
ಭಾರತದಲ್ಲಿ ಬಹುತೇಕ ದ್ವೇಷ ಭಾಷಣಗಳು ಧಾರ್ಮಿಕ ಅಲ್ಪಸಂಖ್ಯಾತರು ಅಥವಾ ದಮನಿತ ವರ್ಗಗಳ ವಿರುದ್ಧವಾಗಿದ್ದು, ಹಲವು ಬಾರಿ ರಾಜಕೀಯ ನಾಯಕರು ಚುನಾವಣಾ ಲಾಭಕ್ಕಾಗಿ ಅಂತಹ ಭಾಷಣ ಮಾಡುತ್ತಾರೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ ಎಸ್ ಓಕಾ ಹೇಳಿದ್ದಾರೆ.
ನ್ಯೂಯಾರ್ಕ್‌ನ ಕೊಲಂಬಿಯಾ ಕಾನೂನು ಶಾಲೆ ವರ್ಚುವಲ್ ವಿಧಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ 'ದ್ವೇಷ ಭಾಷಣ: ಧಾರ್ಮಿಕ ಮತ್ತು ಜಾತಿ ಅಲ್ಪಸಂಖ್ಯಾತರ ವಿರುದ್ಧ' ಎಂಬ ವಿಷಯದಲ್ಲಿ ಅವರು ಮಾತನಾಡಿದರು.
ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡಲು ಮತ್ತು ಸಾಮಾಜಿಕ ಸಾಮರಸ್ಯವನ್ನು ಕದಡುವುದಕ್ಕಾಗಿ ಬಹುಸಂಖ್ಯಾತ ಸಮುದಾಯವನ್ನು ಪ್ರಚೋದಿಸಲು ಇಂತಹ ಭಾಷಣಗಳನ್ನು ಹೆಚ್ಚಾಗಿ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಭಾರತದಲ್ಲಿನ ಹೆಚ್ಚಿನ ದ್ವೇಷ ಭಾಷಣಗಳು ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ದಮನಿತ ವರ್ಗಗಳ ವಿರುದ್ಧವಾಗಿವೆ.
ಈ ಭಾಷಣಗಳು ಸಾಮಾಜಿಕ ಸಾಮರಸ್ಯವನ್ನು ಕದಡುತ್ತವೆ. ದ್ವೇಷ ಭಾಷಣಕ್ಕೆ ರಾಜಕೀಯ ಕಾರಣಗಳೂ ಇರಬಹುದು ಮತ್ತು ರಾಜಕೀಯ ನಾಯಕರು ಅದರ ಲಾಭ ಮಾಡಿಕೊಳ್ಳುತ್ತಾರೆ.
ಅಂತಹ ಭಾಷಣಗಳು ಭಾರತೀಯ ದಂಡ ಸಂಹಿತೆ ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆಯಡಿಯಲ್ಲಿ ಅಪರಾಧಗಳಾಗಿದ್ದರೂ, ಅದನ್ನು ತಡೆಯಲು ಪರಿಣಾಮಕಾರಿ ಮಾರ್ಗವೆಂದರೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದಾಗಿದೆ.
ಆದರೆ, ವಾಕ್ ಸ್ವಾತಂತ್ರ್ಯವನ್ನು ಉಲ್ಲಂಘಿಸಿ ದ್ವೇಷ ಭಾಷಣಕ್ಕೆ ಶಿಕ್ಷೆ ವಿಧಿಸುವಂತಾಗಬಾರದು. ದ್ವೇಷ ಭಾಷಣ ಮಾಡಲಾಗಿದೆ ಎಂದು ಯಾರಾದರೂ ಭಾವಿಸಿದ ಮಾತ್ರಕ್ಕೆ ಅದು ದ್ವೇಷ ಭಾಷಣವಾಗುವುದಿಲ್ಲ.
ವಾಕ್ ಸ್ವಾತಂತ್ರ್ಯ, ಹಾಸ್ಯ, ವಿಡಂಬನೆ ಇಲ್ಲದಿದ್ದರೆ, ಘನತೆಯಿಂದ ಬದುಕುವ ಹಕ್ಕು ಕಣ್ಮರೆಯಾಗುತ್ತದೆ.
ನ್ಯಾಯಾಲಯಗಳು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಿದೆ.
ಭಿನ್ನಾಭಿಪ್ರಾಯ ಮತ್ತು ಪ್ರತಿಭಟಿಸುವ ಹಕ್ಕು ಪ್ರಜಾಪ್ರಭುತ್ವದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಇದು ಸದಾ ವಿಕಸನಗೊಳ್ಳಲು ಮತ್ತು ಬೆಳೆಯಲು ಅವಕಾಶ ಇರಬೇಕು.
ಭಾರತ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಡಾ. ಕಾಲಿನ್ ಗೊನ್ಸಾಲ್ವೇಸ್, ನ್ಯೂಯಾರ್ಕ್ ಕಾನೂನು ಶಾಲೆಯ ಪ್ರಾಧ್ಯಾಪಕಿ ಪ್ರೊ. ನಡೈನ್ ಸ್ಟ್ರೋಸೆನ್ ಭಾಗವಹಿಸಿದ್ದರು.
[ಕಾರ್ಯಕ್ರಮದ ವೀಡಿಯೊ ವೀಕ್ಷಿಸಲು ಕೆಳಗೆ ಕ್ಲಿಕ್ಕಿಸಿ]