ತಿಂಗಳಿಗೆ ನೂರು ಕೋಟಿ ಅಕ್ರಮ ಹಣ ವಸೂಲಿಗೆ ಸಂಚು ಹೂಡಿದ್ದ ದೇಶ್‌ಮುಖ್‌-ವಾಜೆ; ಹತ್ತಾರು ಕೋಟಿ ಹಣ ವಸೂಲಿ: ಇ ಡಿ ಮಾಹಿತಿ

ಸಚಿನ್‌ ವಾಜೆ ಇ ಡಿ ಮುಂದೆ ನೀಡಿರುವ ಹೇಳಿಕೆಯಲ್ಲಿ ಹೇಗೆ ಹತ್ತಾರು ಕೋಟಿ ಹಣವನ್ನು ಅನಿಲ್‌ ದೇಶ್‌ಮುಖ್‌ ಸೂಚನೆ ಮೇರೆಗೆ ವಸೂಲಿ ಮಾಡಲಾಗಿತ್ತು ಎನ್ನುವ ಮಾಹಿತಿ ಹೊರಗೆಡವಿದ್ದಾರೆ.
ತಿಂಗಳಿಗೆ ನೂರು ಕೋಟಿ ಅಕ್ರಮ ಹಣ ವಸೂಲಿಗೆ ಸಂಚು ಹೂಡಿದ್ದ ದೇಶ್‌ಮುಖ್‌-ವಾಜೆ; ಹತ್ತಾರು ಕೋಟಿ ಹಣ ವಸೂಲಿ: ಇ ಡಿ ಮಾಹಿತಿ
Anil Deshmukh, former Home Minister, Maharashtra

ಪೊಲೀಸ್ ಇಲಾಖೆಯ ಹಿರಿಯ ಅಧಿಗಾರಿಗಳ ವರ್ಗಾವಣೆಯಲ್ಲಿ ಹತ್ತಾರು ಕೋಟಿ ಲಂಚದ ಹಣ, ಅನಿಲ್‌ ಛಾಬ್ರಿಯಾ ಪ್ರಕರಣದಲ್ಲಿ ನೂರೈವತ್ತು ಕೋಟಿ ಹಣದ ಸೆಟಲ್‌ಮೆಂಟ್‌, ಮುಂಬೈನ 1750 ಬಾರ್‌ಗಳಿಂದ ರೂ. 3 ಲಕ್ಷ ಹಣ ಕೀಳಲು ಗುರಿ ನಿಗದಿ… ಇವು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್ ಅಕ್ರಮ ಹಣ ಕ್ರೋಢೀಕರಣಕ್ಕೆ ಆರಿಸಿಕೊಂಡಿದ್ದ ಮಾರ್ಗಗಳು ಎನ್ನುವ ಅಂಶ‌ವನ್ನು ವಜಾಗೊಂಡಿರುವ ಮುಂಬೈ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಜಾರಿ ನಿರ್ದೇಶನಾಲಯದ ಮುಂದೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದಲ್ಲದೆ, ಟೆಲಿವಿಷನ್‌ ರೇಟಿಂಗ್ ಪಾಯಿಂಟ್‌ (ಟಿಆರ್‌ಪಿ) ಹಗರಣದಲ್ಲಿ ರಿಪಬ್ಲಿಕ್‌ ಟಿವಿ ಸಂಪಾದಕ, ನಿರೂಪಕ ಅರ್ನಾಬ್‌ ಗೋಸ್ವಾಮಿ ಅವರ ಬಂಧನಕ್ಕಾಗಿ ಅನಿಲ್‌ ದೇಶ್‌ಮುಖ್‌ ತಹತಹಿಸಿದ್ದನ್ನು ಸಹ ವಾಜೆ ಇ ಡಿಗೆ ತಿಳಿಸಿದ್ದಾರೆ.

