ಹೈಕೋರ್ಟ್‌ನಲ್ಲಿ ಮಾತೃಭಾಷೆಗೆ ಸಹಮತ; ಮಾತೃ ಭಾಷೆ ಬದಲಿಗೆ ರಾಜ್ಯ ಭಾಷೆ ಎಂದಾಗಲಿ: ನ್ಯಾ. ಶ್ರೀನಿವಾಸ್‌ ಹರೀಶ್ ಕುಮಾರ್‌

ನಮ್ಮ ಕಾನೂನನ್ನು ವ್ಯಾಖ್ಯಾನಿಸುವಾಗ, ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ವ್ಯಾಖ್ಯಾನಿಸಬೇಕಿದೆ. ಸಂವಿಧಾನದ ಬಗ್ಗೆ ಏನಾದರೂ ಹೇಳಬೇಕಾದರೆ ಅದು ನಮ್ಮ ಸಂಸ್ಕೃತಿಯ ಮುಖವಾಗಬೇಕು ಎಂದ ನ್ಯಾಯಮೂರ್ತಿಗಳು.
Justice Sreenivas Harish Kumar,
High Court of Karnataka
Justice Sreenivas Harish Kumar, High Court of Karnataka

“ಉಚ್ಚ ನ್ಯಾಯಾಲಯದಲ್ಲಿ ಮಾತೃಭಾಷೆ ಬಳಕೆಯಾಗಬೇಕು ಎಂಬುದಕ್ಕೆ ನನ್ನ ಸಹಮತ ಇದೆ. ಆದರೆ, ಇದರಲ್ಲಿ ಒಂದು ಬದಲಾವಣೆ ಬೇಕು. ಉಚ್ಚ ನ್ಯಾಯಾಲದಲ್ಲಿ ಮಾತೃ ಭಾಷೆ ಎನ್ನುವ ಬದಲಿಗೆ ರಾಜ್ಯ ಭಾಷೆ ಎಂದಾಗಬೇಕು” ಎಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಹೇಳಿದರು.

ಕಲಬುರ್ಗಿಯ ಅಧಿವಕ್ತಾ ಪರಿಷತ್‌ ಕರ್ನಾಟಕ (ಉತ್ತರ) ಭಾನುವಾರ ಆಯೋಜಿಸಿದ್ದ ಪ್ರಥಮ ರಾಜ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

“ಉಚ್ಚ ನ್ಯಾಯಾಲಯದಲ್ಲಿ ಮಾತೃಭಾಷೆ ಎಂಬುದಕ್ಕೆ ನನ್ನ ಸಹಮತ ಇದೆ. ಆದರೆ, ಇದರಲ್ಲಿ ಒಂದು ಬದಲಾವಣೆ ಬೇಕು. ಉಚ್ಚ ನ್ಯಾಯಾಲದಲ್ಲಿ ಮಾತೃ ಭಾಷೆ ಬದಲಿಗೆ ರಾಜ್ಯ ಭಾಷೆ ಎಂದಾಗಬೇಕು. ಕಾರಣವಿಷ್ಟೆ, ನಾವು ಕನ್ನಡ ದೇಶದಲ್ಲಿದ್ದೇವೆ. ಉದಾಹರಣೆಗೆ ಪಕ್ಕದಲ್ಲಿ ಮರಾಠಿ, ತೆಲುಗು, ತಮಿಳು ಇವೆ. ಕರ್ನಾಟಕದಲ್ಲಿ ಇರುವವರ ಎಲ್ಲರ ಮಾತೃ ಭಾಷೆ ಕನ್ನಡವಾಗಿಲ್ಲ. ಮರಾಠಿ, ಹಿಂದಿ, ತೆಲುಗು, ತಮಿಳು ಮಾತನಾಡುವವರು ಇದ್ದಾರೆ. ಮಾತೃ ಭಾಷೆ ಎಂದರೆ ಎಲ್ಲರೂ ಅವರವರ ಭಾಷೆಯಲ್ಲಿ ವಾದ-ವಿವಾದಕ್ಕೆ ಶುರು ಮಾಡಿದರೆ ಯಾರ ಭಾಷೆ ಎಂದು ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ, ಉಚ್ಚ ನ್ಯಾಯಾಲಯದ ಮಟ್ಟದಲ್ಲಿ ಯಾವ ಭಾಷೆ ಬಳಕೆ ಮಾಡಬೇಕು ಎಂಬುದನ್ನು ನಿರ್ಧರಿಸಬೇಕು. ಉದಾಹರಣೆಗೆ ಮಹಾರಾಷ್ಟ್ರದಲ್ಲಿ ಮರಾಠಿ, ತೆಲಂಗಾಣ, ಆಂಧ್ರಪ್ರದೇಶದಲ್ಲಿದಲ್ಲಿ ತೆಲುಗು ಎಂದು ಬದಲಾವಣೆ ಸ್ವಲ್ಪ ಮಾಡಿಕೊಳ್ಳಬೇಕು" ಎಂದರು.

