ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣವನ್ನು ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಕೋರುವುದಾಗಿ ಪಂಜಾಬ್ ಸರ್ಕಾರ ಸೋಮವಾರ ತಿಳಿಸಿದೆ.
ಎನ್‌ಐಎ ಸೇರಿದಂತೆ ಕೇಂದ್ರ ಸರ್ಕಾರದ ಯಾವುದೇ ತನಿಖಾ ಸಂಸ್ಥೆ ಪ್ರಕರಣದ ತನಿಖೆ ನಡೆಸಿದರೂ ಕೂಡ ತಾನು ಸಂಪೂರ್ಣ ಸಹಕಾರ ನೀಡುವುದಾಗಿ ಅದು ಭರವಸೆ ನೀಡಿದೆ.
ಘಟನೆ ಕುರಿತಂತೆ ನಿನ್ನೆ ನಡೆದಿದ್ದ ಪತ್ರಿಕಾಗೋಷ್ಠಿ ಬಗ್ಗೆ ಸ್ಪಷ್ಟನೆ ನೀಡುವಂತೆ ಡಿಜಿಪಿಗೆ ಸರ್ಕಾರ ನಿರ್ದೇಶಿಸಿದೆ. ಮೂಸೆ ವಾಲಾ ಅವರಿಗೆ ಭದ್ರತೆ ಹಿಂತೆಗೆದುಕೊಂಡಿದ್ದರ ಬಗ್ಗೆಯೂ ಈಗಾಗಲೇ ತನಿಖೆಗೆ ಆದೇಶಿಸಿರುವುದಾಗಿ ಭಗವಂತ್ ಮಾನ್ ತಿಳಿಸಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಲಾಗಿದೆ. ಮೂಸೆ ವಾಲಾ ಅವರ ತಂದೆಯ ಕೋರಿಕೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಸಿಧು ಮೂಸೆ ವಾಲಾ ಅವರಿಗೆ ನೀಡಿದ್ದ ಭದ್ರತೆಯನ್ನು ಪಂಜಾಬ್ ಸರ್ಕಾರ ಶನಿವಾರ ಹಿಂಪಡೆದಿತ್ತು. ಇದಾದ 24 ಗಂಟೆಗಳಲ್ಲಿ ಮೂಸೆ ವಾಲಾ ಅವರ ಹತ್ಯೆಯಾಗಿತ್ತು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಹತ್ಯೆಯ ಹೊಣೆ ಹೊತ್ತಿದ್ದ. ಹತ್ಯೆಗೆ ಎರಡು ಗ್ಯಾಂಗ್‌ಗಳ ನಡುವಿನ ವೈಷಮ್ಯ ಕಾರಣ ಎಂದು ಡಿಜಿಪಿ ವಿ ಕೆ ಭಾವರಾ ಹೇಳಿದ್ದರು.