ರಾಜ್ಯಪಾಲರ ಕಾರ್ಯ ಹೆಚ್ಚು ಪಾರದರ್ಶಕವಾಗಲಿ, ಪ್ರತಿ ನಿರ್ಧಾರಕ್ಕೂ ಅವರು ಕಾರಣ ದಾಖಲಿಸುವಂತಾಗಲಿ: ಕೆ ವಿ ವಿಶ್ವನಾಥನ್

ಹುದ್ದೆಯನ್ನೇ ರದ್ದುಪಡಿಸುವುದು ಈಗಿನ ಅಗತ್ಯವಲ್ಲ. ಆದರೆ ರಾಜ್ಯಪಾಲರ ನಿರ್ಧಾರಗಳು ಮತ್ತು ಅವರು ಅದಕ್ಕೆ ನೀಡಿದ ಕಾರಣಗಳು ಸಾರ್ವಜನಿಕಗೊಳ್ಳಬೇಕು. ಆ ಮೂಲಕ ಅವರಿಗೆ ಒಳ್ಳೆಯ ಹೆಸರೋ ಅಥವಾ ಕೆಟ್ಟ ಹೆಸರೋ ದೊರೆಯುವಂತಾಗಲಿ ಎಂದರು.
KV Viswanathan
KV Viswanathan

ರಾಜ್ಯಗಳ ರಾಜ್ಯಪಾಲರ ಕಾರ್ಯಚಟುವಟಿಕೆಗಳಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ಅವಶ್ಯಕತೆ ಇದ್ದು ತಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಕ್ಕೂ ರಾಜ್ಯಪಾಲರು ಕಾರಣ ನೀಡುವಂತಾಗಬೇಕು ಎಂದು ಹಿರಿಯ ನ್ಯಾಯವಾದಿ ಕೆ ವಿ ವಿಶ್ವನಾಥನ್‌ ಹೇಳಿದರು.

ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಮತ್ತು ನಾವಿ ಬುಕ್ಸ್‌ ಕಳೆದ ಗುರುವಾರ ಹಮ್ಮಿಕೊಂಡಿದ್ದ 'ಹೆಡ್ಸ್ ಹೆಲ್ಡ್‌ ಹೈ: ಸಾಲ್ವೆಜಿಂಗ್ ಸ್ಟೇಟ್ ಗವರ್ನರ್ ಫಾರ್ 21 ಸೆಂಚುರಿ ಇಂಡಿಯಾ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಹುದ್ದೆಯನ್ನೇ ರದ್ದುಪಡಿಸುವುದು ಈಗಿನ ಅಗತ್ಯವಲ್ಲ. ಆದರೆ ಪ್ರತಿ ಹಂತದಲ್ಲೂ ರಾಜ್ಯಪಾಲರ ನಿರ್ಧಾರಗಳು ಮತ್ತು ಅವರು ಅದಕ್ಕೆ ನೀಡಿದ ಕಾರಣಗಳು ಸಾರ್ವಜನಿಕಗೊಳ್ಳಬೇಕು. ಆ ಮೂಲಕ ಅವರಿಗೆ ಒಳ್ಳೆಯ ಹೆಸರೋ ಅಥವಾ ಕೆಟ್ಟ ಹೆಸರೋ ದೊರೆಯುವಂತಾಗಲಿ ಎಂದರು.

ನಿರ್ಧಾರವೊಂದು ಹೊರಬಿದ್ದರೆ ತನಗೆ ಹೆಸರೋ ಅಪಖ್ಯಾತಿಯೋ ಬರುತ್ತದೆ ಎಂಬ ಎಚ್ಚರ ಅವರಲ್ಲಿ ಮೂಡಿದರೆ ಪ್ರಜಾಪ್ರಭುತ್ವದ ನೈಜ ತೀರ್ಪುಗಾರರು ತಲೆ ಎತ್ತುತ್ತಾರೆ ಎಂದು ವಿಶ್ವನಾಥನ್‌ ಆಶಿಸಿದರು.  

ರಾಜ್ಯಪಾಲರ ಹುದ್ದೆಗೆ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆ ತರುವಲ್ಲಿ ಮಾಹಿತಿ ಹಕ್ಕು ಕಾಯಿದೆ ಮತ್ತು ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ. ರಾಜ್ಯಪಾಲರು ಕೈಗೊಂಡ ಕೆಲ ಕ್ರಮಗಳನ್ನು ಆರ್‌ಟಿಐ ಕಾಯಿದೆ ಅಡಿ ಜಾಲತಾಣದಲ್ಲಿ ಕಡ್ಡಾಯವಾಗಿ ಪ್ರಕಟಿಸುವುದಾದರೆ ಅವರ ಕಾರ್ಯವನ್ನು ಸೂಕ್ಚ್ಮವಾಗಿ ಪರಿಶೀಲಿಸಲು ಸಾಧ್ಯವಾಗಿ ಸಾರ್ವಜನಿಕರ ಮತ್ತು ಮಾಧ್ಯಮದ ಆಕ್ಷೇಪಣೆಗೆ ಅವಕಾಶ ನೀಡಿದಂತಾಗುತ್ತದೆ ಎಂದರು.

ರಾಜ್ಯಪಾಲರ ಹುದ್ದೆ ಪ್ರಮುಖವಾದುದಾಗಿದ್ದು ಅವರ ಕಾರ್ಯಗಳನ್ನು ಹೆಚ್ಚು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಸಾಗಬೇಕಿದೆ ಎಂದು ಅವರು ಸಮರ್ಥಿಸಿಕೊಂಡರು.

ನ್ಯಾಯಾಲಯಗಳ ಮಧ್ಯಸ್ಥಿಕೆಯಿಂದಾಗಿ ಮೊದಲು ಇದ್ದುದಕ್ಕಿಂತಲೂ ಈಗ ಪರಿಸ್ಥಿತಿ ಕನಿಷ್ಠ ಸೈದ್ಧಾಂತಿಕವಾಗಿಯಾದರೂ ಸುಧಾರಿಸಿದೆ. ಆದರೆ ಪ್ರಾಯೋಗಿಕ ಭಾಗ ಕಾರ್ಯನಿರ್ವಹಿಸುವ ಮಂದಿಯನ್ನು (ರಾಜ್ಯಪಾಲರು) ಅವಲಂಬಿಸಿದೆ ಎಂದು ಹೇಳಿದರು.

ರಾಜ್ಯಪಾಲರು ಸಂಪೂರ್ಣ ಕಾರ್ಯಾಂಗದ ಭಾಗವಾಗಿದ್ದು ಅವರ ಕಾರ್ಯವನ್ನು ಸುವ್ಯವಸ್ಥಿತಗೊಳಿಸುವುದಕ್ಕಾಗಿ ಮುಖ್ಯಮಂತ್ರಿಗಳೊಂದಿಗೆ ಅವರು ಕಡ್ಡಾಯ ಮತ್ತು ಅರ್ಥಪೂರ್ಣ ಸಮಾಲೋಚನೆ ನಡೆಸಬೇಕು. ಜೊತೆಗೆ ಅಂತಹ ಸಮಾಲೋಚನೆಯನ್ನು ಪಾರ್ದರ್ಶಕಗೊಳಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ʼದ ಪ್ರಿಂಟ್‌ʼ ಸುದ್ದಿ ಜಾಲತಾಣದ ಸಂಸ್ಥಾಪಕ ಶೇಖರ್‌ ಗುಪ್ತ ಅವರು ಕೂಡ ಭಾಗವಹಿಸಿದ್ದರು.

Related Stories

No stories found.
Kannada Bar & Bench
kannada.barandbench.com