[ಮಂಗಗಳ ಮಾರಣ ಹೋಮ ಪ್ರಕರಣ] ಆರೋಪಿಗಳು ತಪ್ಪಿಸಿಕೊಳ್ಳಲು ಅವಕಾಶ ಆಗಬಾರದು: ಅಧಿಕಾರಿಗಳಿಗೆ ಹೈಕೋರ್ಟ್‌ ಎಚ್ಚರಿಕೆ

ಪೊಲೀಸರಿಂದ ಆಗಿರುವ ಲೋಪದ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ. ಅದಕ್ಕೆ ಅವರು ನೀಡುವ ಉತ್ತರ ಆಧರಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ ಹಾಸನ ಪೊಲೀಸ್‌ ವರಿಷ್ಠಾಧಿಕಾರಿ.
[ಮಂಗಗಳ ಮಾರಣ ಹೋಮ ಪ್ರಕರಣ] ಆರೋಪಿಗಳು ತಪ್ಪಿಸಿಕೊಳ್ಳಲು ಅವಕಾಶ ಆಗಬಾರದು: ಅಧಿಕಾರಿಗಳಿಗೆ ಹೈಕೋರ್ಟ್‌ ಎಚ್ಚರಿಕೆ

ಹಾಸನ ಜಿಲ್ಲೆಯ ಬೇಲೂರು ವ್ಯಾಪ್ತಿಯ ಚೌಡನಹಳ್ಳಿ ಬಳಿಯಲ್ಲಿ ಮಂಗಗಳ ಮಾರಣಹೋಮ ನಡೆಸಿ ಮೂಟೆಯಲ್ಲಿ ಕಟ್ಟಿ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯು ನೀಡಿರುವ ದೂರು ಮತ್ತು ಬೇಲೂರು ಜೆಎಂಎಫ್‌ಸಿ ನ್ಯಾಯಾಲಯದ ಆದೇಶವನ್ನು ಭಾಷಾಂತರಿಸಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್‌ ಗುರುವಾರ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಮಂಗಗಳ ಮಾರಣ ಹೋಮದ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ ಗೌಡ ಅವರಿದ್ದ ವಿಭಾಗೀಯ ಪೀಠವು ನಡೆಸಿತು.

ಹಾಸನ ಜಿಲ್ಲಾ ಉಪ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ದೂರನ್ನು ಆಧರಿಸಿ ಮ್ಯಾಜಿಸ್ಟ್ರೇಟ್‌ ಅವರು ತನಿಖೆ ನಡೆಸಲು ಅನುಮತಿಸಿದ್ದಾರೆ. ಅಲ್ಲದೇ, ಪೊಲೀಸ್‌ ಇಲಾಖೆಯು ಈಗಾಗಲೇ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 429ರ ಅಡಿ ಪ್ರಕರಣ ದಾಖಲಿಸಿದೆ. ಎಫ್‌ಐಆರ್‌ನಲ್ಲಿ ವನ್ಯಪ್ರಾಣಿಗಳ ಮೇಲಿನ ಹಿಂಸೆ ತಡೆ ಕಾಯಿದೆಯ ಸೆಕ್ಷನ್‌ 11ರ ಅನುಚ್ಛೇದ ಎಲ್‌ ಅಡಿ ಪ್ರಕರಣ ದಾಖಲಿಸಲು ನ್ಯಾಯಿಕ ಮ್ಯಾಜಿಸ್ಟ್ರೇಟ್‌ ಅನುಮತಿಸಿದ್ದಾರೆ ಎಂಬ ಪೊಲೀಸರ ಹೇಳಿಕೆಯನ್ನು ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.

ವಿಡಿಯೊ ಕಾನ್ಫರೆನ್ಸ್‌ನಲ್ಲಿ ಉಪಸ್ಥಿತರಿದ್ದ ಹಾಸನ ಡಿಸಿಎಫ್‌ ಅವರು “ಕರ್ನಾಟಕ ಅರಣ್ಯ ಕೈಪಿಡಿಯ ನಿಯಮ 65ರ ಪ್ರಕಾರ ಮ್ಯಾಜಿಸ್ಟ್ರೇಟ್‌ ಅನುಮತಿ ಪಡೆದು ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಜುಲೈ 29ರಂದು ಮ್ಯಾಜಿಸ್ಟ್ರೇಟ್‌ ಅವರಿಂದ ಅನುಮತಿ ಪಡೆದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ತನಿಖೆ ಜವಾಬ್ದಾರಿ ವಹಿಸಲಾಗಿದೆ. ಅವರು ತನಿಖೆ ನಡೆಸುತ್ತಿದ್ದಾರೆ” ಎಂದು ತಿಳಿಸಿದರು.

ಆಗ ಪೀಠವು “ದೂರಿನಲ್ಲಿ ಆರೋಪಿಗಳ ಹೆಸರು ಉಲ್ಲೇಖಿಸಲಾಗಿಲ್ಲ. ಮಂಗಗಳ ಮಾರಣ ಹೋಮ ಪ್ರಕರಣ ಗಂಭೀರ ಅಪರಾಧವಾಗಿದ್ದು, ಯಾವುದೇ ಕಾರಣಕ್ಕೂ ಆರೋಪಿಗಳು ಸುಲಭವಾಗಿ ಪ್ರಕರಣದಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡಬಾರದು” ಎಂದಿತು.

Also Read
ಮಂಗಗಳ ಮಾರಣ ಹೋಮ ಪ್ರಕರಣ: ಹಾಸನ ಎಸ್‌ಪಿ, ಉಪ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಜರಾತಿಗೆ ಹೈಕೋರ್ಟ್‌ ಸೂಚನೆ

ನ್ಯಾಯಾಲಯದ ಸೂಚನೆಯಂತೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಿದ್ದ ಹಾಸನ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಕಾನೂನಿನ ನಿರ್ದಿಷ್ಟ ನಿಬಂಧನೆ ಅನ್ವಯಿಸುವಾಗ ಅಧಿಕಾರಿಗಳಿಂದ ಆಗಿರುವ ಲೋಪಕ್ಕೆ ಸಂಬಂಧಿಸಿದಂತೆ ಯಾವ ಕ್ರಮಕೈಗೊಳ್ಳಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಓಕಾ ಪ್ರಶ್ನಿಸಿದರು.

ಇದಕ್ಕೆ ಪೊಲೀಸ್‌ ವರಿಷ್ಠಾಧಿಕಾರಿ ಅವರು “ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಅವರು ನೀಡುವ ಉತ್ತರವನ್ನು ಆಧಿರಿಸಿ ಕ್ರಮಕೈಗೊಳ್ಳಲಾಗುವುದು. ಅಲ್ಲದೇ, ಅವರ ಉತ್ತರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು” ಎಂದರು.

ಆಗಸ್ಟ್‌ 17ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿದ ನ್ಯಾಯಾಲಯವು ಅಂದು ವಿಡಿಯೊ ಕಾನ್ಫರೆನ್ಸ್‌ನಲ್ಲಿ ಉಪಸ್ಥಿತರಿರುವಂತೆ ಡಿಸಿಎಫ್‌ಗೆ ಆದೇಶಿಸಿತು.

Related Stories

No stories found.
Kannada Bar & Bench
kannada.barandbench.com