ಸುಪ್ರೀಂ ಕೋರ್ಟ್, ಜೈಲು
ಸುಪ್ರೀಂ ಕೋರ್ಟ್, ಜೈಲು

ಪ. ಬಂಗಾಳದಲ್ಲಿ ಬಹುತೇಕ ಮಹಿಳಾ ಕೈದಿಗಳು ಗರ್ಭ ಧರಿಸಿರುವುದು ಜೈಲುಗಳ ಹೊರಗೆ ಇದ್ದಾಗ: ಸುಪ್ರೀಂಗೆ ಅಮಿಕಸ್ ಮಾಹಿತಿ

ಪಶ್ಚಿಮ ಬಂಗಾಳದ ಜೈಲುಗಳಲ್ಲಿ ಮಹಿಳಾ ಕೈದಿಗಳು ಗರ್ಭಿಣಿಯಾಗುತ್ತಿದ್ದಾರೆ ಎಂಬ ಆರೋಪಗಳನ್ನು ಪರಿಶೀಲಿಸಲು ಈಚೆಗೆ ನಿರ್ಧರಿಸಿದ್ದ ಸರ್ವೋಚ್ಚ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿಕಸ್‌ ಅವರಿಂದ ಪ್ರತಿಕ್ರಿಯೆ ಕೇಳಿತ್ತು.
Published on

ಪಶ್ಚಿಮ ಬಂಗಾಳದ ಮಹಿಳಾ ಜೈಲುಗಳಲ್ಲಿ ಮಹಿಳಾ ಕೈದಿಗಳು ಗರ್ಭಧರಿಸಿರುವ ಪ್ರಕರಣಗಳು ಬಹುತೇಕವಾಗಿ ಮಹಿಳಾ ಕೈದಿಗಳು ಜೈಲಿನ ಹೊರಗೆ ಇದ್ದಾಗ ಸಂಭವಿಸಿವೆ ಎಂದು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಲಾಗಿದೆ.

ಪಶ್ಚಿಮ ಬಂಗಾಳದ ಜೈಲುಗಳಲ್ಲಿ ಮಹಿಳೆಯರು ಗರ್ಭಿಣಿಯಾಗುತ್ತಿದ್ದಾರೆ ಎಂಬ ಆರೋಪಗಳನ್ನು ಪರಿಶೀಲಿಸಲು ಈಚೆಗೆ ನಿರ್ಧರಿಸಿದ್ದ ಸರ್ವೋಚ್ಚ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿಕಸ್‌ ಅವರಿಂದ ಪ್ರತಿಕ್ರಿಯೆ ಕೇಳಿತ್ತು.

ಹೆಚ್ಚಿನ ಮಹಿಳಾ ಕೈದಿಗಳು ಜೈಲಿಗೆ ಕರೆತರುವಾಗ ಗರ್ಭಿಣಿಯಾಗಿರುತ್ತಿದ್ದರು ಎಂದು ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಗೌರವ್ ಅಗರ್‌ವಾಲ್‌ ಅವರು ಈಗ ಮಾಹಿತಿ ನೀಡಿದ್ದಾರೆ.

"ಬಹುತೇಕ ಮಹಿಳಾ ಕೈದಿಗಳನ್ನು ಜೈಲಿಗೆ ಕರೆತರುವ ಸಮಯದಲ್ಲಿಯೇ ಗರ್ಭಿಣಿಯರಾಗಿರುತ್ತಿದ್ದರು ಎಂದು ತೋರುತ್ತದೆ. ಕೆಲವು ಪ್ರಕರಣಗಳಲ್ಲಿ, ಮಹಿಳಾ ಕೈದಿಗಳು ಪೆರೋಲ್ ಮೇಲೆ ತೆರಳಿದ್ದರು. ಮರಳುವ ಗರ್ಭಧರಿಸಿರುತ್ತಿದ್ದರು" ಎಂದು ಅಗರ್‌ವಾಲ್‌ ಫೆಬ್ರವರಿ 12ರಂದು ಸಲ್ಲಿಸಿದ ಮಾಹಿತಿಯಲ್ಲಿ ತಿಳಿಸಲಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಪಶ್ಚಿಮ ಬಂಗಾಳದ ಜೈಲುಗಳಲ್ಲಿ 62 ಮಕ್ಕಳು ಜನಿಸಿದ್ದಾರೆ ಎಂದು ಪಶ್ಚಿಮ ಬಂಗಾಳದ ಸುಧಾರಣಾ ಸೇವಾ ವಿಭಾಗದ ಎಡಿಜಿ ಮತ್ತು ಐಜಿ ಮಾಹಿತಿ ನೀಡಿದ್ದಾರೆ ಎಂಬುದಾಗಿ ಅವರು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಸೆರೆವಾಸ ಅನುಭವಿಸುತ್ತಿರುವ ಮಹಿಳಾ ಕೈದಿಗಳು ಗರ್ಭಿಣಿಯರಾಗುತ್ತಿದ್ದು ರಾಜ್ಯದ ವಿವಿಧ ಜೈಲುಗಳಲ್ಲಿ ಸುಮಾರು 196 ಶಿಶುಗಳು ಜನಿಸಿವೆ ಎಂದು ಕೆಲ ದಿನಗಳ ಹಿಂದೆ ಅಮಿಕಸ್ ಕ್ಯೂರಿ ಅಗರ್‌ವಾಲ್‌ ತಿಳಿಸಿದ್ದರು. ಕಲ್ಕತ್ತಾ ಹೈಕೋರ್ಟ್‌ಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಜೈಲು ಸುಧಾರಣೆಗಳು ಮತ್ತು ಸುಧಾರಣಾ ಗೃಹಗಳಿಗೆ ಸಂಬಂಧಿಸಿದ ಪ್ರಕರಣವನ್ನು ಉಲ್ಲೇಖಿಸುವಾಗ ಅವರು ಈ ಮಾಹಿತಿ ನೀಡಿದ್ದರು.

ಮಹಿಳಾ ಕೈದಿಗಳನ್ನು ಇರಿಸಲಾಗಿರುವ ಜೈಲು ಸೌಲಭ್ಯಗಳಿಗೆ ಪುರುಷ ಉದ್ಯೋಗಿಗಳ ಪ್ರವೇಶವನ್ನು ನಿಷೇಧಿಸುವುದೂ ಸೇರಿದಂತೆ ಅಮಿಕಸ್ ಅವರು ಹೈಕೋರ್ಟ್‌ಗೆ ವಿವಿಧ ಸಲಹೆಗಳನ್ನು ನೀಡಿದ್ದರು. ಅದರ ಬೆನ್ನಿಗೇ ಪ್ರಕರಣ ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿತ್ತು.

Kannada Bar & Bench
kannada.barandbench.com