ಹಣ ವಸೂಲಿಗಾಗಿ ಹಾಗೂ ವಿವಿಧ ಪ್ರಕರಣಗಳ ಸಂಬಂಧ ತಮಗೆ ಮಾಹಿತಿ ನೀಡುವ ಸಲುವಾಗಿ ಪೊಲೀಸ್‌ ಇಲಾಖೆಗೆ ಮರಳಿ ತನ್ನನ್ನು ಸೇರಿಸಲು ದೇಶ್‌ಮುಖ್‌ ಆಸಕ್ತಿ ತೋರಿದರು. ತಮ್ಮನ್ನು ಇಲಾಖೆಗೆ ಮರಳಿ ಸೇರ್ಪಡೆ ಮಾಡುವ ಸಲುವಾಗಿ ದೇಶ್‌ಮುಖ್‌ ತಮ್ಮಿಂದ ರೂ. 2 ಕೋಟಿ ಹಣ ಪಡೆದಿದ್ದರು. ಒಮ್ಮೆ ತಾವು ಇಲಾಖೆಗೆ ಸೇರಿದ ಮೇಲೆ ತಮ್ಮ ಕಚೇರಿ ಹಾಗೂ ಮನೆಗೆ ದೇಶ್‌ಮುಖ್‌ ಕರೆ ಮಾಡುತ್ತಿದ್ದರು. ಈ ವೇಳೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ತಮಗೆ ಸೂಚನೆಗಳನ್ನು ನೀಡುತ್ತಿದ್ದರು. ಹಾಗೆ ಸೂಚನೆ ನೀಡಿದ್ದ ಪ್ರಕರಣಗಳಲ್ಲಿ ಟಿಆರ್‌ಪಿ ಹಗರಣ, ಆತ್ಮಹತ್ಯೆ ಪ್ರಕರಣವೊಂದಕ್ಕೆ ಸಂಬಂದಿಸಿದಂತೆ ಅರ್ನಾಬ್‌ ಗೋಸ್ವಾಮಿ ಬಂಧನ ಪ್ರಕರಣ, ದಿಲೀಪ್‌ ಛಾಬ್ರಿಯಾ ಪ್ರಕರಣ, ಸಾಮಾಜಿಕ ಮಾದ್ಯಮಗಳಲ್ಲಿ ಫೇಕ್‌ ಹಿಂಬಾಲಕರ ಕುರಿತಾದ ಪ್ರಕರಣಗಳು ಸೇರಿದ್ದವು ಎಂದು ವಾಜೆ ಹೇಳಿದ್ದಾರೆ.

ಗೃಹ ಸಚಿವರಾಗಿದ್ದ ಅವಧಿಯಲ್ಲಿ ಅನಿಲ್‌ ದೇಶ್‌ಮುಖ್‌ ತಮ್ಮ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡಿರುವುದು, ಭ್ರಷ್ಟಾಚಾರ ಎಸಗಿರುವುದು ಸೇರಿದಂತೆ ಅವರ ವಿರುದ್ಧ ಕೇಳಿಬಂದ ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ನ್ಯಾಯಾಲಯ ನಿರ್ದೇಶಿತ ತನಿಖೆಯನ್ನು ಸಿಬಿಐ ಕೈಗೊಂಡಿತ್ತು. ಈ ವೇಳೆ ಸಿಬಿಐ ಎಫ್‌ಐಆರ್‌ ದಾಖಲಿಸಿತ್ತು.

ಅಕ್ರಮ ಹಣ ವರ್ಗಾವಣೆಯ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ಸಹ ದೇಶ್‌ಮುಖ್ ಹಾಗೂ ಅವರ ಸಹಾಯಕರ‌ ವಿರುದ್ಧ ತನಿಖೆ ನಡೆಸಿತ್ತು. ಈ ವೇಳೆ ಅದು ವಜಾಗೊಂಡಿರುವ ಹಿರಿಯ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಅವರನ್ನು ತನಿಖೆಗೆ ಒಳಪಡಿಸಿತ್ತು. ವಾಜೆ ಸಹಿತ 14 ಆರೋಪಿಗಳ ವಿರುದ್ಧ ಇ ಡಿ 77 ಪುಟಗಳ ದೂರು ದಾಖಲಿಸಿದೆ. ಸದ್ಯಕ್ಕೆ ದೇಶ್‌ಮುಖ್‌ ಅವರನ್ನು ದೂರಿನಲ್ಲಿ ಹೆಸರಿಸಲಾಗಿಲ್ಲ, ಹೇಳಿಕೆ ದಾಖಲಿಸಲು ಕರೆಯಲಾಗಿಲ್ಲ.

ಇ ಡಿ ಮುಂದೆ ವಾಜೆ ನೀಡಿರುವ ಹೇಳಿಕೆಯ ಪ್ರಮುಖ ಅಂಶಗಳು:

  • ಟಿಆರ್‌ಪಿ ಪ್ರಕರಣದಲ್ಲಿ ಅನಿಲ್‌ ದೇಶ್‌ಮುಖ್‌ ಅವರ ಅರ್ನಾಬ್‌ ಗೋಸ್ವಾಮಿ ಅವರನ್ನು ಬಂಧಿಸಬೇಕೆಂದು ಬಯಸಿದ್ದರು. ದಿಲೀಪ್‌ ಛಾಬ್ರಿಯಾ ಪ್ರಕರಣದಲ್ಲಿ ತಮ್ಮ ಪಾಲುದಾರರೊಂದಿಗೆ ರೂ. 150 ಕೋಟಿ ಮೊತ್ತದ ಸೆಟಲ್‌ಮೆಂಟ್‌ಗೆ ಅನುವು ಮಾಡಿಕೊಡಲು ನಾನು ಮಾರ್ಗಹುಡುಕಬೇಕೆಂದು ಬಯಸಿದ್ದರು. ಸೋಶಿಯಲ್‌ ಮೀಡಿಯಾದ ಫೇಕ್‌ ಹಿಂಬಾಲಕರ ಪ್ರಕರಣದಲ್ಲಿ ಅಪರಾಧಿಗಳ ವಿರುದ್ಧ ಪೂರ್ಣ ಪ್ರಮಾಣದ ಕ್ರಮ ಕೈಗೊಳ್ಳಬೇಕೆಂದು ಬಯಸಿದ್ದರು.

