ಎನ್‌ಎಸ್‌ಇ ವಂಚಕರಿಗೆ ಜಾಮೀನು ನಿರಾಕರಿಸಿ, ದೆಹಲಿ ನ್ಯಾಯಾಲಯ ಬಾಬ್‌ ಡಿಲನ್‌ ಹಾಡು ನೆನೆದಿದ್ದೇಕೆ?

ಹಣ ಜನರ ಮೇಲೆ ಹೇಗೆ ವಿಕೃತ ಪ್ರಭಾವ ಬೀರುತ್ತದೆ ಎಂಬುದನ್ನು ಬಾಬ್‌ ಡಿಲನ್‌ ಅವರ ಹಾಡು ವಿವರಿಸುತ್ತದೆ ಎಂದರು ಸಿಬಿಐ ನ್ಯಾಯಾಧೀಶ ಸಂಜೀವ್ ಅಗರ್‌ವಾಲ್.
Bob Dylan and Rouse Avenue Courts
Bob Dylan and Rouse Avenue Courts Facebook
Published on

“ಹಣ ಮಾತನಾಡದು, ಅದು ನಿಂದಿಸುತ್ತದೆ ” ಇದು ಅಮೆರಿಕದ ಪ್ರಸಿದ್ಧ ಗಾಯಕ, ಗೀತರಚನೆಕಾರ ನೊಬೆಲ್ ಪ್ರಶಸ್ತಿ ವಿಜೇತ ಬಾಬ್‌ ಡಿಲನ್‌ನ ಒಂದು ಗೀತೆಯ ಸಾಲು. ವಂಚನೆ ಪ್ರಕರಣದ ಆರೋಪಿ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಅವರಿಗೆ ಜಾಮೀನು ನಿರಾಕರಿಸುವ ವೇಳೆ ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ ಈ ಸಾಲುಗಳನ್ನು ಉದ್ಗರಿಸಿತು.

ಹಣ ಜನರ ಮೇಲೆ ಹೇಗೆ ವಿಕೃತ ಪ್ರಭಾವ ಬೀರುತ್ತದೆ ಎಂಬುದನ್ನು ಡಿಲನ್‌ ಅವರ ಹಾಡು ವಿವರಿಸುತ್ತದೆ ಎಂದು ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂಜೀವ್‌ ಅಗರ್‌ವಾಲ್‌ ತಮ್ಮ ಅದೇಶದಲ್ಲಿ ದಾಖಲಿಸಿದ್ದಾರೆ. ಡಿಲನ್ 1964ರಲ್ಲಿ ಬರೆದ ಹಾಡನ್ನು ಉಲ್ಲೇಖಿಸಿರುವ 42 ಪುಟಗಳ ತೀರ್ಪು ಚಿತ್ರಾ ರಾಮಕೃಷ್ಣನ್‌ ಮತ್ತು ಸಹ ಆರೋಪಿ ಆನಂದ್‌ ಸುಬ್ರಮಣಿಯನ್‌ ಅವರಿಗೆ ಜಾಮೀನು ನಿರಾಕರಿಸಿದೆ.

Also Read
ಹಿಂದೂ, ಬೌದ್ಧ, ಇಸ್ಲಾಂ ಧರ್ಮಗಳ ಸಂಗಮ ಜಮ್ಮು ಮತ್ತು ಕಾಶ್ಮೀರ ಎಂದ ಸಿಜೆಐ ರಮಣ: ಬಹುತ್ವ ಉಳಿಸಿಕೊಳ್ಳಲು ಕರೆ

ಡಿಲನ್‌, ಖಾಸಗಿ ಕ್ಲಬ್ ಮತ್ತು ಪೆಡಂಭೂತ

ಖಾಸಗಿ ಕ್ಲಬ್‌ನಂತೆಯೇ ಸುಬ್ರಮಣಿಯನ್ ಎನ್‌ಎಸ್‌ಇ ವ್ಯವಹಾರಗಳನ್ನು ನಡೆಸುತ್ತಿದ್ದರು ಎನ್ನುವ ಅಂಶವನ್ನು ನ್ಯಾಯಾಧೀಶರು ಗಮನಿಸಿದರು.

