ಲೋಕ ಅದಾಲತ್: ʼರೇರಾʼ ಕೇಸ್ ಸೇರಿದಂತೆ 3.67 ಲಕ್ಷ ಪ್ರಕರಣಗಳ ಇತ್ಯರ್ಥ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್ಎಲ್ಎಸ್ಎ) ಅಧ್ಯಕ್ಷರೂ ಆದ ಹೈಕೋರ್ಟ್ ನ್ಯಾಯಮೂರ್ತಿ ಬಿ ವೀರಪ್ಪ ಅವರು ಬೆಂಗಳೂರಿನ ಹೈಕೋರ್ಟ್‌ ಅಂಗಳದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿ ವೇಳೆ ಲೋಕ ಅದಾಲತ್ ಕುರಿತು ಮಾಹಿತಿ ನೀಡಿದರು.
ಲೋಕ ಅದಾಲತ್: ʼರೇರಾʼ ಕೇಸ್ ಸೇರಿದಂತೆ 3.67 ಲಕ್ಷ ಪ್ರಕರಣಗಳ ಇತ್ಯರ್ಥ
Published on

ಹೈಕೋರ್ಟ್ ಸೇರಿ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 3.67 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, ₹ 900 ಕೋಟಿಗೂ ಅಧಿಕ ಮೊತ್ತದ ಪರಿಹಾರ ಒದಗಿಸಲಾಗಿದೆ.

ಹೈಕೋರ್ಟ್‌ನ 11 ಪೀಠಗಳು ಸೇರಿದಂತೆ ರಾಜ್ಯದೆಲ್ಲೆಡೆ 978 ಪೀಠಗಳು ಲೋಕ್‌ ಅದಾಲತ್‌ನಲ್ಲಿ ಪಾಲ್ಗೊಂಡವು. ನ್ಯಾಯಾಲಯಗಳಲ್ಲಿ ಬಾಕಿ ಇರುವ 3,48,091 ಪ್ರಕರಣಗಳು ಹಾಗೂ 18,098 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಒಟ್ಟು 3,67,575 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಒಟ್ಟು ₹910,39,81,186 ಪರಿಹಾರ ಕೊಡಿಸಲಾಯಿತು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್ಎಲ್ಎಸ್ಎ) ಅಧ್ಯಕ್ಷರೂ ಆದ ಹೈಕೋರ್ಟ್ ನ್ಯಾಯಮೂರ್ತಿ ಬಿ ವೀರಪ್ಪ ಅವರು ಬೆಂಗಳೂರಿನ ಹೈಕೋರ್ಟ್‌ ಅಂಗಳದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿ ವೇಳೆ ಈ ಕುರಿತು ಮಾಹಿತಿ ನೀಡಿದರು.

ಮೊದಲ ಬಾರಿಗೆ ʼರೇರಾʼ ಪ್ರಕರಣಗಳ ಇತ್ಯರ್ಥ

ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ರಿಯಲ್ ಎಸ್ಟೇಟ್ ನಿಯಂತ್ರಣಾ ಪ್ರಾಧಿಕಾರದಲ್ಲಿ (ರೇರಾ) ಬಾಕಿಯಿದ್ದ ಪ್ರಕರಣಗಳನ್ನು ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ನಿರ್ಧರಿಸಲಾಗಿತ್ತು. ಗ್ರಾಹಕರು ಮತ್ತು ರಿಯಲ್ ಎಸ್ಟೇಟ್ ಕಂಪೆನಿಗಳ ನಡುವೆ ಇದ್ದ ಒಟ್ಟು 183 ಪ್ರಕರಣಗಳನ್ನು ಒಂದೇ ದಿನ ಇತ್ಯರ್ಥಪಡಿಸಿ, ₹ 8 ಕೋಟಿ ಮೊತ್ತದ ಪರಿಹಾರ ಪಾವತಿಸಲಾಗಿದೆ.

