
ಧರ್ಮಸ್ಥಳದಲ್ಲಿ ಕೊಲೆಯಾದ ನೂರಾರು ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಡಿ ಅವರ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ವಿಧಿಸಿದ್ದ ನಿರ್ಬಂಧ ಪ್ರಶ್ನಿಸಿ ಥರ್ಡ್ ಐ ಯೂಟ್ಯೂಬ್ ಚಾನೆಲ್ ಸಲ್ಲಿಸಿದ್ದ ಅರ್ಜಿಯನ್ನು ನೇರವಾಗಿ ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ [ಥರ್ಡ್ ಐ ಯೂಟ್ಯೂಬ್ ಚಾನೆಲ್ ವಿರುದ್ಧ ಸೇಯ್ ಹರ್ಷೇಂದ್ರ ಕುಮಾರ್ ಡಿ ಮತ್ತು ಇತರರು].
ಮಾಧ್ಯಮಗಳ ಮೇಲಿನ ನಿರ್ಬಂಧದ ಆದೇಶ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ವಿನೋದ್ ಚಂದ್ರನ್ ಮತ್ತು ಜೊಯಮಲ್ಯ ಬಾಗ್ಚಿ ಅವರ ಪೀಠವು ಈ ವಿಷಯವನ್ನು ಮೊದಲಿಗೆ ಕರ್ನಾಟಕ ಹೈಕೋರ್ಟ್ ಮುಂದಿರಿಸಲು ವಾಹಿನಿಗೆ ಸೂಚಿಸಿತು.
ವಿಚಾರಣೆ ವೇಳೆ, ಥರ್ಡ್ ಐ ಪರ ವಕೀಲರು, "9,000 ವೀಡಿಯೊ ಲಿಂಕ್‌ಗಳನ್ನು ತೆಗೆದುಹಾಕಲು ಹೇಳಲಾಗಿದೆ. ಇದು ಮಾಧ್ಯಮ ನಿರ್ಬಂಧಕ ಆದೇಶ" ಎಂದು ವಾದಿಸಿದರು. ಆಗ ಸಿಜೆಐ ಗವಾಯಿ ಅವರು, "ಮೊದಲು ಹೈಕೋರ್ಟ್‌ಗೆ ಹೋಗಿ, ಆನಂತರ ಇಲ್ಲಿಗೆ ಬನ್ನಿ. ನಮ್ಮ ಹೈಕೋರ್ಟ್‌ಗಳನ್ನು ನಾವು ನಿರುತ್ತೇಜನಗೊಳಿಸಲಾಗದು" ಎಂದರು.
ಹರ್ಷೇಂದ್ರ ಕುಮಾರ್ ಅವರು ತಪ್ಪಾಗಿ ವಿಷಯವನ್ನು ನಿರೂಪಿಸುವ ಮೂಲಕ ಹಾಗೂ ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗದ ಮೂಲಕ ಸೆಷನ್ಸ್ ನ್ಯಾಯಾಲಯದಿಂದ ಮಾಧ್ಯಮಗಳನ್ನು ನಿರ್ಬಂಧಿಸುವ ಆದೇಶ ಪಡೆದಿದ್ದಾರೆ ಎನ್ನುವುದು ಯೂಟ್ಯೂಬ್ ಚಾನೆಲ್‌ನ ವಾದವಾಗಿದೆ.
ಅರ್ಜಿದಾರ ಥರ್ಡ್ ಐ ತನ್ನ ಆಕ್ಷೇಪಣೆಯಲ್ಲಿ, ಪ್ರಭಾವಿ ಧರ್ಮಸ್ಥಳ ದೇವಾಲಯದ ವಿರುದ್ಧ ಕೇಳಿಬಂದಿರುವ ಗಂಭೀರ ಅಪರಾಧಗಳು ಮತ್ತು ಆರೋಪಗಳ ವಿರುದ್ಧ ರಾಜ್ಯ ಸರ್ಕಾರವು ಆದೇಶಿಸಿರುವ ಉನ್ನತ ಮಟ್ಟದ ಕ್ರಿಮಿನಲ್ ತನಿಖೆಗೆ ವಿಚಾರಣಾ ನ್ಯಾಯಾಲಯದ ಆದೇಶ ಅಡ್ಡಿಯಾಗುತ್ತದೆ ಎಂದಿದ್ದಾರೆ. "ಇದು ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ (ವಿಧಿ 19(1)(ಎ)) ಮತ್ತು ಸಹಜ ನ್ಯಾಯತತ್ವ ಮತ್ತು ನ್ಯಾಯಿಕ ಪ್ರಕ್ರಿಯೆಗಳ (ವಿಧಿ 21 ಮೇಲಿನ ನೇರ ದಾಳಿಯಾಗಿದೆ" ಎಂದು ಆರೋಪಿಸಿದ್ದಾರೆ.