾಗುತ್ತದೆ.

ನ್ಯಾ. ಎ ಬದರುದ್ದೀನ್‌ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಎರಡು ಜೋಡಿ ದಂತಗಳನ್ನು ಅಕ್ರಮವಾಗಿ ಮೋಹನ್‌ ಲಾಲ್‌ ಅವರು ಇರಿಸಿಕೊಂಡಿದ್ದ ಪ್ರಕರಣ ಇದಾಗಿದ್ದು  ವನ್ಯಜೀವಿ (ರಕ್ಷಣೆ) ಕಾಯಿದೆ-1972ರ ನಿಬಂಧನೆಗಳ ಅಡಿ ಅವರು ಅಪರಾಧ ಎಸಗಿದ್ದಾರೆ ಎಂದು ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿತ್ತು.

ಆದರೆ, ಆನೆ ದಂತಗಳನ್ನು ಕಾನೂನುಬದ್ಧವಾಗಿ ಪಡೆಯಲಾಗಿದೆ ಎಂದು ಮೋಹನ್ ಲಾಲ್ ಸಮರ್ಥಿಸಿಕೊಂಡಿದ್ದರು. ಅಲ್ಲದೆ ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೇರಳ ಸರ್ಕಾರ ಅವರಿಗೆ ದಂತ ಮಾಲೀಕತ್ವದ ಪ್ರಮಾಣಪತ್ರ ನೀಡಿತ್ತು. ಆ ಬಳಿಕ ಅವರ ವಿರುದ್ಧದ ಪ್ರಕರಣ ಹಿಂಪಡೆಯಲು ರಾಜ್ಯ ಸರ್ಕಾರ ನಿರಾಕ್ಷೇಪಣಾ ಪತ್ರವನ್ನೂ ನೀಡಿತ್ತು.

Also Read
‘ವರಾಹರೂಪಂ’ ಹಕ್ಕುಸ್ವಾಮ್ಯ ಉಲ್ಲಂಘನೆ: ನಟ ಪೃಥ್ವಿರಾಜ್ ವಿರುದ್ಧದ ಎಫ್ಐಆರ್‌ಗೆ ಕೇರಳ ಹೈಕೋರ್ಟ್ ತಡೆ

ಈ ಹಿನ್ನೆಲೆಯಲ್ಲಿ ಪ್ರಕರಣ ಹಿಂಪಡೆಯುವಂತೆ ಸರ್ಕಾರ ಮಾಡಿದ್ದ ಮನವಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜೂನ್ 2022ರಲ್ಲಿ ವಜಾಗೊಳಿಸಿತ್ತು. ಈ ಹಂತದಲ್ಲಿ ಆರೋಪಿ ಮೋಹನ್‌ ಲಾಲ್‌ ಅವರಿಗೆ ನೀಡಲಾದ ಮಾಲೀಕತ್ವ ಪ್ರಮಾಣಪತ್ರದ ಸಿಂಧುತ್ವ ಕುರಿತಂತೆ ಹೈಕೋರ್ಟ್‌ ಇನ್ನೂ ತೀರ್ಪು ನೀಡಬೇಕಿರುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಇನ್ನೂ ಮುಂದುವರಿಸಬೇಕೆ ಬೇಡವೇ ಎನ್ನುವ ಬಗ್ಗೆ ಪರಿಶೀಲಿಸುವುದು ನ್ಯಾಯದ ಹಿತಾಸಕ್ತಿಯಾಗುತ್ತದೆ ಎಂದು ಅವರು ಹೇಳಿದರು.

ಆದೇಶ ಪ್ರಶ್ನಿಸಿ ಸರ್ಕಾರ ಹಾಗೂ ಮೋಹನ್‌ ಲಾಲ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ವ್ಯಾಪಕವಾದ ವಿಚಾರಣೆ ನಡೆಸಿದ ಹೈಕೋರ್ಟ್‌, ʼಮ್ಯಾಜಿಸ್ಟ್ರೇಟ್‌ ಆದೇಶ ಪ್ರಶ್ನಿಸಲು ಮೋಹನ್‌ಲಾಲ್‌ ಅವರಿಗೆ ವಿಚಾರಣಾ ಕೋರಿಕೆಯ ಅಧಿಕಾರ ಇಲ್ಲದಿರಬಹುದು, ಸರ್ಕಾರ ಮಾತ್ರ ಆದೇಶ ಪ್ರಶ್ನಿಸಬಹುದಿತ್ತು ಎಂದು ಹೇಳಿತ್ತು. ಬಳಿಕ ಮರುಪರಿಶೀಲನಾ ಅರ್ಜಿ ಸಲ್ಲಿಸಿದ ರಾಜ್ಯ ಸರ್ಕಾರ ಮ್ಯಾಜಿಸ್ಟ್ರೇಟ್‌ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು.

ಅಂತಿಮವಾಗಿ ವಿಚಾರಣಾ ಕೋರಿಕೆಯ ಅಧಿಕಾರದ ಕೊರತೆಯ ಕಾರಣಕ್ಕೆ ಮೋಹನ್‌ಲಾಲ್‌ ಅವರ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ ಸರ್ಕಾರದ ಮನವಿಗೆ ಭಾಗಶಃ ಅನುಮತಿ ನೀಡಿದೆ. ಹೊಸದಾಗಿ ಅರ್ಜಿ ಆಲಿಸುವಂತೆ ಸೂಚಿಸಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಪ್ರಕರಣವನ್ನು ಮರಳಿಸಿದೆ.

Kannada Bar & Bench
kannada.barandbench.com