ಸಾರಿಗೆ ನೌಕರರ ಮರು ನೇಮಕಾತಿಗೆ ಒತ್ತು

ಪ್ರತಿಭಟನೆ ಮತ್ತಿತರ ಕಾರಣಗಳಿಂದ ವಜಾಗೊಂಡಿದ್ದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರನ್ನು ಲೋಕ್‌ ಅದಾಲತ್‌ ವೇಳೆ ಮರು ನೇಮಕ ಮಾಡಲಾಗಿದೆ. ಸಾರಿಗೆ ನೌಕರರಿಗೆ ಸಂಬಂಧಿಸಿದ ಬೆಂಗಳೂರಿನ 324, ಮಂಗಳೂರಿನ 32 ಮತ್ತು ಕಾರವಾರದಲ್ಲಿ 3 ಪ್ರಕರಣಗಳು ಸೇರಿ ಒಟ್ಟು 359 ಪ್ರಕರಣಗಳು ಇತ್ಯರ್ಥಗೊಂಡಿವೆ.

ಮತ್ತೆ ಒಂದಾದ ದಂಪತಿ

ಈ ಬಾರಿಯ ಲೋಕ ಅದಾಲತ್‌ನಲ್ಲಿ ಕೌಟುಂಬಿಕ ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿದ್ದ 90 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಅಲ್ಲದೆ, ವಿಚ್ಛೇದನ ಬಯಸಿದ್ದ ಮೈಸೂರಿನ 32 ಮತ್ತು ಬೆಂಗಳೂರಿನ 29 ದಂಪತಿ ಸೇರಿ ಇತರ ಜಿಲ್ಲೆಗಳಲ್ಲಿ ಹಲವಾರು ದಂಪತಿ ರಾಜೀ ಸಂಧಾನದ ಮೂಲಕ ಮತ್ತೆ ಒಂದಾಗಿ ವೈವಾಹಿಕ ಜೀವನ ಮುಂದುವರೆಸಲು ಒಪ್ಪಿಕೊಂಡಿದ್ದಾರೆ.

ಪರಿಹಾರ ನೀಡಲು ಒಪ್ಪಿದ ವಿಮಾ ಸಂಸ್ಥೆಗಳು

ಮೋಟಾರು ವಾಹನ ಕಾಯಿದೆಯಡಿ ವಿಚಾರಣಾ ಹಂತದಲ್ಲಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ₹1.75 ಕೋಟಿ ಪರಿಹಾರ ನೀಡಲು ವಿಮಾ ಸಂಸ್ಥೆಯೊಂದು ಒಪ್ಪಿಕೊಂಡಿದೆ. ಅಲ್ಲದೆ ಬಾಗಲಕೋಟೆಯ ಪ್ರಕರಣವೊಂದರಲ್ಲಿ ₹ 81 ಲಕ್ಷ ಹಾಗೂ ಶಿವಮೊಗ್ಗ ಪ್ರಕರಣದಲ್ಲಿ ₹ 70 ಲಕ್ಷ ಪರಿಹಾರವ ನೀಡಲು ವಿಮಾ ಕಂಪೆನಿಗಳು ಮುಂದಾಗಿವೆ.

ಇತರೆ ಹೆಗ್ಗುರುತುಗಳು

  • ವಾಣಿಜ್ಯ ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿದ್ದ 126 ಪ್ರಕರಣಗಳು ಇತ್ಯರ್ಥ. ₹ 62 ಕೋಟಿ ಪರಿಹಾರ ಪಾವತಿ.

  • ಆಸ್ತಿ ಪಾಲು ವಿವಾದ ಸಂಬಂಧ ಮೈಸೂರಿನಲ್ಲಿ 1969ರಿಂದ ನಡೆಯುತ್ತಿದ್ದ ಪ್ರಕರಣ ಮತ್ತು ಮಂಗಳೂರಿನಲ್ಲಿ 23 ವರ್ಷಗಳಿಂದ ನಡೆಯುತ್ತಿದ್ದ ಸಿವಿಲ್ ಪ್ರಕರಣ ರಾಜೀ ಸಂಧಾನದ ಮೂಲಕ ಇತ್ಯರ್ಥ.

  • ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಒಟ್ಟು 5,852 ಪ್ರರಕಣಗಳ ವಿಲೇವಾರಿ.

Kannada Bar & Bench
kannada.barandbench.com