ರಾಜ್ಯದಲ್ಲಿ ಸಂಭವಿಸಿದ ಮೊರ್ಬಿ ಸೇತುವೆ ಕುಸಿತದ ಘಟನೆಯು ಸಂಬಂಧಪಟ್ಟ ಅಧಿಕಾರಿಗಳು ಸೇತುವೆಯನ್ನು ಸರಿಯಾಗಿ ನಿರ್ವಹಿಸಲು ವಿಫಲರಾದ ಕಾರಣದಿಂದ ಉಂಟಾದ ʼಎಂಜಿನಿಯರಿಂಗ್ ವಿಪತ್ತುʼ ಎಂದು ಗುಜರಾತ್ ಹೈಕೋರ್ಟ್ ಬುಧವಾರ ಹೇಳಿದೆ (ಯತೀಶ್ ಭಾಯ್ ಗೋವಿಂದ ಭಾಯ್ ದೇಸಾಯಿ ವರ್ಸಸ್ ಗುಜರಾತ್ ರಾಜ್ಯ).
ರಾಜ್‌ಕೋಟ್ ಜಿಲ್ಲೆಯ ಎರಡು ಪಾರಂಪರಿಕ ಸೇತುವೆಗಳ ಶಿಥಿಲಾವಸ್ಥೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಅನಿರುದ್ಧ ಮಾಯಿ ಅವರ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಎರಡು ಸೇತುವೆಗಳ ದುರಸ್ತಿ ಕೈಗೊಳ್ಳಲು ಅಧಿಕಾರಿಗಳು ಒಪ್ಪಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಲಾಯಿತು. ಸರಿಯಾಗಿ ದುರಸ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಮತ್ತು ಮೊರ್ಬಿಯಲ್ಲಿ ನಡೆಸಿದ ರೀತಿ ಇಲ್ಲಿ ಕೆಲಸ ನಡೆಸಬಾರದು ಎಂದು ನ್ಯಾಯಾಲಯ ಒತ್ತಿ ಹೇಳಿತು.
"ಪಾರಂಪರಿಕ ರಚನೆಯನ್ನು ದುರಸ್ತಿ ಮಾಡುವಾಗ ನಿರ್ದಿಷ್ಟ ವಸ್ತುವನ್ನು ಬಳಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ವಸ್ತುಗಳನ್ನು ಬದಲಿಸಲಾಗದು. ಮೊರ್ಬಿಯಲ್ಲಿ ಏನಾಯಿತು? ಹಳೆಯ ಮರದ ಹಲಗೆಗಳಿಗೆ ಬದಲಾಗಿ ಅಲ್ಯೂಮಿನಿಯಂ ಬಳಕೆ ಮಾಡಲಾಯಿತು. ಮೊರ್ಬಿಯಲ್ಲಿ ನಡೆದದ್ದು ಎಂಜಿನಿಯರಿಂಗ್ ದುರಂತವಲ್ಲದೆ ಬೇರೇನೂ ಅಲ್ಲ" ಎಂದು ಮುಖ್ಯ ನ್ಯಾಯಮೂರ್ತಿ ಅಗರ್ವಾಲ್ ಹೇಳಿದರು.
ನ್ಯಾಯಾಲಯ ಆದೇಶ ಹೊರಡಿಸಿದ ನಂತರ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ ಎಂದು ನಿದ್ರೆಯಿಂದ ಎಚ್ಚರಗೊಳ್ಳಲು ವಿಫಲವಾದ ರಾಜ್ಯ ಸರ್ಕಾರವನ್ನು ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿತು. ಹೈಕೋರ್ಟ್ ಆದೇಶ ಹೊರಡಿಸುವವರೆಗೆ ಕಾಯುವ ಬದಲು ರಾಜ್ಯವು ತನ್ನದೇ ಆದ ಕ್ರಮ ತೆಗೆದುಕೊಂಡಿರಬೇಕು ಎಂದು ಪೀಠ ಹೇಳಿತು.
ಈ ಎರಡು ಸೇತುವೆಗಳ ದುರಸ್ತಿ ಕೈಗೊಳ್ಳಲು ರಸ್ತೆಗಳು ಮತ್ತು ಸೇತುವೆಗಳ (ಆರ್ & ಬಿ) ಇಲಾಖೆಯಲ್ಲಿ ಸಂರಕ್ಷಣಾ ತಜ್ಞರು ಇಲ್ಲ ಎಂದು ನ್ಯಾಯಾಲಯವು ರಾಜ್ಯಕ್ಕೆ ಹೇಳಿದೆ.
"ಪಾರಂಪರಿಕ ಕಟ್ಟಡಗಳಲ್ಲಿ ದುರಸ್ತಿ ನಡೆಸಲು ಅಗತ್ಯವಿರುವ ಸಂರಕ್ಷಣಾ ವಾಸ್ತುಶಿಲ್ಪಿಯನ್ನು ಆರ್ & ಬಿ ಇಲಾಖೆ ಹೊಂದಿಲ್ಲ. ದುರಸ್ತಿ ಹೇಗೆ ಮಾಡಬೇಕು, ಯಾವ ಸಾಮಗ್ರಿ ಬೇಕಾಗುತ್ತವೆ ಇತ್ಯಾದಿಗಳ ಬಗ್ಗೆ ತಜ್ಞರಿಂದ ವರದಿ ಪಡೆದು ಸಲ್ಲಿಸಬೇಕು. ಅದನ್ನು ನಮಗೆ ಸಲ್ಲಿಸಿ, ಈ ಕುರಿತು ನಾವು ಸಹ ತಜ್ಞರಿಂದ ಒಂದು ವರದಿ ಪಡೆಯುತ್ತೇವೆ " ಎಂದು ಹೇಳಿದ ಪೀಠ ವಿಚಾರಣೆ ಮುಂದೂಡಿತು.