"ಸಂವಿಧಾನದ ಪ್ರಕಾರ ಇಂಗ್ಲಿಷ್‌. ಹಾಗೆಂದು ಇಂಗ್ಲಿಷ್‌ ಬಳಕೆ ಮಾಡಬೇಕು ಎಂದಿಲ್ಲ. ಪ್ರತಿನಿತ್ಯ ನಾವು ಕನ್ನಡ ಬಳಕೆ ಮಾಡುತ್ತೇವೆ. ಸಾಕಷ್ಟು ಮಂದಿ ಕನ್ನಡದಲ್ಲೇ ವಾದ ಮಂಡನೆ ಮಾಡುತ್ತಾರೆ. ಇಂಗ್ಲಿಷ್‌ ಒಂದು ಪೆಡಂಭೂತ. ಅದು ಎಷ್ಟರಮಟ್ಟಿಗೆ ಆವರಿಸಿಕೊಂಡಿದೆ ಎಂದರೆ ಹಲವು ವಕೀಲರಲ್ಲಿ ಅದು ಕೀಳರಿಮೆ ಸೃಷ್ಟಿಸಿದೆ” ಎಂದು ಉದಾಹರಣೆ ಸಹಿತ ವಿವರಿಸಿದರು.

“ಗ್ರಾಮೀಣ ಭಾಗದಲ್ಲಿ ಓದಿದ ವಕೀಲರಿಗೆ ಇಂಗ್ಲಿಷ್‌ ಅಷ್ಟು ಸುಲಭವಾಗಿ ಬರುವುದಿಲ್ಲ. ಉಚ್ಚ ನ್ಯಾಯಾಲಯದಲ್ಲಿ ಮಾತೃ ಭಾಷೆ/ ರಾಜ್ಯ ಭಾಷೆ ಅವಶ್ಯ. ಈ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿಯಾಬೇಕು” ಎಂದು ಸಲಹೆ ನೀಡಿದರು.

ಸಂಸ್ಕೃತಿ, ಆಚಾರ-ವಿಚಾರ ಇಟ್ಟುಕೊಂಡು ಕಾನೂನು ವ್ಯಾಖ್ಯಾನಿಸಿ

“ಇಡೀ ವಿಶ್ವ ನಮ್ಮ ದೇಶದತ್ತ ನೋಡುತ್ತಿದೆ. ನಮ್ಮ ಸಂಸ್ಕೃತಿ, ಆಚಾರ-ವಿಚಾರವು ವಿದೇಶಿಯರಿಗೆ ಆಕರ್ಷಕವಾಗಿ ಕಾಣುತ್ತಿದೆ. ನಾವು ನಮಗಾಗಿ ನಮ್ಮ ಸಂಸ್ಕೃತಿ ಉಳಿಸಿಕೊಳ್ಳಬೇಕು. ಅತ್ತ ಹೆಚ್ಚು ಪ್ರಯತ್ನಿಸಬೇಕು. ನಮ್ಮ ಕಾನೂನನ್ನು ವ್ಯಾಖ್ಯಾನಿಸುವಾಗ, ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ವ್ಯಾಖ್ಯಾನಿಸಬೇಕಿದೆ. ಸಂವಿಧಾನದ ಬಗ್ಗೆ ಏನಾದರೂ ಹೇಳಬೇಕಾದರೆ ಅದು ನಮ್ಮ ಸಂಸ್ಕೃತಿಯ ಮುಖವಾಗಬೇಕು. ಇದನ್ನು ಇಟ್ಟುಕೊಂಡು ಚಿಂತನೆ ಮಾಡುವ ಅಗತ್ಯವಿದೆ” ಎಂದರು.

