ರಾಜ್ಯಪಾಲರ ಹುದ್ದೆ ಪಡೆಯಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯಿಂದ ಲಂಚ, ನ್ಯಾಯಾಧೀಶರ ಘನತೆಗೆ ಧಕ್ಕೆ ಎಂದ ಹೈಕೋರ್ಟ್

ಆರೋಪಿ ಜ್ಯೋತಿಷಿ ಯುವರಾಜ್‌ ಸ್ವಾಮಿ ರಾಜಕಾರಣಿಗಳು, ಉದ್ಯಮಿಗಳು ಮತ್ತು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ ಎಸ್‌ ಇಂದ್ರಕಲಾ ಸೇರಿದಂತೆ ಹಲವರಿಗೆ ವಂಚಿಸಿದ್ದಾನೆ ಎಂದು ಜಾಮೀನು ನಿರಾಕರಿಸುವಾಗ ಪೀಠ ಹೇಳಿದೆ.
High Court of Karnataka
High Court of Karnataka

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರಾಜ್ಯಪಾಲರ ಹುದ್ದೆಗಿಟ್ಟಿಸಲು ಮಧ್ಯವರ್ತಿಯಾದ ಜ್ಯೋತಿಷಿಗೆ ಲಂಚ ನೀಡಿರುವುದು ನ್ಯಾಯಾಧೀಶರು ಮತ್ತು ರಾಜ್ಯಪಾಲರ ಹುದ್ದೆಯ ಘನತೆಯನ್ನು ಕುಗ್ಗಿಸಿದೆ ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಹೇಳಿದೆ (ಯುವರಾಜ್‌ ವರ್ಸಸ್‌ ಕರ್ನಾಟಕ ರಾಜ್ಯ).

ಯುವರಾಜ್‌ ಸ್ವಾಮಿಗೆ ಜಾಮೀನು ನಿರಾಕರಿಸಿರುವ ನ್ಯಾಯಮೂರ್ತಿಯಾದ ಕೆ ನಟರಾಜನ್‌ ಅವರಿದ್ದ ಏಕಸದಸ್ಯ ಪೀಠವು ರಾಜಕಾರಣಿಗಳು, ಉದ್ಯಮಿಗಳು ಮತ್ತು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ ಎಸ್‌ ಇಂದ್ರಕಲಾ ಸೇರಿದಂತೆ ಹಲವರಿಗೆ ಆರೋಪಿ ವಂಚಿಸಿದ್ದಾನೆ ಎಂದಿದೆ.

“ರಾಜ್ಯಪಾಲರ ಹುದ್ದೆ ಗಿಟ್ಟಿಸಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳು ಲಂಚ ನೀಡಿರುವುದು ಅತ್ಯಂತ ದುರದೃಷ್ಟಕರ ಬೆಳವಣಿಗೆಯಾಗಿದ್ದು, ದೂರುದಾರರ ಈ ನಡೆಯು ನ್ಯಾಯಾಧೀಶರು ಮತ್ತು ರಾಜ್ಯಪಾಲರ ಹುದ್ದೆಯ ಘನತೆಯನ್ನು ಕುಂದಿಸಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಬೆಂಗಳೂರಿನ ಹೈಗ್ರೌಂಡ್‌ ಮತ್ತು ಜ್ಞಾನಭಾರತಿ ಪೊಲೀಸ್‌ ಠಾಣೆಯ ಸೈಬರ್‌ ಅಪರಾಧ ವಿಭಾಗದಲ್ಲಿ ಯುವರಾಜ್‌ ವಿರುದ್ಧ ದಾಖಲಾಗಿದ್ದ ದೂರಿಗೆ ಸಂಬಂಧಿಸಿದಂತೆ ಅವರು ಹೈಕೋರ್ಟ್‌ನಲ್ಲಿ ಜಾಮೀನಿಗೆ ಮನವಿ ಸಲ್ಲಿಸಿದ್ದರು. ಸರ್ಕಾರದಲ್ಲಿ ವಿವಿಧ ಹುದ್ದೆ ಕಲ್ಪಿಸುವುದಾಗಿ ಆಮಿಷವೊಡ್ಡಿ ಯುವರಾಜ್‌ ಕೋಟ್ಯಂತರ ರೂಪಾಯಿಯನ್ನು ಹಲವರಿಗೆ ವಂಚಿಸಿದ್ದ ಆರೋಪದಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದರು.

