ರಾಜ್ಯದಲ್ಲಿ ಮಂಗಳವಾರ ರಾತ್ರಿಯಿಂದ 14 ದಿನಗಳ ಕಾಲ ಕೋವಿಡ್ ಕಠಿಣ ನಿಯಮ ಜಾರಿ; ಉಚಿತ ಕೋವಿಡ್ ಲಸಿಕೆಯ ಘೋಷಣೆ

18ರಿಂದ 45 ವರ್ಷ ವಯಸ್ಸಿನ ಎಲ್ಲರಿಗೂ ಉಚಿತ ಲಸಿಕೆ ನೀಡಲು ನಿರ್ಧಾರ. 45 ವರ್ಷ ಮೇಲ್ಪಟ್ಟವರಿಗೆ ಇದಾಗಲೇ ಕೇಂದ್ರದಿಂದ ಉಚಿತ ಲಸಿಕೆ ನೀಡಲಾಗುತ್ತಿದೆ ಎಂದು ವಿವರಿಸಿದ ಸಿಎಂ ಬಿ ಎಸ್‌ ಯಡಿಯೂರಪ್ಪ.
ರಾಜ್ಯದಲ್ಲಿ ಮಂಗಳವಾರ ರಾತ್ರಿಯಿಂದ 14 ದಿನಗಳ ಕಾಲ ಕೋವಿಡ್ ಕಠಿಣ ನಿಯಮ ಜಾರಿ; ಉಚಿತ ಕೋವಿಡ್ ಲಸಿಕೆಯ ಘೋಷಣೆ
Published on

ಕೋವಿಡ್‌ ಪ್ರಕರಣಗಳ ಹೆಚ್ಚಳ ತಡೆಯುವ ನಿಟ್ಟಿನಲ್ಲಿ ಮಂಗಳವಾರ, ಏಪ್ರಿಲ್‌ 27ರ ರಾತ್ರಿ 9 ಗಂಟೆಯಿಂದ ಹದಿನಾಲ್ಕು ದಿನಗಳ ಕಾಲ ಕರ್ನಾಟಕ ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ. ಮೇ 10ರ ಬೆಳಿಗ್ಗೆ 6ರವರೆಗೆ ಕರ್ಫ್ಯೂ ವಿಧಿಸಲಾಗಿದೆ.

ಸಚಿವ ಸಂಪುಟ ಸಭೆಯ ಬಳಿಕ ಸೋಮವಾರ ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಕರ್ಪ್ಯೂ ಜಾರಿಯ ಬಗ್ಗೆ ತಿಳಿಸಿದರು. ಅಗತ್ಯವಸ್ತುಗಳ ಖರೀದಿಗೆ ಬೆ.6 ರಿಂದ ಬೆ.10ರ ವರೆಗೆ ಅನುವು ಮಾಡಿಕೊಡಲಾಗಿದೆ. ಹದಿನಾಲ್ಕು ದಿನಗಳ ಕಾಲ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಮೆಟ್ರೋ ಸಾರಿಗೆ ವ್ಯವಸ್ಥೆ ಇರುವುದಿಲ್ಲ. ಅಗತ್ಯ ಸೇವೆಗಳಿಗೆ, ಅಂತರರಾಜ್ಯ ಸರಕು ಸೇವೆಗೆ ಮಾತ್ರ ಅನುಮತಿ ನೀಡಲಾಗಿದೆ. ಜನಸಂಚಾರ ನಿರ್ಬಂಧಿಸಲಾಗಿದೆ.

ಆದರೆ ಕಟ್ಟಡ ನಿರ್ಮಾಣ, ಕೈಗಾರಿಕೆ, ಕೃಷಿ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಹೊಟೆಲ್‌, ರೆಸ್ಟೊರೆಂಟ್‌ಗಳಲ್ಲಿ ಪಾರ್ಸೆಲ್‌ ತೆಗೆದುಕೊಳ್ಳಲು ಅಡ್ಡಿ ಇರುವುದಿಲ್ಲ. ಸಿದ್ಧ ಉಡುಪು ಕಾರ್ಖಾನೆಗಳನ್ನು ಹೊರತುಪಡಿಸಿ ಎಲ್ಲಾ ಉತ್ಪಾದನಾ ಉದ್ಯಮಗಳು ಕಾರ್ಯ ನಿರ್ವಹಿಸಬಹುದು. ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್‌ ಅವರು ಕೋವಿಡ್‌ ನಿಯಂತ್ರಣ ನೋಡಲ್‌ ಅಧಿಕಾರಿಗಳಾಗಿದ್ದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಹೊಣೆಯನ್ನು ಅವರಿಗೆ ವಹಿಸಲಾಗಿದೆ. ನಿಗದಿಯಾಗಿದ್ದ ಚುನಾವಣೆಗಳನ್ನು ಆರು ತಿಂಗಳ ಕಾಲ ಮುಂದೂಡಲು ಶಿಪಾರಸ್ಸು ಮಾಡಲಾಗಿದೆ.

ತಜ್ಞರು ಹಾಗೂ ಸಂಪುಟ ಸಹೋದ್ಯೋಗಿಗಳ ಸಲಹೆಯಂತೆ ಸಂಪೂರ್ಣ ಕರ್ಫ್ಯೂ ವಿಧಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಕೇಂದ್ರದಿಂದ ಆಮ್ಲಜನಕ ಪೂರೈಕೆ ಆರಂಭವಾಗಿದ್ದು ಒಂದು ಲಕ್ಷ ರೆಮ್ಡಿಸಿವಿರ್‌ ಚುಚ್ಚುಮದ್ದು ರಾಜ್ಯಕ್ಕೆ ಬರಲಿದೆ. 18ರಿಂದ 45 ವರ್ಷ ವಯಸ್ಸಿನ ಎಲ್ಲರಿಗೂ ಉಚಿತ ಲಸಿಕೆ ನೀಡಲು ನಿರ್ಧರಿಸಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರದಿಂದ ಉಚಿತ ಲಸಿಕೆ ನೀಡಲಾಗುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ನೂತನ ಮಾರ್ಗಸೂಚಿ ಪ್ರಕಟ

ಸಿಎಂ ತಿಳಿಸಿದ ವಿಷಯಗಳಿಗೆ ಪೂರಕವಾಗಿ ಸೋಮವಾರ ರಾತ್ರಿ ನೂತನ ಕೋವಿಡ್‌ ಮಾರ್ಗಸೂಚಿ ಬಿಡುಗಡೆ ಆಗಿದೆ. ಮೇ 12ರವರೆಗೆ ನಿರ್ಬಂಧ ಜಾರಿಯಲ್ಲಿರುವುದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಗಸೂಚಿಯನ್ನು ಇಲ್ಲಿ ಓದಿ:

Attachment
PDF
Covid-19 Guidelines 26.04.2021 (1).pdf
Preview
Kannada Bar & Bench
kannada.barandbench.com