ವೃದ್ಧಾಶ್ರಮ ಮುಚ್ಚುವಂತೆ ಪಿಐಎಲ್‌; ಪೋಷಕರನ್ನು ಮನೆಯಿಂದ ಹೊರಹಾಕುವುದು ದುರದೃಷ್ಟಕರ ಎಂದ ಕರ್ನಾಟಕ ಹೈಕೋರ್ಟ್‌

“ಸಾವಿನ ಹಾಸಿಗೆಯಲ್ಲಿರುವ ಜನರನ್ನು ಮನೆಯಿಂದ ಕರೆದೊಯ್ದು ವೃದ್ಧಾಶ್ರಮಗಳಿಗೆ ಸೇರಿಸಲಾಗುತ್ತಿರುವುದು ಸಮಾಜದಲ್ಲಿನ ಲೋಪವಾಗಿದೆ,” ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.
Senior Citizens
Senior Citizens (Representative Image)

ವಯೋಸಹಜವಾಗಿ ಸಾವಿನ ಹಾಸಿಗೆ ಹಿಡಿದಿರುವ ಪೋಷಕರನ್ನು ಮಕ್ಕಳು ವೃದ್ಧಾಶ್ರಮಗಳಿಗೆ ಸೇರ್ಪಡೆಗೊಳಿಸುವ ವಿದ್ಯಮಾನ ಹೆಚ್ಚಾಗುತ್ತಿದ್ದು, ಮಕ್ಕಳ ಈ ನಡವಳಿಕೆಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ತೀವ್ರ ಬೇಸರ ವ್ಯಕ್ತಪಡಿಸಿದೆ.

ಈ ಸಾಮಾಜಿಕ ಸಮಸ್ಯೆಯು ಆತಂಕಕಾರಿಯಾಗಿದ್ದು, ನಾವು ದೊಡ್ಡವರಾಗುತ್ತಲೇ ನಮ್ಮ ಪೋಷಕರನ್ನು ಹೊರಹಾಕುವುದು ದುರದೃಷ್ಟಕರ ಬೆಳವಣಿಗೆಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.

“ಸಾವಿನ ಹಾಸಿಗೆಯಲ್ಲಿರುವ ಜನರನ್ನು ಮನೆಯಿಂದಾಚೆಗೆ ಹಾಕಿ ವೃದ್ಧಾಶ್ರಮಗಳಿಗೆ ಸೇರಿಸುತ್ತಿರುವುದು ಸಮಾಜದಲ್ಲಿನ ಲೋಪವಾಗಿದೆ. ಇದೊಂದು ಸಾಮಾಜಿಕ ಸಮಸ್ಯೆಯಾಗಿದ್ದು, ಇದರಿಂದ ನಮಗೆ ಆತಂಕವಾಗುತ್ತಿದೆ” ಎಂದು ನ್ಯಾಯಾಲಯ ಹೇಳಿದೆ. “ನಾವು ದೊಡ್ಡವರಾಗುತ್ತಲೇ ನಮ್ಮ ಪೋಷಕರನ್ನು ಹೊರಹಾಕುವುದು ಅತ್ಯಂತ ದುರದೃಷ್ಟಕರ ಬೆಳವಣಿಗೆ. ಇಂದು ಅದು ನಡೆಯುತ್ತಿದೆ” ಎಂದು ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮ ಅವರನ್ನು ಒಳಗೊಂಡ ಪೀಠ ಹೇಳಿದೆ.

ಬೆಂಗಳೂರಿನಲ್ಲಿರುವ ನವಚೇತನ ವೃದ್ಧಾಶ್ರಮ ಮತ್ತು ಪುನರ್ವಸತಿ ಕೇಂದ್ರವು ಸುತ್ತಲಿನ ಪ್ರದೇಶದಲ್ಲಿ ಆರೋಗ್ಯ ಸಮಸ್ಯೆ ಉಂಟು ಮಾಡುತ್ತಿರುವುದರಿಂದ ಅದನ್ನು ಮುಚ್ಚುವಂತೆ ಕೋರಿ ಪವನ್‌ ಕುಮಾರ್‌ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಪೀಠವು ಬೆಂಗಳೂರು ನಗರ ಜಿಲ್ಲೆಯಲ್ಲಿ ಆರಂಭಿಸಲಾಗಿರುವ ವೃದ್ಧಾಶ್ರಮಗಳ ಕುರಿತಾದ ಮಾಹಿತಿಯನ್ನು ದಾಖಲೆಯಲ್ಲಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

Also Read
ಸರ್ಕಾರಿ ಸೇವೆಯಲ್ಲಿ ತೃತೀಯ ಲಿಂಗಿಗಳಿಗೆ ಸಮತಲ ಮೀಸಲಾತಿ ಕಲ್ಪಿಸುವ ಕುರಿತು ಪರಿಶೀಲಿಸಿ: ಕರ್ನಾಟಕ ಹೈಕೋರ್ಟ್‌

ಶವಗಳನ್ನು ಮೇಲೆ ಹೇಳಲಾದ ವೃದ್ಧಾಶ್ರಮದ ಮುಂದೆ ಇಡುವುದರಿಂದ ತೀವ್ರ ಥರದ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತಿವೆ ಎಂದು ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲ ರಘು ಪ್ರಸಾದ್‌ ಬಿ ಎಸ್‌ ವಾದಿಸಿದರು. ವೃದ್ಧಾಶ್ರಮದಲ್ಲಿರುವ ವೃದ್ಧರು ವಿವಿಧ ನೋವುಗಳಿಂದ ರಾತ್ರಿಯ ವೇಳೆ ನರಳುವುದರಿಂದ ಸುತ್ತಲಿನ ಪ್ರದೇಶದ ನೆಮ್ಮದಿ ಮತ್ತು ಶಾಂತಿಗೆ ಭಂಗವಾಗಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.

ಈ ವಾದವನ್ನು ಒಪ್ಪದ ನ್ಯಾಯಾಲಯವು ವೃದ್ಧಾಶ್ರಮಗಳಿಂದ ಎದುರಾಗುವ ತೊಂದರೆಗಳನ್ನು ಸಹಿಸಿಕೊಳ್ಳಬೇಕು ಎಂದು ಹೇಳಿದ್ದು, ವೃದ್ಧಾಶ್ರಮಗಳನ್ನು ಮುಚ್ಚುವುದರಿಂದ ಅಲ್ಲಿ ನೆಲೆಸಿರುವವರೆಗೆ ತೊಂದರೆಯಾಗಲಿದೆ. ಅಲ್ಲಿ ವಾಸಿಸುವವರ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತದೆ ಎಂದು ತನ್ನ ಆದೇಶದಲ್ಲಿ ನ್ಯಾಯಾಲಯ ಹೇಳಿದೆ. ಪ್ರಕರಣದ ವಿಚಾರಣೆಯನ್ನು ಜನವರಿ 27ಕ್ಕೆ ಮುಂದೂಡಲಾಗಿದೆ.

Related Stories

No stories found.
Kannada Bar & Bench
kannada.barandbench.com