ಕೆರೆ ಪ್ರದೇಶ ಒತ್ತುವರಿ ಮಾಡಿ ಸಮುದಾಯ ಭವನ, ಸರ್ಕಾರಿ ಶಾಲೆ ನಿರ್ಮಾಣ: ಹೈಕೋರ್ಟ್‌ಗೆ ತಹಶೀಲ್ದಾರ್‌ ಅಫಿಡವಿಟ್‌

ಅಫಿಡವಿಟ್‌ ಪರಿಶೀಲಿಸಿ ಅಭಿಪ್ರಾಯ ತಿಳಿಸಲು ಅರ್ಜಿದಾರಿಗೆ ಎರಡು ವಾರ ಕಾಲಾವಕಾಶ ನೀಡಿ ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಿದ ನ್ಯಾಯಾಲಯ.
Karnataka HC and D K Suresh
Karnataka HC and D K Suresh

ರಾಮನಗರ ಜಿಲ್ಲೆಯ ಕನಕರಪುರ ಗ್ರಾಮದಲ್ಲಿ 10.33 ಗುಂಟೆ ವಿಸ್ತೀರ್ಣದ ಕೆಂಕೇರಮ್ಮ ಕೆರೆ ಪ್ರದೇಶದಲ್ಲಿ ಒಟ್ಟು 4 ಎಕರೆ 37 ಗುಂಟೆ ಜಾಗ ಒತ್ತುವರಿ ಮಾಡಿ, ನಿವೇಶನ ರಚಿಸಿ ಹಂಚಲಾಗಿದೆ ಹಾಗೂ ಸಮುದಾಯ ಭವನ, ಸರ್ಕಾರಿ ಪ್ರಾಥಮಿಕ ಶಾಲೆ ನಿರ್ಮಿಸಲಾಗಿದೆ ಎಂದು ಕನಕಪುರ ತಾಲ್ಲೂಕಿನ ತಹಸೀಲ್ದಾರ್‌ ಕರ್ನಾಟಕ ಹೈಕೋರ್ಟ್‌ಗೆ ವಸ್ತುಸ್ಥಿತಿ ವರದಿ ಸಲ್ಲಿಸಿದ್ದಾರೆ.

ಕೆಂಕೇರಮ್ಮ ಕೆರೆ ಜಾಗದಲ್ಲಿ ಒತ್ತುವರಿ ಮಾಡಲಾಗಿದೆ ಮತ್ತು ಸಂಸದ ಡಿ ಕೆ ಸುರೇಶ್‌ ಬರೆದ ಪತ್ರದ ಮೇರೆಗೆ ಕನಕಪುರ ನಗರಸಭೆಯು ಕೆರೆ ಜಾಗವನ್ನು ಸಮುದಾಯ ಭವನ ನಿರ್ಮಿಸಲು ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯ (ಎಸ್‌ಡಿಬಿ) ಸ್ವಾಧೀನಕ್ಕೆ ನೀಡಿದೆ ಎಂದು ಆಕ್ಷೇಪಿಸಿ ರವಿ ಕುಮಾರ್‌ ಕಂಚನಹಳ್ಳಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಸರ್ಕಾರಿ ವಕೀಲರು, ಹೈಕೋರ್ಟ್‌ ನಿರ್ದೇಶನದ ಮೇರೆಗೆ ಕನಕಪುರ ತಾಲ್ಲೂಕು ತಹಸೀಲ್ದಾರ್‌ ಡಾ.ಸ್ಮಿತಾ ರಾಮು ಅವರು ಕೆರೆ ಜಾಗಕ್ಕೆ ಸಂಬಂಧಿಸಿದ ದಾಖಲೆ ಪರಿಶೀಲಿಸಿ ಅಫಿಡವಿಟ್‌ ರೂಪದಲ್ಲಿ ವಸ್ತುಸ್ಥಿತಿ ವರದಿಯನ್ನು 2023ರ ಡಿಸೆಂಬರ್‌ 19ರಂದು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಆ ಹೇಳಿಕೆ ದಾಖಲಿಸಿಕೊಂಡ ಪೀಠವು ಅಫಿಡವಿಟ್‌ ಪರಿಶೀಲಿಸಿ ಅಭಿಪ್ರಾಯ ತಿಳಿಸಲು ಅರ್ಜಿದಾರಿಗೆ ಎರಡು ವಾರ ಕಾಲಾವಕಾಶ ನೀಡಿ ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಿತು.

