ಮೊರ್ಬಿ ಮೇಲ್ಸೇತುವೆ ಕುಸಿತ: ಒರೇವಾ ಸಮೂಹದ ವ್ಯವಸ್ಥಾಪಕ ನಿರ್ದೇಶಕನಿಗೆ ಜಾಮೀನು ನಿರಾಕರಣೆ

ಜನವರಿಯಲ್ಲಿ ಪೊಲೀಸರಿಗೆ ಶರಣಾಗಿರುವ ಆರೋಪಿಗಳಿಗೆ ಮೇಲ್ಸೇತುವೆಯ ಸ್ಥಿತಿ ಕಳಪೆಯಾಗಿದೆ ಎಂಬುದು ತಿಳಿದಿತ್ತು. ಅದಾಗ್ಯೂ ಅದನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿತ್ತು ಎಂದು ನ್ಯಾ. ದಿವ್ಯೇಶ್‌ ಜೋಶಿ ಆದೇಶದಲ್ಲಿ ದಾಖಲಿಸಿದ್ದಾರೆ.
Gujarat HC, Morbi Bridge
Gujarat HC, Morbi Bridge
Published on

ಶತಮಾನಕ್ಕೂ ಹಳೆಯದಾದ ಮೊರ್ಬಿ ಮೇಲ್ಸೇತುವೆ ಎಂದು ಚಿರಪರಿಚಿತವಾಗಿದ್ದ ಜುಲ್ಟೊ ಪುಲ್‌ ನಿರ್ವಹಣೆ ಮಾಡುತ್ತಿದ್ದ ಒರೇವಾ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಜಯಸುಖ್‌ಭಾಯ್‌ ಭಲೋದಿಯಾ (ಪಟೇಲ್‌) ಅವರಿಗೆ ಮಂಗಳವಾರ ಗುಜರಾತ್‌ ಹೈಕೋರ್ಟ್‌ ಜಾಮೀನು ನಿರಾಕರಿಸಿದೆ [ಜಯಸುಖ್‌ಭಾಯ್‌ ಭಲೋದಿಯಾ (ಪಟೇಲ್‌) ವರ್ಸಸ್‌ ಗುಜರಾತ್‌ ರಾಜ್ಯ].

ಮೊರ್ಬಿ ಮೇಲ್ಸೇತುವೆ ಹಳೆಯದಾಗಿದ್ದು, ಅದರ ರಿಪೇರಿ ಅಗತ್ಯವಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಜಯಸುಖ್‌ಭಾಯ್‌ ಅವರು ಜಿಲ್ಲಾಧಿಕಾರಿ ಮತ್ತು ಮೊರ್ಬಿ ನಗರಪಾಲಿಕೆಯ ಮುಖ್ಯಸ್ಥರ ಜೊತೆ ಸಂವಹನ ನಡೆಸಿದ್ದಾರೆ ಎಂದು ಆದೇಶದಲ್ಲಿ ನ್ಯಾ. ದಿವ್ಯೇಶ್‌ ಜೋಶಿ ದಾಖಲಿಸಿದ್ದಾರೆ.

“ಭಲೋದಿಯಾ ಅವರಿಗೆ ಮೇಲ್ಸೇತುವೆಯ ಸ್ಥಿತಿಗತಿ ಬಗ್ಗೆ ಅರಿವಿತ್ತು. ಮೇಲ್ಸೇತುವೆ ನಿರ್ವಹಣೆ ಮಾಡಲು ಅದನ್ನು ಬಳಕೆಗೆ ನಿರ್ಬಂಧಿಸಬೇಕು. ಇಲ್ಲವಾದಲ್ಲಿ ದುರ್ಘಟನೆ ಸಂಭವಿಸಬಹುದು ಎಂಬ ಅರಿವು ಅರ್ಜಿದಾರರಿಗೆ ಇತ್ತು. ಮೇಲ್ಸೇತುವೆಯ ಸೂಕ್ತ ಮಾಹಿತಿ ಇದ್ದರೂ ಅದನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಭಲೋದಿಯಾ ಅನುಮತಿಸಿದ್ದರು” ಎಂದು ಆದೇಶದಲ್ಲಿ ವಿವರಿಸಲಾಗಿದೆ.

“ಕಂಪೆನಿಯ ಮುಖ್ಯಸ್ಥರಾದ ಭಲೋದಿಯಾ ಅವರು ಸೂಕ್ತ ಸಂದರ್ಭದಲ್ಲಿ ಕ್ರಮಕೈಗೊಂಡಿದ್ದರೆ ಇಂಥ ದುರ್ಘಟನೆಯನ್ನು ತಡೆಯಬಹುದಿತ್ತು. ಅತ್ಯಂತ ಅಮೂಲ್ಯವಾದ ಮುಗ್ಧ ಜನರ ಜೀವ ಉಳಿಸಬಹುದಿತ್ತು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಕಳೆದ ವರ್ಷ ನಡೆದಿದ್ದ ಮೊರ್ಬಿ ಮೇಲ್ಸೇತುವೆ ಕುಸಿತ ಪ್ರಕರಣದಲ್ಲಿ 135 ಮಂದಿ ಸಾವಿಗೀಡಾಗಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಸಂತ್ರಸ್ತರು ಭಲೋದಿಯಾ ವಿರುದ್ಧ ವಿರುದ್ಧ ಕಠಿಣ ಕ್ರಮಕೋರಿ ಸತ್ರ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂಬ ಅಂಶವನ್ನೂ ಆದೇಶದಲ್ಲಿ ದಾಖಲಿಸಲಾಗಿದೆ. 

Kannada Bar & Bench
kannada.barandbench.com