ವಸತಿ ಪ್ರದೇಶಕ್ಕೆ ಪ್ರವೇಶಿಸುವ ಮಂಗಗಳಿಗೆ ಹಾನಿ ಮಾಡಬಾರದು, ಸ್ವಾಭಾವಿಕ ವಾಸಸ್ಥಳಕ್ಕೆ ವರ್ಗಾಯಿಸಿ: ಹೈಕೋರ್ಟ್‌

“ಯಾವುದೇ ಕಾರಣಕ್ಕೂ ಮಂಗಗಳಿಗೆ ತೊಂದರೆಯಾಗದಂತೆ ಸರ್ಕಾರ ಖಾತರಿಪಡಿಸಬೇಕು ಮತ್ತು ಅವುಗಳನ್ನು ಅವುಗಳ ಸ್ವಾಭಾವಿಕ ವಾಸಸ್ಥಳಕ್ಕೆ ವರ್ಗಾಯಿಸಬೇಕು” ಎಂದು ಸಿಜೆ ಓಕಾ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.
Monkey
Monkey
Published on

ವಸತಿ ಪ್ರದೇಶ ಪ್ರವೇಶಿಸುವ ಮಂಗಗಳಿಗೆ ಯಾವುದೇ ಸಮಸ್ಯೆಯಾಗದಂತೆ ರಾಜ್ಯ ಸರ್ಕಾರ ಎಚ್ಚರವಹಿಸಬೇಕು ಮತ್ತು ಸಂಬಂಧಪಟ್ಟ ಇಲಾಖೆಯವರು ಅವುಗಳನ್ನು ಅವುಗಳ ಸ್ವಾಭಾವಿಕ ವಾಸಸ್ಥಳಕ್ಕೆ ತಲುಪಿಸಬೇಕು ಎಂದು ಮಂಗಳವಾರ ಕರ್ನಾಟಕ ಹೈಕೋರ್ಟ್‌ ಹೇಳಿದೆ.

ಆಹಾರ ಹುಡುಕಿಕೊಂಡು ವಸತಿ ಪ್ರದೇಶ ಪ್ರವೇಶಿಸುವ ಮಂಗಗಳು ಜನರಿಗೆ ಉಂಟು ಮಾಡುವ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ವಿಭಾಗೀಯ ಪೀಠ ನಡೆಸಿತು.

“ಮಂಗಗಳಿಗೆ ಯಾವುದೇ ತೊಂದರೆಯಾಗದಂತೆ ರಾಜ್ಯ ಸರ್ಕಾರ ಕ್ರಮವಹಿಸಬೇಕು. ಅಲ್ಲದೇ ಅವುಗಳನ್ನು ಅವು ಸ್ವಾಭಾವಿಕವಾಗಿ ವಾಸಿಸುವ ಪ್ರದೇಶಕ್ಕೆ ತಲುಪಿಸಬೇಕು” ಎಂದು ಪೀಠ ಹೇಳಿದೆ.

Also Read
ಕಾನೂನಿನ ಎದುರು ಎಲ್ಲರೂ ಸಮಾನರು ಎಂಬ ಹಕ್ಕಿಗೆ ಯುಎಪಿಎ ಕಾಯಿದೆ ವಿರುದ್ಧ: ಕರ್ನಾಟಕ ಹೈಕೋರ್ಟ್ ವಕೀಲ ಎಸ್ ಬಾಲನ್

ದೆಹಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉದ್ಭವಿಸಿದ್ದ ಇಂಥದ್ದೇ ಸಮಸ್ಯೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಕೆಲವು ನಿರ್ದೇಶನಗಳನ್ನು ನೀಡಿದೆ. “ನಾಗರಿಕರ ಸುರಕ್ಷತೆ ಮತ್ತು ಮಂಗಗಳು ಜನ ವಸತಿ ಪ್ರದೇಶಕ್ಕೆ ಪ್ರವೇಶಿಸಿ ಜನರಿಗೆ ಸಮಸ್ಯೆ ಮಾಡುವುದನ್ನು ಪರಿಗಣಿಸಿ ಹಾಗೂ ಪ್ರಾಣಿಗಳ ಹಿತದೃಷ್ಟಿಯಿಂದ ದೆಹಲಿ ಹೈಕೋರ್ಟ್‌ ಅಲ್ಲಿನ ಸರ್ಕಾರಕ್ಕೆ ಕೆಲವು ನಿರ್ದೇಶನಗಳನ್ನು ನೀಡಿದೆ” ಎಂಬುದನ್ನು ಕರ್ನಾಟಕ ಹೈಕೋರ್ಟ್‌ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ದೆಹಲಿ ಹೈಕೋರ್ಟ್‌ ನಿರ್ದೇಶನಗಳ ಅನ್ವಯ ಯೋಜನೆ ರೂಪಿಸುವ ಸಂಬಂಧ ಎರಡನೇ ಪ್ರತಿವಾದಿಯಾದ ಅರಣ್ಯ ಪ್ರಧಾನ ಸಂರಕ್ಷಣಾಧಿಕಾರಿಯವರು ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಹಿರಿಯ ಅಧಿಕಾರಿಗಳು ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಸಭೆ ನಡೆಸುವುದು ಒಳಿತು ಎಂದಿದೆ. ಜುಲೈ 12ರೊಳಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಅನುಮತಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಿದೆ.

Kannada Bar & Bench
kannada.barandbench.com