ಪ್ರಮುಖ ರಾಜಕಾರಣಿಗಳಿಗೆ ಯುವರಾಜ್‌ ಭೇಟಿ ಮಾಡಿಸಿದ್ದ ಬಳಿಕ ಸುಮಾರು 8.5 ಕೋಟಿ ರೂಪಾಯಿಯನ್ನು ಆರ್‌ಟಿಜಿಎಸ್‌ ಮತ್ತು ನಗದಿನ ಮೂಲಕ ಪಾವತಿಸಿದ್ದಾಗಿ ನಿವೃತ್ತ ನ್ಯಾಯಾಧೀಶೆ ಆರೋಪಿಸಿದ್ದರು. ಯುವರಾಜ್‌ ಬಂಧನವಾಗುತ್ತಿದ್ದಂತೆ ಆತ ತನಗೂ ವಂಚಿಸಿದ್ದಾನೆ ಎಂದು ನಿವೃತ್ತ ನ್ಯಾಯಾಧೀಶೆಯು ಪೊಲೀಸರಿಗೆ ದೂರು ನೀಡಿದ್ದರು.

ಪಕ್ಷಕಾರರ ವಾದ

ಆರೋಪಿಯು ಮುಗ್ಧರಾಗಿದ್ದು, ಸಿಸಿಬಿ ಪೊಲೀಸ್‌ ಜಂಟಿ ಆಯುಕ್ತರಿಂದ ಲೋಕಾಯುಕ್ತರು ನೀಡಿದ ದೂರಿನವರೆಗೆ ಪೊಲೀಸರು ತಪ್ಪಾಗಿ ಯುವರಾಜ್‌ ಅವರನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್‌ ವಾದಿಸಿದರು. ದೂರುದಾರರಿಗೆ ಕರೆ ಮಾಡಿ ಅವರನ್ನು ಆಹ್ವಾನಿಸಿ ದೂರು ಪಡೆದು, ಯುವರಾಜ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಇಷ್ಟುಮಾತ್ರವಲ್ಲದೇ ಅರ್ಜಿದಾರರು ಸ್ವೀಕರಿಸಿರುವ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅರ್ಜಿದಾರರ ಬ್ಯಾಂಕ್‌ ಖಾತೆಗಳನ್ನೂ ವಶಕ್ಕೆ ಪಡೆಯಲಾಗಿದೆ. ಪೊಲೀಸರು ಈಗಾಗಲೇ ಆರೋಪ ಪಟ್ಟಿ ಸಲ್ಲಿಸಿರುವುದರಿಂದ ತನಿಖೆಗೆ ಅವರ ಅಗತ್ಯವಿಲ್ಲ ಎಂದು ವಾದಿಸಿದ್ದಾರೆ.

ಕೆಲಸ ಕೊಡಿಸುವುದಾಗಿ ಹಲವರಿಗೆ ವಂಚಿಸಿ, ಕೋಟ್ಯಂತರ ಹಣಪಡೆದಿರುವ ಆರೋಪಿ ಯುವರಾಜ್‌ಗೆ ಜಾಮೀನು ನೀಡಬಾರದು ಎಂದು ವಿಶೇಷ ಸರ್ಕಾರಿ ಅಭಿಯೋಜಕ ವಿ ಎಂ ಶೀಲವಂತ್‌ ಬಲವಾಗಿ ವಿರೋಧಿಸಿದರು.

ನ್ಯಾಯಾಲಯ ಹೇಳಿದ್ದೇನು?

ಪ್ರತಿ ದೂರನ್ನು ವಿವರವಾಗಿ ಪರಿಶೀಲಿಸಿದ ಪೀಠವು ಮಂತ್ರಿಗಳ ಜೊತೆ ಸಂಪರ್ಕ ಹೊಂದಿರುವ ಆರೋಪಿ ಮಧ್ಯವರ್ತಿ ಎಂದೆನಿಸುತ್ತದೆ. ಆದರೆ, ಕೆಲಸ ಮಾಡಿಸಿಕೊಳ್ಳುವ ಸಂಬಂಧ ಹಣವನ್ನು ಯಾರಿಗೆ ಪಾವತಿಸುತ್ತಿದ್ದೇನೆ ಎಂಬ ಗುಟ್ಟನ್ನು ಆತ ಬಿಟ್ಟುಕೊಟ್ಟಿಲ್ಲ.

