ಮೆಗಾ ಲೋಕ ಅದಾಲತ್‌: 3.88 ಲಕ್ಷ ಪ್ರಕರಣಗಳು ಇತ್ಯರ್ಥ

ಕೋವಿಡ್‌ ಕಾರಣಕ್ಕೆ ರಾಜ್ಯ ಸರ್ಕಾರ ವಿಧಿಸಿದ್ದ ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ರಾಜ್ಯದ ಎಂಟು ಜಿಲ್ಲೆಗಳಲ್ಲಿ 16-08-2021ರಂದು ಅದಾಲತ್ ನಡೆದಿದೆ.
ಮೆಗಾ ಲೋಕ ಅದಾಲತ್‌: 3.88 ಲಕ್ಷ ಪ್ರಕರಣಗಳು ಇತ್ಯರ್ಥ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಆ. 14 ರಂದು ಏರ್ಪಡಿಸಲಾಗಿದ್ದ ಲೋಕ ಅದಾಲತ್‌ನಲ್ಲಿ ಒಟ್ಟು 3,88,981 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ರೂ 25,75,03,546 ದಂಡ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಲಾಗಿದೆ. ಲೋಕ ಅದಾಲತ್‌ನಿಂದ ಸರ್ಕಾರಕ್ಕೆ ರೂ. 177,94,29,748 ಉಳಿತಾಯವಾಗಲಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾ. ಅರವಿಂದ ಕುಮಾರ್ ತಿಳಿಸಿದರು.

ಇಂದು ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ 4 ಮೆಗಾ ಲೋಕ ಆದಾಲತ್‍ಗಳನ್ನು ನಿಗದಿಪಡಿಸಿದೆ. ಈ ನಿಟ್ಟಿನಲ್ಲಿ ಈ ವರ್ಷದ ಮೊದಲನೇ ಮೆಗಾ ಲೋಕ ಆದಾಲತ್‍ನ್ನು ಕಳೆದ ಮಾರ್ಚ್‌ನಲ್ಲಿ ಆಯೋಜಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.

ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಬೇಕಿದ್ದ 79,207 ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 33,251 ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ 5,32,326 ಪ್ರಕರಣಗಳಲ್ಲಿ 3,55,730 ಪ್ರಕರಣಗಳು ಸೇರಿದಂತೆ ಒಟ್ಟು 3,88,981 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿರುತ್ತದೆ. ಚೆಕ್‌ ಬೌನ್ಸ್ ಪ್ರಕರಣಗಳ ಇತ್ಯರ್ಥ ಸಂಬಂಧ ಶೀಘ್ರವೇ ಮತ್ತೊಂದು ಲೋಕ ಅದಾಲತ್‌ ನಡೆಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

Also Read
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 12-08-2021

ಲೋಕ ಅದಾಲತ್‌ ಬಗ್ಗೆ ಈ ಬಾರಿ ಪ್ರಾಧಿಕಾರ ವಿಶಿಷ್ಟ ಕ್ರಮ ಕೈಗೊಂಡಿತ್ತು. ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್‌ಗಳಲ್ಲಿ ಅದಾಲತ್‌ ಕುರಿತು ಸಂದೇಶ ಮುದ್ರಿಸಲಾಗಿತ್ತು. ಸ್ಮಾರ್ಟ್ ಸಿಟಿ ಯೋಜನೆಯಡಿ ಅಳವಡಿಸಲಾಗಿರುವ ಎಲ್ಇ ಡಿ ಸ್ಕ್ರೀನ್‍ಗಳಲ್ಲಿ ಲೋಕ್ ಅದಾಲತ್ ಬ್ಯಾನರ್‌ಗಳನ್ನು ಪ್ರದರ್ಶಿಸಲಾಗಿತ್ತು. ಸಾಮಾಜಿಕ ಜಾಲತಾಣಗಳ ಮೂಲಕವೂ ಪ್ರಚಾರ ಕೈಗೊಳ್ಳಲಾಯಿತು ಎಂದು ಅವರು ಹೇಳಿದರು.

ಕೋವಿಡ್‌ ಕಾರಣಕ್ಕೆ ರಾಜ್ಯ ಸರ್ಕಾರ ವಿಧಿಸಿದ್ದ ವಾರಾಂತ್ಯದ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯದ ಎಂಟು ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಬೆಳಗಾವಿ, ವಿಜಯಪುರ, ಬೀದರ್ ಹಾಗೂ ಕಲಬುರಗಿಯಲ್ಲಿ16-08-2021ರಂದು ಅದಾಲತ್‌ ನಡೆದಿದೆ.

ಈ ಬಾರಿಯ ಲೋಕಾ ಅದಾಲತ್‌ನಲ್ಲಿ1166 ವೈವಾಹಿಕ ಪ್ರಕರಣಗಳ ಇತ್ಯರ್ಥಗೊಂಡಿವೆ. ರಾಜಿ ಸಂಧಾನದ ಮೂಲಕ 74 ದಂಪತಿಗಳು ಒಂದಾಗಿದ್ದಾರೆ. ವಿಚ್ಚೇದನ ಪಡೆದ ದಂಪತಿ ಲೋಕ ಅದಾಲತ್ ಸಲಹೆಯಂತೆ ಮರುವಿವಾಹ ಆಗಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಗಳ ಕುಟುಂಬಕ್ಕೆ 72 ಲಕ್ಷ ಪರಿಹಾರ ನೀಡಲಾಗಿದೆ. ರಾಜಿ ಮೂಲಕ ವಿಮಾ ಕಂಪನಿ ಕೊಟ್ಟ ದೊಡ್ಡ ಮೊತ್ತ ಪರಿಹಾರ ಇದು. ಒಟ್ಟು 114 ವಾಣಿಜ್ಯ ಪ್ರಕರಣಗಳು ಇತ್ಯರ್ಥಗೊಂಡಿವೆ. 2884 ಪಾಲುದಾರಿಕೆಯ ಪ್ರಕರಣಗಳು ತಾರ್ಕಿಕ ಅಂತ್ಯ ಕಂಡಿವೆ.

Related Stories

No stories found.
Kannada Bar & Bench
kannada.barandbench.com