ಅಸ್ಸಾಂ ಸಿಎಂ ಹಿಮಂತ್‌ ಬಿಸ್ವಾ ದ್ವೇಷ ಭಾಷಣ ಆರೋಪ: ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

“ಅರ್ಜಿದಾರರು ಹೈಕೋರ್ಟ್‌ಗೆ ಏಕೆ ಅರ್ಜಿ ಸಲ್ಲಿಸಿಲ್ಲ? ಹೈಕೋರ್ಟ್ ಕೂಡ ರಾಜಕೀಯ ಹೋರಾಟದ ವೇದಿಕೆಯಾಗಿ ಬದಲಾಗಿದೆಯೇನು?” ಎಂದು ನ್ಯಾಯಾಲಯ ಕುಟುಕಿತು.
Himanta Biswa Sarma
Himanta Biswa Sarma Facebook
Published on

ಅಸ್ಸಾಂನಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಅಲ್ಲಿನ ಮುಖ್ಯಮಂತ್ರಿ ಹಿಮಂತ್‌ ಬಿಸ್ವ ಶರ್ಮಾ ನೀಡಿರುವ ಹೇಳಿಕೆಗಳ ಕುರಿತು ಕ್ರಮ ಕೈಗೊಳ್ಳುವಂತೆ ಸಲ್ಲಿಸಲಾದ ಅರ್ಜಿಗಳನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.

ಪ್ರಕರಣವನ್ನು ಗುವಾಹಟಿ ಹೈಕೋರ್ಟ್‌ ಆಲಿಸುವುದು ಸೂಕ್ತ ಎಂದು ಸಿಜೆಐ ಸೂರ್ಯಕಾಂತ್‌,  ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿಪುಲ್‌ ಎಂ ಪಂಚೋಲಿ ಅವರಿದ್ದ ಪೀಠ ತಿಳಿಸಿತು. “ಅರ್ಜಿದಾರರು ಹೈಕೋರ್ಟ್‌ಗೆ ಏಕೆ ಅರ್ಜಿ ಸಲ್ಲಿಸಿಲ್ಲ? ಹೈಕೋರ್ಟ್ ಕೂಡ ರಾಜಕೀಯ ಹೋರಾಟದ ವೇದಿಕೆಯಾಗಿ ಬದಲಾಗಿದೆಯೇನು?” ಎಂದು ನ್ಯಾಯಾಲಯ ಕುಟುಕಿತು.

Also Read
'ವಿಧಿ 226ರ ಅಡಿ ಇ ಡಿ ರಿಟ್ ಅರ್ಜಿ ಸಲ್ಲಿಸಬಹುದೇ?' ಕೇರಳ, ತಮಿಳುನಾಡು ತಕರಾರಿನ ಕುರಿತು ವಿಚಾರಣೆ ನಡೆಸಲಿದೆ ಸುಪ್ರೀಂ

ಸಿಪಿಎಂ ಪಕ್ಷ, ಸಿಪಿಎಂ ನಾಯಕಿ ಆನಿ ರಾಜಾ ಹಾಗೂ ಅಸ್ಸಾಂನ ವಿದ್ವಾಂಸ ಹಿರೇನ್‌ ಗೊಹೇನ್‌ ಈ ಸಂಬಂಧ ಅರ್ಜಿಗಳನ್ನು ಸಲ್ಲಿಸಿದ್ದರು.

ಫೆಬ್ರವರಿ 7ರಂದು ಬಿಜೆಪಿ ಅಸ್ಸಾಂ ಘಟಕದ ವಿಡಿಯೋ ಒಂದನ್ನು ಹಂಚಿಕೊಂಡಿತ್ತು. ಅದರಲ್ಲಿ ಮುಖ್ಯಮಂತ್ರಿ ಶರ್ಮಾ ಇಬ್ಬರು ಮುಸ್ಲಿಂ ಪುರುಷರ ಅನಿಮೇಟೆಡ್ ಚಿತ್ರಗಳತ್ತ ಬಂದೂಕಿನಿಂದ ಗುಂಡು ಹಾರಿಸುವ ದೃಶ್ಯವಿತ್ತು, “ದಯೆ ತೋರುವುದಿಲ್ಲ” "ಪಾಯಿಂಟ್‌ ಬ್ಲ್ಯಾಂಕ್‌ ಶಾಟ್" ಮುಂತಾದ ಪದಗಳನ್ನು ಸೇರಿಸಲಾಗಿತ್ತು. ಈ ವಿಡಿಯೋ ಬಗ್ಗೆ ಬಳಿಕ ತೀವ್ರ ಟೀಕೆ ವ್ಯಕ್ತವಾದ ಕಾರಣ ಅದನ್ನು ಬಿಜೆಪಿಯ ಅಧಿಕೃತ ಖಾತೆಯಿಂದ ತೆಗೆದುಹಾಕಲಾಯಿತು. ಆದರೆ ಬೇರೆಡೆಗಳಲ್ಲಿ ಅದು ಇನ್ನೂ ಪ್ರಸರಣಗೊಳ್ಳುತ್ತಿದೆ ಎಂದು ಅರ್ಜಿದಾರರು ದೂರಿದ್ದರು.