ಅಫಿಡವಿಟ್‌ನಲ್ಲಿ ಏನಿದೆ: ಹೈಕೋರ್ಟ್‌ ಸೂಚನೆ ಮೇರೆಗೆ ಕನಕಪುರ ಗ್ರಾಮದ ಸರ್ವೇ ನಂ.21ರಲ್ಲಿನ 10 ಎಕರೆ 33 ಗುಂಟೆ ವಿಸ್ತೀರ್ಣದಲ್ಲಿರುವ ಕೆಂಕೆರಮ್ಮ ಕೆರೆ ಜಾಗದ ಸರ್ವೇ ನಡೆಸಲಾಗಿದೆ. 10.33 ಎಕರೆ ಕೆರೆ ಜಾಗದ ಪೈಕಿ ಸದ್ಯ 5.36 ಎಕರೆ ಜಾಗ ಖಾಲಿಯಿದೆ. ಉಳಿದ ಜಾಗದ ಪೈಕಿ 1.17 ಎಕರೆ ವಿಸ್ತೀರ್ಣದಲ್ಲಿ ಎಸ್‌ಡಿಬಿ ನಿವೇಶನ ರಚಿಸಿ ನಿವೇಶನರಹಿತರಿಗೆ ಹಂಚಿದೆ ಹಾಗೂ 8 ಗುಂಟೆ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಿದೆ. ಈ ನಿವೇಶನದಲ್ಲಿ ವಸತಿ ಮನೆ ನಿರ್ಮಿಸಿ, ಜನ ವಾಸವಾಗಿದ್ದಾರೆ. 3.5 ಗುಂಟೆ ಜಾಗದಲ್ಲಿ ಕೊಲ್ಲಾಪುರದಮ್ಮ ದೇವಸ್ಥಾನದ ತಳಹದಿಯಿದೆ. 28.5 ಗುಂಟೆ ಜಾಗದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ನಿರ್ಮಿಸಲಾಗಿದೆ. 2.10 ಎಕರೆ ಜಾಗದಲ್ಲಿ ಕೆಂಕೇರಮ್ಮ ದೇವಸ್ಥಾನವಿದೆ. 8.5 ಗುಂಟೆಯಲ್ಲಿ ಧರ್ಮರಾಯ ಸ್ವಾಮಿ ಹಾಗೂ ಪಾರ್ವತಮ್ಮ ದೇವಸ್ಥಾನವಿದೆ. 1.5 ಗುಂಟೆ ಜಾಗದಲ್ಲಿ ಶನೈಶ್ವರ ದೇವಸ್ಥಾನವಿದೆ. ಜಾತ್ರೆ ಆಚರಣೆ ವೇಳೆ ಖಾಲಿ ಜಾಗವನ್ನು ತೇರು ಎಳೆಯಲು ಭಕ್ತರು ಬಳಕೆ ಮಾಡುತ್ತಾರೆ. ಉಳಿದ ಸಮಯದಲ್ಲಿ ಶಾಲಾ ಮಕ್ಕಳು ಮೈದಾನವಾಗಿ ಉಪಯೋಗಿಸುತ್ತಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಹಲವು ವರ್ಷಗಳಿಂದಲೇ ಈ 10 ಎಕರೆ 33 ಗುಂಟೆ ಜಾಗವು ಜಲಾನಯನ ಪ್ರದೇಶವಾಗಿ ಉಳಿದಿಲ್ಲ. ಕೆರೆಯ ಗುಣಲಕ್ಷಣ ಕಳೆದುಕೊಂಡಿದೆ. ಇನ್ನೂ ನಿವೇಶನ ರಚಿಸಲು ಹಾಗೂ ಸಮುದಾಯ ಭವನ ನಿರ್ಮಿಸಲು ಎಸ್‌ಡಿಬಿಗೆ, ಶಾಲೆ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಗೆ ಮತ್ತು ಸಂಬಂಧಪಟ್ಟ ದೇವಾಲಯಗಳಿಗೆ ಕೆರೆ ಜಾಗ ಮಂಜೂರು ಮಾಡಿರುವ ಬಗ್ಗೆ ಯಾವುದೇ ದಾಖಲೆಗಳು ಇಲ್ಲ. ಒಟ್ಟಾರೆ ಕೆರೆಗೆ ಸೇರಿದ 4.37 ಎಕರೆ ಜಾಗ ಒತ್ತುವರಿಯಾಗಿದೆ. ಅನಧಿಕೃತವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ. ಸ್ಥಳದ ಹಿರಿಯ ನಾಗರಿಕರು ಹಾಗೂ ಅರ್ಚಕರ ಹೇಳುವಂತೆ ಕೆಂಕೇರಮ್ಮ ದೇವಸ್ಥಾನವು ಅನಾದಿ ಕಾಲದಿಂದಲೂ ಕೆರೆ ಪ್ರದೇಶದಲ್ಲಿದೆ. ಕನಕಪುರ ನಗರಸಭೆಯು 2023ರ ನವೆಂಬರ್‌ 10 ಮತ್ತು 27ರಂದು ತಮಗೆ ಬರೆದ ಪತ್ರದಲ್ಲಿ, ಕೆರೆ ಅದರ ಗುಣಲಕ್ಷಣ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಆ ಜಾಗವನ್ನು ಸುದೀರ್ಘ ಸಮಯದಿಂದಲೂ ಸಾರ್ವಜನಿಕರ ಉಪಯೋಗಕ್ಕೆ ಬಳಸಲಾಗಿದೆ ಎಂಬುದಾಗಿ ತಿಳಿಸಿದೆ. ಕೆರೆ ಜಾಗದ ಒತ್ತುವರಿ ವಿಚಾರದಲ್ಲಿ ಸರ್ಕಾರ ಮುಂದಿನ ಕ್ರಮ ಜರುಗಿಸಬೇಕಿದೆ ಎಂದು ಅಫಿಡವಿಟ್‌ನಲ್ಲಿ ತಹಸೀಲ್ದಾರ್‌ ತಿಳಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com