“ಪುರುಷರಿಗೆ ಹೋಲಿಕೆ ಮಾಡಿದಲ್ಲಿ ಮಹಿಳೆಯು ಅಷ್ಟಾಗಿ ಸಬಲಳಲ್ಲ. ಹೀಗಾಗಿ, ರಕ್ಷಣೆ ನೀಡಬೇಕು ಎಂದು ಹೇಳಲಾಗಿದೆಯೇ ವಿನಾ ಸ್ವಾತಂತ್ರ್ಯವಿಲ್ಲ ಎಂದಲ್ಲ. ಇಂದು ಇರುವ ಕಾನೂನುಗಳು ಹಿಂದೆಯೂ ಇದ್ದವು. ಆದರೆ, ಅವುಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಸಬಲೀಕರಣ ಎಂದು ಹೇಳಬೇಕಾದರೆ ಇಂದು ಇರುವ ಕಾನೂನುಗಳು ದುರ್ಬಳಕೆಯಾಗುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಾನೂನು ಬರುವುದು ರಕ್ಷಣೆಗೆ ಬರುತ್ತದೆಯೇ ವಿನಾ ಮತ್ತೊಬ್ಬರನ್ನು ಶೋಷಣೆ ಮಾಡಲು ಅಲ್ಲ. ಈ ವಿಚಾರವನ್ನು ಇಟ್ಟುಕೊಂಡು ಚರ್ಚೆ ಮಾಡಬೇಕಿದೆ” ಎಂದರು.

“ಸಮಾಜದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದ್ದು, ಕಳವಳಕಾರಿ ಘಟನೆ ಎಂದರೆ ವಿವಾಹ ವಿಚ್ಚೇದನ ಪ್ರಕರಣಗಳು ಹೆಚ್ಚಾಗುತ್ತಿವೆ. 1972ರಲ್ಲಿ ವಕೀಲನಾಗಿ ವೃತ್ತಿ ಆರಂಭಿಸಿದಾಗ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದಲ್ಲಿ ಎರಡೇ ಎರಡು ಕೌಟುಂಬಿಕ ನ್ಯಾಯಾಲಯ ಇದ್ದವು. ಇಂದು ಎಂಟು ಕೌಟುಂಬಿಕ ನ್ಯಾಯಾಲಯ ಇರಬಹುದು. ಇಷ್ಟುಮಾತ್ರವಲ್ಲದೇ ಪ್ರತಿ ಜಿಲ್ಲೆಯಲ್ಲೂ ಕೌಟುಂಬಿಕ ನ್ಯಾಯಾಲಯಗಳು ಇವೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ಸಮಾಜದ ಆರೋಗ್ಯ ಕೆಡುತ್ತಿದೆ ಎಂದೆನಿಸುತ್ತದೆ” ಎಂದು ಸಂಶಯ ವ್ಯಕ್ತಪಡಿಸಿದರು.

“ಅಕ್ಷಕರ ಕಲಿತವರೆಲ್ಲಾ ವಿದ್ಯಾವಂತರಲ್ಲ. ನನ್ನ ಪ್ರಕಾರ ಅಕ್ಷರರಸ್ಥ ಅವಿದ್ಯಾವಂತರು ಇದ್ದಾರೆ. ಇಂಥವರ ಸಂಖ್ಯೆ ಜಾಸ್ತಿಯಾಗಿದೆ. ವಿಚ್ಚೇದನ ಪಡೆಯಲು ಅರ್ಜಿ ಹಾಕುವಂತೆ ಕೋರಿಕೊಂಡು ಬರುವ ಕಕ್ಷಿದಾರರಿಗೆ ವಕೀಲರು ಬೈಯ್ದಾದಾದರೂ ಬುದ್ದಿ ಹೇಳಬೇಕು. ಇಂಥ ವಿಚಾರಗಳನ್ನು ಎತ್ತಿಕೊಂಡು ನ್ಯಾಯಾಲಯಕ್ಕೆ ಹೋಗಬೇಡಿ ಎಂದು ಹೇಳಿ. ಇಲ್ಲಿ ವಕೀಲರ ಸಾಮಾಜಿಕ ಜವಾಬ್ದಾರಿ ಇದೆ” ಎಂದು ಸಲಹೆ ನೀಡಿದರು.

Related Stories

No stories found.
Kannada Bar & Bench
kannada.barandbench.com