ಇದಲ್ಲದೆ ಜನವರಿ 27ರಂದು ಮುಖ್ಯಮಂತ್ರಿ ಶರ್ಮಾ ಮಾಡಿದ ಸಾರ್ವಜನಿಕ ಭಾಷಣದಲ್ಲಿ “ನಾಲ್ಕು–ಐದು ಲಕ್ಷ ಮಿಯಾ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ” ಮತ್ತು “ಬಿಜೆಪಿ ಹಾಗೂ ನಾನು ಮಿಯಾಗಳ ವಿರುದ್ಧವಾಗಿದ್ದೇವೆ” ಎಂದು ಶರ್ಮಾ ಹೇಳಿರುವುದಾಗಿ ಆರೋಪಿಸಲಾಗಿತ್ತು. ಮಿಯಾ ಪದವನ್ನು ಮುಸ್ಲಿಮರ ವಿರುದ್ಧ ಅವಮಾನಕಾರಿ ಅರ್ಥದಲ್ಲಿ ಬಳಸಲಾಗಿದೆ ಎಂಬುದು ಅರ್ಜಿದಾರರ ಆಕ್ಷೇಪವಾಗಿತ್ತು. ಈ ಹಿನ್ನೆಲೆಯಲ್ಲಿ ಅದು ಶರ್ಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

Also Read
ಅನಿಲ್ ಅಂಬಾನಿ-ಆರ್‌ಕಾಮ್‌ ಬ್ಯಾಂಕ್ ವಂಚನೆ ಪ್ರಕರಣ: ತನಿಖೆಯ ಸ್ಥಿತಿಗತಿ ವರದಿ ಕೇಳಿದ ಸುಪ್ರೀಂ

ಹೈಕೋರ್ಟ್‌ಗೆ ಮೊದಲು ಅರ್ಜಿ ಸಲ್ಲಿಸದೆಯೇ ನೇರವಾಗಿ ಸುಪ್ರೀಂ ಕೋರ್ಟ್‌ ಎಡತಾಕಿರುವುದು ಅಡ್ಡಹಾದಿಯಾಗಿದ್ದು ಇದರಿಂದ ಹೈಕೋರ್ಟ್‌ಗಳ ಸಂವಿಧಾನಾತ್ಮಕ ಅಧಿಕಾರ ಕುಗ್ಗುತ್ತದೆ ಎಂದು ಸಿಜೆಐ ಸೂರ್ಯ ಕಾಂತ್‌ ತಿಳಿಸಿದರು. ಪ್ರಕರಣ ಸಂಬಂಧಿತ ಹೈಕೋರ್ಟ್ ವ್ಯಾಪ್ತಿಯಲ್ಲಿರುವುದರಿಂದ ಅದನ್ನು ಅಲ್ಲಿಯೇ ವಿಚಾರಣೆ ನಡೆಸಬೇಕು ಎಂದು ತಿಳಿಸಿದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ ʼಪ್ರಕರಣ ಸಂವಿಧಾನದ ಕಲಂ 14, 15 ಮತ್ತು 21 ಅಡಿಯಲ್ಲಿ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದೆ. ಹೀಗಾಗಿ ಸಂವಿಧಾನದ 32ನೇ ವಿಧಿಯಡಿ ಸುಪ್ರೀಂ ಕೋರ್ಟ್‌ ಹಸ್ತಕ್ಷೇಪ ಮಾಡಬೇಕುʼ ಎಂದು ವಾದಿಸಿದರು. ಆದರೆ ಹೈಕೋರ್ಟ್‌ ಅಧಿಕಾರ ದುರ್ಬಲಗೊಳಿಸುವ ಯತ್ನ ನಡೆಯಬಾರದು ಎಂದ ಪೀಠ ಹೈಕೋರ್ಟ್‌ನಲ್ಲಿಯೇ ಮೊದಲು ಅರ್ಜಿ ಸಲ್ಲಿಸುವಂತೆ ಹೇಳಿತು.

Kannada Bar & Bench
kannada.barandbench.com