ಕೇಂದ್ರಪಟ್ಟಿಯಿಂದ ಸಮವರ್ತಿ ಪಟ್ಟಿಗೆ ಜನಗಣತಿ ವಿಷಯ ಬದಲಿಸಿ: ಪ್ರಧಾನಿ ಮೋದಿಗೆ ಡಿಎಂಕೆ ಸಂಸದ ವಿಲ್ಸನ್‌ ಪತ್ರ

ರಾಜ್ಯಗಳು ತಮ್ಮದೇ ಆದ ಜನಗಣತಿ ನಡೆಸಲು ಸಾಂವಿಧಾನಿಕವಾಗಿ ಸಮರ್ಥವಾಗಿಲ್ಲದ ಕಾರಣ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಕಾನೂನು ಅಡಚಣೆ ಉಂಟಾಗುತ್ತಿದೆ ಎಂದಿದೆ ಪತ್ರ.
Senior Advocate P Wilson
Senior Advocate P Wilson

ಕೇಂದ್ರಪಟ್ಟಿಯಿಂದ ಸಮವರ್ತಿ ಪಟ್ಟಿಗೆ ಜನಗಣತಿ ವಿಷಯ ಬದಲಿಸಬೇಕು. ಇದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಜನಗಣತಿ ನೆಡಸಲು ಒಟ್ಟಿಗೆ ಅಧಿಕಾರ ಪಡೆಯುತ್ತವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಡಿಎಂಕೆ ಸಂಸದ, ಹಿರಿಯ ನ್ಯಾಯವಾದಿ ಪಿ ವಿಲ್ಸನ್ ಪತ್ರ ಬರೆದಿದ್ದಾರೆ.

ಇದರಿಂದ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸ್ಥಳೀಯ ಸಂಸ್ಥೆಗಳಲ್ಲಿ ಕರಾರುವಕ್ಕಾದ ಪಟ್ಟಿ ತಯಾರಿಸಲು ರಾಜ್ಯ ಸರ್ಕಾರಗಳಿಗೆ ಅನುಕೂಲವಾಗುತ್ತದೆ ಎಂದು ವಿಲ್ಸನ್‌ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೆ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಬಹುಕಾಲದ ಬೇಡಿಕೆಯನ್ನು ಪರಿಶೀಲಿಸುವಂತೆಯೂ ಅವರು ಕೋರಿದ್ದಾರೆ.

ಮಾರ್ಚ್ 29, 2022ರಂದು ಸಂಸದರು ರಾಜ್ಯ ಸಭೆಯಲ್ಲಿ ಮಾಡಿದ್ದ ಭಾಷಣದ ಆಶಯದ ಮುಂದುವರಿಕೆಯಾಗಿ ಈ ಪತ್ರ ಬರೆಯಲಾಗಿದೆ.

Also Read
ರಾಜ್ಯವಾರು ಮೀಸಲಾತಿ ಜಾರಿಗೊಳಿಸಲು ಕೋರಿ ಎನ್ಎಲ್‌ಯುಗಳಿಗೆ ಪತ್ರ ಬರೆದ ಡಿಎಂಕೆ ಸಂಸದ ಪಿ ವಿಲ್ಸನ್

ಪತ್ರದ ಪ್ರಮುಖಾಂಶಗಳು

  • ಸುಪ್ರೀಂ ಕೋರ್ಟ್‌ನಿಂದ ಪೂರ್ವಾಪೇಕ್ಷಿತವಾಗಿದ್ದ ʼಪ್ರಾಯೋಗಿಕ ದತ್ತಾಂಶʼ ಕೊರತೆಯಿಂದಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಒಬಿಸಿ ಮೀಸಲಾತಿ ನೀಡಲು ರಾಜ್ಯಗಳು ಎದುರಿಸುತ್ತಿರುವ ಕಾನೂನು ಅಡಚಣೆಯನ್ನು ಇದು ಎತ್ತಿ ತೋರಿಸಿದೆ.

  • ಹಿಂದುಳಿದ ವರ್ಗಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಪತ್ತೆ ಮಾಡಲು ಸ್ಥಳೀಯ ಸಂಸ್ಥೆಗಳಿಗೆ ಅಗತ್ಯ ಮೀಸಲಾತಿ ಪ್ರಮಾಣ ನಿಗದಿಪಡಿಸುವ ಸಂಬಂಧ ಪ್ರತ್ಯೇಕ ಆಯೋಗವನ್ನು ರಚಿಸಬೇಕಿದೆ. ಈ ಪ್ರಕ್ರಿಯೆಗಾಗಿ ಒಬಿಸಿಗಳಿಗೆ ಸಂಬಂಧಿಸಿದ ಜಾತಿಗಣತಿಯ ದತ್ತಾಂಶ ಪಡೆಯುವುದು ಅತ್ಯಗತ್ಯ.

