Justice S R Krishna Kumar
Justice S R Krishna Kumar

ಕಾಕಂಬಿ ರಫ್ತಿನಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ: ಐಎಎಸ್‌ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆಗೆ ಹೈಕೋರ್ಟ್‌ ತಡೆ

ಐಎಎಸ್‌ ಅಧಿಕಾರಿಗಳಾದ ಐ ಎಸ್‌ ಎನ್‌ ಪ್ರಸಾದ್‌, ಜೆ ರವಿಶಂಕರ್, ಏಕರೂಪ ಕೌರ್ ವಿರುದ್ಧದ ತನಿಖೆಗೆ ತಡೆ ನೀಡಿದ ಹೈಕೋರ್ಟ್‌.
Published on

ರಾಜ್ಯದಲ್ಲಿ ಸಂಗ್ರಹಿಸಲಾದ 50 ಸಾವಿರ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ಗೋವಾ ವ್ಯಾಪ್ತಿಯ ಬಂದರಿನಿಂದ ರಫ್ತು ಮಾಡಲು ಅವಕಾಶ ಕಲ್ಪಿಸಿ, ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಆರೋಪದ ಪ್ರಕರಣವೊಂದರಲ್ಲಿ ರಾಜ್ಯದ ಮೂವರು ಐಎಎಸ್‌ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ಮಧ್ಯಂತರ ತಡೆ ನೀಡಿದೆ.

ಐಎಎಸ್‌ ಅಧಿಕಾರಿಗಳಾದ ಐ ಎಸ್‌ ಎನ್‌ ಪ್ರಸಾದ್‌, ಜೆ ರವಿಶಂಕರ್, ಏಕರೂಪ ಕೌರ್ ಮತ್ತು ಮಂಜುಳಾ ನಟರಾಜ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಪಿ ಪ್ರಸನ್ನ ಕುಮಾರ್ “ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ, ಅರ್ಜಿದಾರರ ವಿರುದ್ಧದ ಆಪಾದನೆಗಳು ಆಧಾರರಹಿತ ಎಂಬ ಮುಕ್ತಾಯದ ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು, ವಿಶೇಷ ನ್ಯಾಯಾಲಯ ತಿರಸ್ಕರಿಸಿರುವುದು ಕಾನೂನಿನ ನಡೆಗೆ ವಿರುದ್ಧವಾಗಿದೆ” ಎಂದರು.

“ಭ್ರಷ್ಟಾಚಾರ ನಿಗ್ರಹ ಕಾಯಿದೆ ಸೆಕ್ಷನ್‌ 17ಎ ಅಡಿಯಲ್ಲಿ ತನಿಖೆಗೆ ಸಕ್ಷಮ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕಿತ್ತು. ಆದರೆ, ಈ ಪ್ರಕರಣದಲ್ಲಿ ಪಡೆದಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಆಪಾದನೆಯೂ ಸಾಬೀತಾಗಿಲ್ಲ. ಮುಕ್ತಾಯ ವರದಿಯನ್ನು ತಿರಸ್ಕರಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪುನಃ ಅದೇ ತನಿಖಾ ತಂಡಕ್ಕೆ ತನಿಖೆಯ ಹೊಣೆ ವಹಿಸಿರುವುದು ತಪ್ಪು. ಇದೊಂದು ಖಾಸಗಿ ದೂರಿನಡಿ ದಾಖಲಾದ ಪ್ರಕರಣ. ಖಾಸಗಿ ದೂರಿನ ಅನುಸಾರ ಆರೋಪಿಗಳ ವಿರುದ್ಧದ ತನಿಖೆಗೆ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆಯಬೇಕು. ಆದರೆ ಪಡೆದಿಲ್ಲ. ಅಷ್ಟಕ್ಕೂ ಸ್ವತಃ ಹಣಕಾಸು ಇಲಾಖೆಯೇ; ಅಧಿಕಾರಿಗಳ ಕ್ರಮದಿಂದ ಬೊಕ್ಕಸಕ್ಕೆ ನಷ್ಟವಾಗಿಲ್ಲ ಬದಲಿಗೆ ಸ್ಥಳೀಯ ರೈತರಿಗೆ ಅನುಕೂಲವಾಗಿದೆ ಎಂಬ ಹಿಂಬರಹ ನೀಡಿದೆ. ಆದ್ದರಿಂದ, ತನಿಖೆಗೆ ನೀಡಲಾಗಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಬೇಕು” ಎಂದು ಕೋರಿದರು.

ಇದನ್ನು ಪುರಸ್ಕರಿಸಿರುವ ಪೀಠವು ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶಕ್ಕೆ ಮಧ್ಯಂತರ ತಡೆ ನೀಡಿ ಲೋಕಾಯುಕ್ತಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಈ ಪ್ರಕರಣದಲ್ಲಿ ಅಂದಿನ ಅಬಕಾರಿ ಸಚಿವ ಕೆ ಗೋಪಾಲಯ್ಯ ಮೊದಲ ಆರೋಪಿಯಾಗಿದ್ದಾರೆ. ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಉಪಾಧ್ಯಕ್ಷ ಎಸ್‌ ಮಂಜುನಾಥ್‌ ಈ ಕುರಿತಂತೆ ಖಾಸಗಿ ದೂರು ಸಲ್ಲಿಸಿದ್ದಾರೆ.

Kannada Bar & Bench
kannada.barandbench.com