ಕೊಲಿಜಿಯಂ ವ್ಯವಸ್ಥೆ ವಿರುದ್ಧವಾಗಿ ಕೆಲ ನ್ಯಾಯಮೂರ್ತಿಗಳು ನೀಡಿದ್ದ ಅಭಿಪ್ರಾಯವನ್ನೇ ಮುಂದುಮಾಡಿ ತಾನು ಕೊಲಿಜಿಯಂ ಶಿಫಾರಸುಗಳನ್ನು ವಿಳಂಬಗೊಳಿಸಲು ಇದೇ ಕಾರಣ ಎಂದು ಕೇಂದ್ರ ಸರ್ಕಾರ ಸಬೂಬು ಹೇಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಗುಡುಗಿದೆ.
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದ ಕಾನೂನನ್ನು ರಾಷ್ಟ್ರೀಯ ಕೊಲಿಜಿಯಂ ವ್ಯವಸ್ಥೆ ಎತ್ತಿಹಿಡಿದ 2015ರ ಸಾಂವಿಧಾನಿಕ ಪೀಠದ ತೀರ್ಪು (ಎನ್‌ಜೆಎಸಿ ಪ್ರಕರಣ) ಈಗಾಗಲೇ ಇತ್ಯರ್ಥಪಡಿಸಿದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅಭಯ್ ಎಸ್ ಓಕಾ ಹಾಗೂ ವಿಕ್ರಮ್ ನಾಥ್ ಅವರಿದ್ದ ಪೀಠ ಹೇಳಿದೆ.
“ನೀವು ಕೆಲ ನ್ಯಾಯಮೂರ್ತಿಗಳ ಅಭಿಪ್ರಾಯಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ದು ಸೇರಿಸಿದ್ದೀರಿ. ಈ ರೀತಿ ಹೇಗೆ ಮಾಡಲಾದೀತು? ನೀವು ಕೆಲವು ಬದಲಾವಣೆಗಳನ್ನು ಬಯಸಬಹುದು. ಆದರೆ ಇದೇ ವೇಳೆ ಅಸ್ತಿತ್ವದಲ್ಲಿರುವ ಪ್ರಕ್ರಿಯಾ ತಿಳಿವಳಿಕೆ (ಎಂಒಪಿ) ಜೊತೆಗೆ ಕೊಲಿಜಿಯಂ ಕೆಲಸ ಮಾಡಬೇಕಿದೆ. ಇದೆಲ್ಲಾ ಈಗ ಕೆಸರೆರಚಾಟದಂತೆ ಕಾಣುತ್ತಿದೆ” ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.
ಆದ್ದರಿಂದ ಕೊಲಿಜಿಯಂ ಶಿಫಾರಸುಗಳನ್ನು ವಿಳಂಬಗೊಳಿಸಲು ನ್ಯಾಯಮೂರ್ತಿಗಳ ಅಥವಾ ಕಡಿಮೆ ಸಂಖ್ಯೆ ಇರುವ ನ್ಯಾಯಮೂರ್ತಿಗಳ ಪೀಠದ ಅಭಿಪ್ರಾಯಗಳನ್ನು ಕೇಂದ್ರ ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಪ್ರಸ್ತಾಪಿಸುವಂತಿಲ್ಲ ಎಂದು ನ್ಯಾಯಾಲಯ ತಾಕೀತು ಮಾಡಿತು.
"ನಮ್ಮ ತೀರ್ಪು 2015ರಲ್ಲಿ ಬಂದಿದೆ. ನೀವು 2022ರಲ್ಲಿ ನಮ್ಮ ಮುಂದೆ ಬಂದಿರಿ. ನ್ಯಾಯಾಲಯದ ಐವರು ನ್ಯಾಯಮೂರ್ತಿಗಳು ನಿರ್ಧಾರ ತೆಗೆದುಕೊಂಡಾಗ ಅದು ಅಂತಿಮವಾಗುತ್ತದೆ. ನಾನು ಹೇಳಿದ್ದು ಸರಿಯೇ ಅಥವಾ ತಪ್ಪೇ?" ಎಂದು ಪೀಠ ಖಾರವಾಗಿ ಪ್ರಶ್ನಿಸಿತು.
ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಕಾರ್ಯವಿಧಾನ ರೂಪಿಸುವ ಹೊಸ ಎಂಒಪಿ ಇನ್ನೂ ಅಂತಿಮಗೊಂಡಿಲ್ಲ ಎಂಬ ಸರ್ಕಾರದ ನಿಲುವಿಗೆ ಕೂಡ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತು.
ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್ ಮತ್ತು ಜಸ್ತಿ ಚೆಲಮೇಶ್ವರ್ ಅವರ ಅಭಿಪ್ರಾಯಗಳನ್ನು ಕೇಂದ್ರ ಸರ್ಕಾರ ಉಲ್ಲೇಖಿಸಿತ್ತು. ಇದನ್ನು ಪ್ರಸ್ತಾಪಿಸಿದ ನ್ಯಾಯಾಲಯ ಅವರಿಬ್ಬರೂ ಎಂಒಪಿಯನ್ನು ಪುನರ್ ಪರಿಶೀಲಿಸಬೇಕು ಎನ್ನುತ್ತಾರೆ, ನಂತರವಾದರೂ ಏನಾಗುತ್ತದೆ… ಇಬ್ಬರು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟ ಮಾತ್ರಕ್ಕೆ ಕೊಲಿಜಿಯಂ ನಿರ್ಧಾರವನ್ನು ಹೇಗೆ ಬದಲಿಸಲು ಸಾಧ್ಯ?” ಎಂದು ಗುಡುಗಿತು.
ಎಂಒಪಿ ಸಮಸ್ಯೆಯನ್ನು 2017ರಷ್ಟು ಹಿಂದೆಯೇ ಇತ್ಯರ್ಥಗೊಳಿಸಲಾಗಿದೆ ಎಂದು ಕೂಡ ನ್ಯಾಯಾಲಯ ತನ್ನ ಆದೇಶದಲ್ಲಿ ವಿವರಿಸಿದೆ. ಆದ್ದರಿಂದ ಕೊಲಿಜಿಯಂಗೆ ಸಂಬಂಧಿಸಿದಂತೆ ಕಲ್ಕತ್ತಾದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳು ನೀಡಿದ್ದ ಅಭಿಪ್ರಾಯ ಎನ್‌ಜೆಎಸಿ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಸೋಲಿಸಲು ಸಾಧ್ಯವಿಲ್ಲ ಮತ್ತು 2017 ರಲ್ಲಿ ಅಂತಿಮಗೊಳಿಸಿದ ಎಂಒಪಿಯನ್ನು ಅನ್ವಯಿಸಬೇಕಾಗುತ್ತದೆ ಎಂದಿತು.
ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು ಮಾಡಿದ ಹೆಸರುಗಳನ್ನು ಅನುಮೋದಿಸುವಲ್ಲಿನ ಕೇಂದ್ರ ಸರ್ಕಾರದ ವೈಫಲ್ಯ ಎರಡನೇ ನ್ಯಾಯಮೂರ್ತಿಗಳ ಪ್ರಕರಣದಲ್ಲಿ ನೀಡಲಾಗಿದ್ದ ತೀರ್ಪಿಗೆ ನೇರ ವ್ಯತಿರಿಕ್ತವಾಗಿದೆ ಎಂದು ದೂರಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.