  • ಅಂದಿನ ಮುಂಬೈ ಪೊಲೀಸ್‌ ಕಮಿಷನರ್‌ ಪರಮ್‌ಬೀರ್ ಸಿಂಗ್ ಅವರು ಹತ್ತು ಡಿಸಿಪಿಗಳ ಪದನಿಯುಕ್ತಿ ಆದೇಶ ಹೊರಡಿಸಿದ್ದರು. ಅದನ್ನು ಗೃಹಸಚಿವ ಅನಿಲ್‌ ದೇಶ್‌ಮುಖ್‌ ಹಾಗೂ ಸಾರಿಗೆ ಸಚಿವ ಅನಿಲ್‌ ಪರಬ್‌ ಕಟುವಾಗಿ ವಿರೋಧಿಸಿದ್ದರು. ಆ ಆದೇಶವನ್ನು ಬದಲಾಯಿಸುವ ಮೂಲಕ ಪೊಲೀಸ್‌ ಅಧಿಕಾರಿಗಳಿಂದ ಸುಮಾರು ರೂ. 40 ಕೋಟಿ ಹಣವನ್ನು ಅಕ್ರಮವಾಗಿ ಗಳಿಸಿದರು. ಇದರಲ್ಲಿ ತಲಾ ರೂ 20 ಕೋಟಿಯನ್ನು ಇಬ್ಬರೂ ಸಮವಾಗಿ ಹಂಚಿಕೊಂಡರು. ಅನಿಲ್‌ ದೇಶ್‌ಮುಖ್‌ ಅವರ ಪಾಲಿನ ಹಣವನ್ನು ಅವರ ಆಪ್ತ ಸಹಾಯಕ ಸಂಜೀವ್ ಪಲಂದೆ ಅವರಿಗೆ ತಲುಪಿಸಲಾಯಿತು, ಅನಿಲ್‌ ಪರಬ್‌ ಪಾಲಿನ ಹಣವನ್ನು ವಲಯ ಸಾರಿಗೆ ಅಧಿಕಾರಿ ಬಜರಂಗ್‌ ಕರ್ಮಾಟೆಗೆ ಸಲ್ಲಿಸಲಾಯಿತು.

  • ಮುಂಬೈನ ಸುಮಾರು 1,750 ಬಾರ್‌ಗಳಿಂದ ರೂ. 3 ಲಕ್ಷ ಹಣವನ್ನು ಸಂಗ್ರಹಿಸಿ ಅನಿಲ್‌ ದೇಶ್‌ಮುಖ್‌ ಅವರಿಗೆ ನೀಡಿರುವ ಮಾಹಿತಿ. ಡಿಸೆಂಬರ್‌ 2020ರಿಂದ ಫೆಬ್ರವರಿ 2021ರ ಅವಧಿಯಲ್ಲಿ ರೂ. 4.70 ಕೋಟಿ ಹಣವನ್ನು ಸಂಗ್ರಹಿಸಿ ದೇಶ್ಮುಖ್‌ ಅವರಿಗೆ ತಲುಪಿಸಿರುವುದಾಗಿ ವಾಜೆ ಹೇಳಿದ್ದಾರೆ.

ಇದಲ್ಲದೆ, ಇಡಿಯು ತನ್ನ ಹೇಳಿಕೆಯಲ್ಲಿ ದೇಶ್‌ಮುಖ್‌ ಹಾಗೂ ವಾಜೆ ಅವರು “ತಿಂಗಳಿಗೆ ನೂರು ಕೋಟಿ ರೂ. ಗಳಷ್ಟು ಅಕ್ರಮ ಹಣವನ್ನು ಎತ್ತುವಳಿ ಮಾಡಲು ಸಂಚು ರೂಪಿಸಿದ್ದರು. ಹೀಗೆ ಸಂಗ್ರಹಿಸಲಾದ ಅಕ್ರಮ ಹಣವನ್ನು ದೇಶ್‌ಮುಖ್‌ ಗೆ ಸೇರಿದ ಸುಮಾರು 27 ಕಂಪೆನಿಗಳ ಜಾಲದ ಮೂಲಕ ವರ್ಗಾವಣೆ ಮಾಡಲಾಗುತ್ತಿತ್ತು.

Related Stories

No stories found.