ಎನ್‌ಎಸ್‌ಇಯ ವ್ಯವಹಾರಗಳನ್ನು ಪ್ರಕರಣದ ಮೊದಲನೇ ಆರೋಪಿಯು ಖಾಸಗಿ ಕ್ಲಬ್‌ನಂತೆ ನಡೆಸುತ್ತಿದ್ದ ಹಾಗೆ ಮೇಲ್ನೋಟಕ್ಕೆ ತೋರುತ್ತದೆ; ಗಾಯಕ ಬರಹಗಾರ, ನೊಬೆಲ್ ಪ್ರಶಸ್ತಿ ವಿಜೇತ ಬಾಬ್ ಡಿಲನ್ ಒಮ್ಮೆ ʼಹಣ ಮಾತನಾಡದು ಅದು ನಿಂದಿಸುತ್ತದೆ” ಎಂದಿದ್ದರು, ಇದು “ಇಟ್‌ ಈಸ್‌ ಆಲ್‌ರೈಟ್‌ ಮಾ ಐ ಯಾಮ್‌ ಬ್ಲೀಡಿಂಗ್‌” ಎನ್ನುವ ಡಿಲನ್‌ ಅವರ 1964 ರ ಆಲ್ಬಂನ ಹಾಡು. ಇದರರ್ಥ ಹಣ ಬರೀ ಪ್ರಭಾವಿಸುವುದಿಲ್ಲ, ಢಾಳ ಪ್ರಭಾವ ಬೀರುತ್ತದೆ. ಜನರ ಮೇಲೆ ವಿಕೃತ ಪ್ರಭಾವ ಉಂಟುಮಾಡುತ್ತದೆ” ಎಂದರು.

ಎನ್‌ಎಸ್‌ಇ ಹಗರಣ, ದೇಶದಲ್ಲಿ ವಿದೇಶಿಬಂಡವಾಳ ಹೂಡಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು ಚಿಲ್ಲರೆ, ಸಾಂಸ್ಥಿಕ ಅಥವಾ ಇನ್ನಾವುದೇ ಹೂಡಿಕೆದಾರರ ಆರ್ಥಿಕ ಪ್ರಜ್ಞೆಯನ್ನು ಅಲುಗಿಸಿದೆ ಎನ್ನಲಾಗಿದೆ. ಹೀಗಾಗಿ ನ್ಯಾಯಾಲಯವು ತನ್ನ ಆದೇಶದಲ್ಲಿ, "ಪ್ರತಿಯೊಂದು ಸಂಸ್ಥೆಯೂ ತನ್ನ ಜೀವಮಾನದಲ್ಲಿಯೊಮ್ಮೆ ಕವಲುದಾರಿಯಲ್ಲಿ ನಿಲ್ಲುತ್ತದೆ. ಆಗ ಅದು ತನ್ನ ಪ್ರತಿಷ್ಠೆಯನ್ನು ಮರಳಿಗಳಿಸುವಂತಹ ಸೂಕ್ತ ಹಾದಿಯತ್ತ ಹೊರಳಬೇಕೇ ಹೊರತು ಮುಂದೆ ಪೆಡಂಭೂತವಾಗಬಹುದಾದ ಅಸ್ತಿಪಂಜರಗಳನ್ನು ಹುದುಗಿಡಲು ಹೋಗಬಾರದು ಎನ್ನುವ ಅಂಶವನ್ನು ಈ ಸಂದರ್ಭದಲ್ಲಿ ಎನ್‌ಎಸ್‌ಇಯ ವ್ಯವಹಾರಗಳ ಹಿನ್ನೆಲೆಯಲ್ಲಿ ಹೇಳುವುದು ಸೂಕ್ತವಾಗುತ್ತದೆ," ಎಂದು ಅಭಿಪ್ರಾಯಪಟ್ಟಿದೆ.

Kannada Bar & Bench
kannada.barandbench.com