  • ಮಾರ್ಚ್ 2011ರಲ್ಲಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ ಎಲ್ಲಾ ಜಾತಿಗಳ ಜನಗಣತಿಯನ್ನು ಒಳಗೊಂಡಿರುವ ಸಾಮಾಜಿಕ ಆರ್ಥಿಕ ಜಾತಿ ಗಣತಿಯನ್ನು (ಎಸ್‌ಇಸಿಸಿ) ಕೈಗೊಳ್ಳಲು 15ನೇ ಲೋಕಸಭೆ ನಿರ್ಣಯ ಅಂಗೀಕರಿಸಿದ ಬಳಿಕ, ಕೇಂದ್ರ ಸಚಿವ ಸಂಪುಟ ₹ 4893.60 ಕೋಟಿಗಳನ್ನು ಖರ್ಚು ಮಾಡಿತ್ತು. ಆದರೆ ಇದಕ್ಕಾಗಿ ರಚಿಸಲಾದ ಸಮಿತಿ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸದೇ ಜಾತಿ ಗಣತಿ ಇಂದಿಗೂ ಬಿಡುಗಡೆಯಾಗಿಲ್ಲ.

  • ಕೇಂದ್ರ ಸರ್ಕಾರ ಎಸ್‌ಇಸಿಸಿಯಿಂದ ಜಾತಿ ಗಣತಿ ಮಾಹಿತಿ ಪಡೆದಿದ್ದರೂ ನಿಗೂಢ ಕಾರಣಗಳಿಗಾಗಿ ಅದನ್ನು ಇನ್ನೂ ಪ್ರಕಟಿಸಿಲ್ಲ. ಹೊಸದಾಗಿ ಜಾತಿ ಗಣತಿ ಕೈಗೊಳ್ಳಲು ಅದು ನಿರಾಕರಿಸುತ್ತಿದೆ.

  • ಜನಗಣತಿ ಕೇಂದ್ರದ ವಿಷಯವಾಗಿದ್ದು ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳ ಗಣತಿ ಮಾಡಲು ಅಶಕ್ತವಾಗಿವೆ.

  • ಜಾತಿ ಗಣತಿಯನ್ನು ಸಮವರ್ತಿ ಪಟ್ಟಿಗೆ ನೀಡಿದರೆ ಸಂವಿಧಾನದ 342-ಎ(3) ನೇ ವಿಧಿಯ ಅಡಿಯಲ್ಲಿ ಪರಿಗಣಿಸಲಾದ ಹಿಂದುಳಿದ ವರ್ಗಗಳ ನಿಖರವಾದ ಪಟ್ಟಿಯನ್ನು ನಿರ್ವಹಿಸಲು ಮತ್ತು ಪ್ರಾಯೋಗಿಕತೆ ಹೊಂದಲು ಸಹಾಯವಾಗುತ್ತದೆ.

  • ರಾಜ್ಯಗಳು ನಂತರ ಈ ದತ್ತಾಂಶಕ್ಕೆ ಅನುಗುಣವಾಗಿ ಮೀಸಲಾತಿ ನೀಡಬಹುದಾಗಿದೆ. ಜೊತೆಗೆ ಸಾಂವಿಧಾನಿಕ ನ್ಯಾಯಾಲಯಗಳ ಮುಂದೆ ಯಾವುದೇ ಸವಾಲು ಇರುವುದಿಲ್ಲ. ಹಾಗೂ ಕಾನೂನು ಕ್ಷೇತ್ರದ ಕಣ್ಣಾಮುಚ್ಚಾಲೆಯನ್ನು ತಪ್ಪಿಸಬಹುದು. ಇದು ಒಕ್ಕೂಟ ಮತ್ತು ರಾಜ್ಯಗಳೆರಡಕ್ಕೂ ವಿಜಯದ ಸನ್ನಿವೇಶವಾಗಲಿದೆ.

  • ಪ್ರಾಯೋಗಿಕ ದತ್ತಾಂಶದ ಆಧಾರದ ಮೇಲೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಡ್ಡಾಯವಾಗಿ ಒಬಿಸಿ ಮೀಸಲಾತಿ ನೀಡಲು 243 (ಡಿ) (6) ಮತ್ತು 243 (ಟಿ) (6)ಗೆ ಅಗತ್ಯವಾದ ಸಾಂವಿಧಾನಿಕ ತಿದ್ದುಪಡಿಗಳನ್ನು ಏಕಕಾಲದಲ್ಲಿ ತರುವುದು.

  • ಅದು ಮುಗಿಯುವವರೆಗೆ, ಕೇಂದ್ರ ಸರ್ಕಾರ ಸಂಗ್ರಹಿಸಿದ ಜಾತಿ ಗಣತಿ ದತ್ತಾಂಶವನ್ನು ಬಿಡುಗಡೆ ಮಾಡುತ್ತಿರಬೇಕು.

Related Stories

No stories found.
Kannada Bar & Bench
kannada.barandbench.com