[ಸೇತುವೆ ದುರಂತ] ಇಂದೇ ಅಫಿಡವಿಟ್ ಸಲ್ಲಿಸಿ ಇಲ್ಲವೇ ದಂಡ ಪಾವತಿಸಿ: ಮೋರ್ಬಿ ಪುರಸಭೆಗೆ ಗುಜರಾತ್ ಹೈಕೋರ್ಟ್ ತರಾಟೆ

ಪ್ರಕರಣವನ್ನು ಲಘುವಾಗಿ ಪರಿಗಣಿಸುವುದನ್ನು ನಿಲ್ಲಿಸಿ. ಸಂಜೆಯೊಳಗೆ ಅಫಿಡವಿಟ್ ಸಲ್ಲಿಸಿ ಇಲ್ಲವೇ ₹ 1 ಲಕ್ಷ ದಂಡ ಪಾವತಿಸಿ ಎಂದು ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಎಂಎಂಸಿ ಪರ ವಕೀಲರಿಗೆ ತಾಕೀತು ಮಾಡಿದರು.
Morbi Bridge collapse
Morbi Bridge collapse
Published on

ಒಟ್ಟು 135 ಜನರ ಸಾವಿಗೆ ಕಾರಣವಾದ ಮೋರ್ಬಿ ತೂಗುಸೇತುವೆ ದುರಂತಕ್ಕೆ ಸಂಬಂಧಿಸಿದಂತೆ ತಾನು ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಪ್ರತಿಕ್ರಿಯೆ ನೀಡಲು ವಿಫಲವಾದ ಮೋರ್ಬಿ ಪುರಸಭೆಯನ್ನು (ಎಂಎಂಸಿ) ಗುಜರಾತ್‌ ಹೈಕೋರ್ಟ್‌ ಬುಧವಾರ ತರಾಟೆಗೆ ತೆಗೆದುಕೊಂಡಿತು.

ಇಂದು ಸಂಜೆಯೊಳಗೆ ಅಫಿಡವಿಟ್‌ ಸಲ್ಲಿಸಿ ಇಲ್ಲವೇ ₹ 1 ಲಕ್ಷ ದಂಡ ಪಾವತಿಸಿ ಎಂದು ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಅವರಿದ್ದ ಪೀಠ ಎಚ್ಚರಿಕೆ ನೀಡಿತು.

“ಪ್ರಕರಣವನ್ನು ಲಘುವಾಗಿ ಪರಿಗಣಿಸುವುದನ್ನು ನಿಲ್ಲಿಸಿ. ಸಂಜೆಯೊಳಗೆ ಅಫಿಡವಿಟ್‌ ಸಲ್ಲಿಸಿ ಇಲ್ಲವೇ ₹ 1 ಲಕ್ಷ ದಂಡ ಪಾವತಿಸಿ” ಎಂದು ಮುಖ್ಯ ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಎಂಎಂಸಿ ಪರ ವಕೀಲರಿಗೆ ತಾಕೀತು ಮಾಡಿದರು. ವಕೀಲರು ಸಮಯಾವಕಾಶ ಕೋರಿದ ಹಿನ್ನೆಲೆಯಲ್ಲಿ ಪೀಠ ಈ ರೀತಿ ಪ್ರತಿಕ್ರಿಯಿಸಿತು.

Also Read
ಒಪ್ಪಂದ ಮುಗಿದಿದ್ದರೂ ಮೋರ್ಬಿ ಸೇತುವೆ ನಿರ್ವಹಣೆಗೆ ಅನುಮತಿಸಿದ್ದು ಹೇಗೆ? ಸರ್ಕಾರಕ್ಕೆ ಗುಜರಾತ್ ಹೈಕೋರ್ಟ್ ಪ್ರಶ್ನೆ

ನೋಟಿಸ್ ಜಾರಿ ಮಾಡಿದ್ದರೂ ಮಹಾನಗರ ಪಾಲಿಕೆ ನ್ಯಾಯಾಲಯದ ಮುಂದೆ ಹಾಜರಾಗದೆ ಅತಿ ಬುದ್ಧಿವಂತಿಕೆ ತೋರುತ್ತಿದೆ ಎಂದು ಪೀಠ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿತ್ತು. ಪುರಸಭೆ ಜಿಲ್ಲಾಧಿಕಾರಿ ವ್ಯಾಪ್ತಿಗೆ ಬರಲಿದ್ದು ಅವರು ಚುನಾವಣಾ ಕರ್ತವ್ಯದಲ್ಲಿದ್ದಾರೆ. ಅವರಿಗೆ ನೋಟಿಸ್‌ ನೀಡುವ ಬದಲು ಪುರಸಭೆಗೆ ನೋಟಿಸ್‌ ನೀಡಲಾಗಿತ್ತು. ಹೀಗಾಗಿ ನ್ಯಾಯಾಲಯಕ್ಕೆ ಹಾಜರಾಗಲು ವಿಳಂಬವಾಯಿತು ಎಂದು ವಕೀಲರು ವಿವರಿಸಿದ್ದರು.  

ಖಾಸಗಿ ಗುತ್ತಿಗೆದಾರರೊಡನೆ ಈ ಮೊದಲ ಒಪ್ಪಂದದ ಅವಧಿ ಮುಕ್ತಾಯಗೊಂಡ ನಂತರವೂ ಮೂರು ವರ್ಷಗಳವರೆಗೂ ಮೋರ್ಬಿ ತೂಗು ಸೇತುವೆಯ ನಿರ್ವಹಣೆಗೆ ಏಕೆ ಅನುಮತಿ ನೀಡಲಾಗಿತ್ತು ಎಂದು ಪೀಠ ನಿನ್ನೆ ಕಟುವಾಗಿ ಪ್ರಶ್ನಿಸಿತ್ತು.  

ಅಕ್ಟೋಬರ್ 30ರಂದು ದುರಂತದ ಬಗ್ಗೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಪೀಠ ಸರ್ಕಾರ ಅದರ ಮುಖ್ಯ ಕಾರ್ಯದರ್ಶಿ, ಮೋರ್ಬಿ ನಗರ ಪಾಲಿಕೆ, ನಗರಾಭಿವೃದ್ಧಿ ಇಲಾಖೆ (ಯುಡಿಡಿ), ರಾಜ್ಯ ಗೃಹ ಇಲಾಖೆ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ಪಕ್ಷಕಾರರನ್ನಾಗಿ ಮಾಡುವಂತೆ ನಿರ್ದೇಶಿಸಿತ್ತು.

Kannada Bar & Bench
kannada.barandbench.com