ಸಂಸದ ಡಿ ಕೆ ಸುರೇಶ್‌ ಆಪ್ತ ಸಹಾಯಕನಿಂದ ನೋಟು ಬದಲಾವಣೆ: ವಿಚಾರಣಾಧೀನ ನ್ಯಾಯಾಲಯದ ಪ್ರಕ್ರಿಯೆಗೆ ತಡೆ ನೀಡಿದ ಹೈಕೋರ್ಟ್‌

ಪ್ರಧಾನ ಮಂತ್ರಿ ಕಾರ್ಯಾಲಯ ಸ್ವೀಕರಿಸಿದ ದೂರಿನ ಅನುಸಾರ ನೋಟು ಬದಲಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾರ್ಪೋರೇಷನ್‌ ಬ್ಯಾಂಕ್‌ನ ಪ್ರಧಾನ ವ್ಯವಸ್ಥಪಾಕ ಬಿ ಪ್ರಕಾಶ್‌ ಅವರನ್ನು ಪ್ರಕರಣದಲ್ಲಿ ಮೊದಲ ಆರೋಪಿಯನ್ನಾಗಿಸಲಾಗಿದೆ.
Justice M Nagaprasanna and Karnataka HC
Justice M Nagaprasanna and Karnataka HC

ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಸಂಸದ ಡಿ ಕೆ ಸುರೇಶ್ ಆಪ್ತ ಸಹಾಯಕ ಪದ್ಮನಾಭಯ್ಯ ₹ 10 ಲಕ್ಷ ಮೊತ್ತದ ಹಳೆಯ ನೋಟುಗಳನ್ನು ಕಾನೂನು ಬಾಹಿರವಾಗಿ ಬದಲಾವಣೆ ಮಾಡಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ತಡೆ ನೀಡಿದೆ.

ವಿಚಾರಣಾಧೀನ ನ್ಯಾಯಾಲಯದ ಪ್ರಕ್ರಿಯೆ ರದ್ದುಗೊಳಿಸುವಂತೆ ಕೋರಿ ಪ್ರಕರಣದ ಎರಡನೇ ಆರೋಪಿ ನಾಗಮಂಗಲ ತಾಲ್ಲೂಕು ಬೇಗೂರು ಗ್ರಾಮದ ಪದ್ಮನಾಭಯ್ಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎ ಎಸ್‌ ಪೊನ್ನಣ್ಣ ಅವರು “ಅರ್ಜಿದಾರರು ಮುಗ್ಧರಿದ್ದು, ಅವರನ್ನು ವಿನಾಕಾರಣ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಎಫ್‌ಐಆರ್‌ನಲ್ಲಿ ಅರ್ಜಿದಾರರ ಪಾತ್ರದ ಬಗ್ಗೆ ಯಾವುದೇ ವಿವರಣೆ ಇಲ್ಲ. ಅಪರಾಧ ಘಟಿಸಿದೆ ಎನ್ನಲಾದ ದಿನದಿಂದ ನಾಲ್ಕು ತಿಂಗಳ ನಂತರ ಎಫ್‌ಐಆರ್ ದಾಖಲು ಮಾಡಲಾಗಿದೆ. ಈ ವಿಳಂಬಕ್ಕೆ ಕಾರಣ ಉಲ್ಲೇಖಿಸಿಲ್ಲ” ಎಂದರು.

“ಪ್ರಧಾನ ಮಂತ್ರಿ ಕಾರ್ಯಾಲಯ ಸ್ವೀಕರಿಸಿದ ದೂರಿನ ಅನುಸಾರ ನೋಟು ಬದಲಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾರ್ಪೋರೇಷನ್‌ ಬ್ಯಾಂಕ್‌ನ ಪ್ರಧಾನ ವ್ಯವಸ್ಥಪಾಕ ಬಿ ಪ್ರಕಾಶ್‌ ಅವರನ್ನು ಮೊದಲ ಆರೋಪಿಯನ್ನಾಗಿಸಲಾಗಿದೆ. ಒಟ್ಟು ಎಂಟು ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿದ್ದು, ಪದ್ಮನಾಭಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ ಐಪಿಸಿಯ ವಿವಿಧ ಕಲಂಗಳ ಅಡಿ ದಾಖಲಿಸಿರುವ ಆರೋಪಕ್ಕೆ ಯಾವುದೇ ಸಾಕ್ಷ್ಯ ಒದಗಿಸಿಲ್ಲ” ಎಂದು ವಾದಿಸಿದರು.

“ಅರ್ಜಿದಾರರು ಕೆಲವು ವ್ಯಕ್ತಿಗಳ ಜೊತೆ ಫೋನ್‌ನಲ್ಲಿ ಮಾತನಾಡಿರುವ ಸಿಡಿಆರ್ ಅನ್ನೇ ಪ್ರಾಸಿಕ್ಯೂಷನ್‌ ಸಾಕ್ಷ್ಯ ಎಂದು ಹೇಳುತ್ತಿದೆ. ಕಾನೂನುಬಾಹಿರವಾಗಿ ನೋಟು ಬದಲಾಯಿಸುವ ಬಗ್ಗೆ ಅರ್ಜಿದಾರರು ಇತರೆ ಆರೋಪಿಗಳ ಜೊತೆ ಸೇರಿ ಸಂಚು ರೂಪಿಸಿದ್ದಾರೆ ಎಂಬುದಕ್ಕೂ ಸಾಕ್ಷ್ಯ ಒದಗಿಸಿಲ್ಲ. ಇದನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರೂ ಪರಿಗಣಿಸಿಲ್ಲ” ಎಂದರು.

ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌ ಅವರು ಅರ್ಜಿದಾರರ ಕೋರಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಇದನ್ನು ಪರಿಗಣಿಸದ ಪೀಠವು ವಿಚಾರಣಾಧೀನ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿ ವಿಚಾರಣೆಯನ್ನು ಆಗಸ್ಟ್ 10ಕ್ಕೆ ಮುಂದೂಡಿದೆ.

ಸಿಬಿಐ ವಿಶೇಷ ನ್ಯಾಯಾಲಯ ಆರೋಪಿಗಳ ವಿರುದ್ಧ ಐಪಿಸಿ ಕಲಂ 120–ಬಿ, 420, 409, 468, 471 ಮತ್ತು ಭ್ರಷ್ಟಾಚಾರ ನಿಗ್ರಹ ಕಾಯಿದೆ–1988ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ ಆರೋಪ ಪಟ್ಟಿ ಸಲ್ಲಿಸಿದೆ.

Related Stories

No stories found.
Kannada Bar & Bench
kannada.barandbench.com