Also Read
[ವಕೀಲರ ಧರಣಿ] ನ್ಯಾಯಾಲಯಗಳು ಕಾರ್ಯನಿರ್ವಹಿಸದಿದ್ದರೆ ಸಮಾಜಕ್ಕೆ ಅಪಾರ ಹಾನಿಯಾಗಲಿದೆ: ಕರ್ನಾಟಕ ಹೈಕೋರ್ಟ್‌

“ತನ್ನ ಸ್ವಯಂಪ್ರೇರಿತ ಹೇಳಿಕೆಯಲ್ಲಿ ಆರೋಪಿಯು ಉದ್ಯೋಗ ಕೊಡಿಸಲು ರಾಜಕಾರಣಿಗಳು ಮತ್ತು ಪ್ರಮುಖರಿಗೆ ಹಣ ಪಾವತಿಸಿದ್ದಾಗಿ ಹೇಳಿದ್ದಾನೆ. ಅರ್ಜಿದಾರ ಮಂತ್ರಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಅತ್ಯಂತ ಪ್ರಭಾವಿ ಮಧ್ಯವರ್ತಿ ಎಂದೆನಿಸುತ್ತಿದ್ದು, ಹೀಗಾಗಿ ಸುಖಾಸುಮ್ಮನೆ ರಾಜ್ಯಪಾಲರ ಹುದ್ದೆ, ನಿಗಮ ಮಂಡಳಿಗಳ ಅಧ್ಯಕ್ಷರ ಸ್ಥಾನ ಕೊಡಿಸುವುದಾಗಿ ಭರವಸೆ ನೀಡುತ್ತಿರಲಿಲ್ಲ. ಆದರೆ, ತನ್ನ ಕೆಲಸಗಳನ್ನು ಮಾಡಿಸಿಕೊಳ್ಳಲು ಯಾರಿಗೆ ಹಣ ಪಾವತಿಸುತ್ತಿದ್ದ ಎಂಬುದನ್ನು ಆರೋಪಿಯು ಮುಚ್ಚಿಡುತ್ತಿದ್ದಾನೆ” ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ವಿದ್ಯಾವಂತರು ಮತ್ತು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗೆ ವಂಚಿಸುವ ಮೂಲಕ ಆರೋಪಿಯು ಗಂಭೀರ ಅಪರಾಧ ಎಸಗಿದ್ದಾನೆ ಎಂದು ನ್ಯಾ. ನಟರಾಜನ್‌ ಹೇಳಿದ್ದಾರೆ. ಆರೋಪಿಗೆ ಜಾಮೀನು ನೀಡಿದರೆ ಆತ ಸಾಕ್ಷ್ಯಗಳನ್ನು ತಿರುಚುವ ಮೂಲಕ ಪ್ರಾಸಿಕ್ಯೂಷನ್‌ ಸಾಕ್ಷಿಯ ಮೇಲೆ ಪ್ರಭಾವ ಬೀರುವ ಮೂಲಕ ಮತ್ತದೇ ಪ್ರಮಾದ ಎಸಗುವ ಸಾಧ್ಯತೆ ಇದೆ. ಅಲ್ಲದೆ, ಆರೋಪಿಗೆ ಜಾಮೀನು ನೀಡಿದರೆ ದುಡ್ಡಿದ್ದವರು ಸರ್ಕಾರದಲ್ಲಿ ಯಾವುದೇ ಹುದ್ದೆಯನ್ನು ಖರೀದಿಸಬಹುದು ಎನ್ನುವ ಸಂದೇಶ ಸಮಾಜಕ್ಕೆ ಹೋಗಲಿದೆ ಎಂದ ನ್ಯಾಯಾಲಯವು ಆರೋಪಿ ಯುವರಾಜ್‌ಗೆ ಜಾಮೀನು ನಿರಾಕರಿಸಿದೆ.

Related Stories

No stories found.
Kannada Bar & Bench
kannada.barandbench.com